ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಮ್ಮ ಮೆಟ್ರೋದ ನೇರಳೆ (ಪರ್ಪಲ್) ಮಾರ್ಗದಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಮಂಗಳವಾರ ಸಂಜೆ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದರು. ಪೀಕ್ ಅವರ್ ವೇಳೆಯಲ್ಲೇ ಮೆಟ್ರೋ ಸಂಚಾರ ಅಸ್ತವ್ಯಸ್ತಗೊಂಡ ಪರಿಣಾಮ ಕಚೇರಿಯಿಂದ ಮನೆಗಳಿಗೆ ತೆರಳುತ್ತಿದ್ದ ಐಟಿ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರು ಬಸ್, ಆಟೋ ಮತ್ತು ಕ್ಯಾಬ್‌ಗಳಿಗಾಗಿ ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೇರಳೆ ಮಾರ್ಗದ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಇದರ ಪರಿಣಾಮ ಎಂ.ಜಿ. ರಸ್ತೆ, ಮೆಜೆಸ್ಟಿಕ್, ಕೆಂಗೇರಿ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಯಿತು. ಆಟೋ ಹಾಗೂ ಕ್ಯಾಬ್‌ಗಳಿಗೆ ಬೇಡಿಕೆ ಏರಿದ ಪರಿಣಾಮ ದರಗಳೂ ಹೆಚ್ಚಾದವು.
ಸಾರಿಗೆ ಸೌಲಭ್ಯ ಸಿಗದೆ ಪರದಾಡಿದ ಅನೇಕರು ಕೊನೆಗೆ ಸರಕು ಸಾಗಣೆ ಲಾರಿಗಳು ಮತ್ತು ಗೂಡ್ಸ್ ವಾಹನಗಳಲ್ಲಿ ಮನೆಗಳಿಗೆ ತೆರಳಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಶೇಷವಾಗಿ ನೂರಾರು ಐಟಿ ಉದ್ಯೋಗಿಗಳು ಲಾರಿಗಳ ಹಿಂಭಾಗದಲ್ಲಿ ನಿಂತುಕೊಂಡೇ ಪ್ರಯಾಣಿಸುತ್ತಿರುವ ವಿಡಿಯೋಗಳು ವ್ಯಾಪಕ ಚರ್ಚೆಗೆ ಕಾರಣವಾಗಿವೆ.
Also read: ಸರ್ಚ್ ವಾರಂಟ್ ಪಡೆದು ತಾಲ್ಲೂಕು ಕಚೇರಿಗೆ ಲೋಕಾಯುಕ್ತ ದಾಳಿ
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಕಂಡುಬಂದ ತಾಂತ್ರಿಕ ದೋಷವನ್ನು ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ತಕ್ಷಣ ಸರಿಪಡಿಸಿದ್ದಾಗಿ ತಿಳಿಸಿದೆ. ಬುಧವಾರ (ಜೂನ್ 24) ಬೆಳಗ್ಗೆ 5 ಗಂಟೆಯಿಂದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಎಂದಿನಂತೆ ಪುನರಾರಂಭಗೊಂಡಿದೆ ಎಂದು ಪ್ರಕಟಿಸಿದೆ.
ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ವ್ಯಂಗ್ಯ ವ್ಯಕ್ತಪಡಿಸಿದ್ದು, “ಹೈಪರ್‌ಲೂಪ್, ಕೃತಕ ಬುದ್ಧಿಮತ್ತೆ ಮತ್ತು ಫ್ಲೈಯಿಂಗ್ ಟ್ಯಾಕ್ಸಿಗಳ ಬಗ್ಗೆ ಮಾತನಾಡುವ ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಕೈಕೊಟ್ಟರೆ ಲಾರಿಯೇ ಪರ್ಯಾಯ ಸಾರಿಗೆ” ಎಂದು ಹಲವರು ಟೀಕಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









