ಕಲ್ಪ ಮೀಡಿಯಾ ಹೌಸ್ | ಸಾಗರ |
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಭಾನುವಾರ ಶಿವಮೊಗ್ಗದ ರಾಷ್ಟ್ರಭಕ್ತರ ಬಳಗ, ಪರಿಸರ ಬಳಗ ಹಾಗೂ ಜಿಲ್ಲಾ ರೈತ ಸಂಘದ ಆಶ್ರಯದಲ್ಲಿ ಪೊಲೀಸ್ ಸ್ಟೇಷನ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸುರಿವ ಮಳೆಯ ನಡುವೆಯೂ ಮೂರು ಸಾವಿರಕ್ಕೂ ಹೆಚ್ಚು ಜನರು ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಕೆ.ಎಸ್.ಈಶ್ವರಪ್ಪ, ಶರಾವತಿ ಪಂಪ್ಡ್ ಸ್ಟೋರೇಜ್ ಎಂಬ ಪರಿಸರ ಮಾರಕ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳುವುದರ ಹಿಂದೆ ಕೋಟ್ಯಾಂತರ ರೂಪಾಯಿ ಹಣ ಸಂಪಾದನೆ ಉದ್ದೇಶವಿದೆ. ಸುಮಾರು 18ಸಾವಿರ ಮರಗಳನ್ನು ಕಡಿಯುತ್ತಿದ್ದಾರೆ ಎಂದರೆ ಸದೃಢವಾಗಿರುವ 18ಸಾವಿರ ಮಕ್ಕಳನ್ನು ಕೊಲ್ಲುತ್ತಿದ್ದಾರೆ ಎಂದೇ ನಾವು ಭಾವಿಸಬೇಕು. ಗಿಡ, ಸಸಿ, ಮರಗಳನ್ನು ನಾವು ಮಕ್ಕಳು ಎಂದು ಭಾವಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಯೋಜನೆ ಜಾರಿಗೊಳ್ಳಲು ನಾವು ಬಿಡುವುದಿಲ್ಲ. ಮಾರುತಿ ಗುರೂಜಿಯವರು ತಮ್ಮ ಹೆಣದ ಮೇಲೆ ಯೋಜನೆ ಮಾಡಿ ಎನ್ನುತ್ತಿದ್ದಾರೆ. ಪರಿಸರ ವಿರೋಧಿ ಯೋಜನೆ ವಿರುದ್ದ ನಿಂತಿರುವ ಮಾರುತಿ ಗುರೂಜಿ ಅವರ ಬೆಂಬಲಕ್ಕೆ ನಾವೆಲ್ಲಾ ನಿಂತಿದ್ದು ಯಾವುದೇ ಕಾರಣಕ್ಕೂ ಯೋಜನೆ ಅನುಷ್ಟಾನಕ್ಕೆ ಬಿಡುವುದಿಲ್ಲ ಎಂದರು.
ಇಂಧನ ಸಚಿವ ಜಾರ್ಜ್ ಅವರೇ ನಿಮಗೆ ಹಣ ಮಾಡಲೇಬೇಕು ಎಂದರೆ ಬೇರೆ ಯೋಜನೆ ನೋಡಿ. ಮೂರುವರೇ ಸಾವಿರ ಕೋಟಿಯಿಂದ ಪ್ರಾರಂಭವಾದ ಯೋಜನೆ ಈಗ 15ಸಾವಿರ ಕೋಟಿ ರೂ. ದಾಟಿದೆ. ಮುಂದೆ ಇನ್ನೂ ಹೆಚ್ಚಾದರೂ ಅಚ್ಚರಿಯಿಲ್ಲ. ಹಣ ಲೂಟಿ ಮಾಡಿ, ಮರ ಕಡಿದು, ಸರ್ಕಾರದ ಹಣ ಲೂಟಿ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಯೋಜನೆ ನಿಲ್ಲಿಸಬೇಕು ಎಂದು ಎಲ್ಲಾ ಗುರುಗಳೂ ನಮಗೆ ಬೆಂಬಲ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಯೋಜನೆ ಆಗಲು ರಾಷ್ಟ್ರಭಕ್ತರ ಬಳಗ ಬಿಡುವುದಿಲ್ಲ ಎಂದು ತಿಳಿಸಿದರು.
Also read: ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನ | ಚುನಾವಣಾ ಮಜಲು ಅರಿಯಲು ಸಹಕಾರಿ: ವಿಶ್ವನಾಥ
ಬಂಗಾರಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಮಾತನಾಡಿ, ಲಿಂಗನಮಕ್ಕಿ ಜಲಾಶಯ ಬತ್ತಿ ನಿಂತಿದ್ದು, ನೀರಿಲ್ಲದೆ ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸುವ ಹಂತಕ್ಕೆ ತಲುಪಿದೆ. ಶರಾವತಿ ಕಣಿವೆ ಪ್ರದೇಶದಲ್ಲಿ ಸುಮಾರು 38 ಹೊಸಹೊಸ ಯೋಜನೆ ಅನುಷ್ಟಾನಕ್ಕೆ ಮುಂದಾಗಿರುವ ಮಾಹಿತಿ ಇದೆ. ಒಂದೂವರೆ ಲಕ್ಷ ಮರ ಕಡಿತಲೆ ಬಗ್ಗೆ ಅರಣ್ಯ ಇಲಾಖೆ ತಿಳಿಸುತ್ತಿದೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾದ ಸರ್ಕಾರಗಳು ಇಂತಹ ಯೋಜನೆ ಮೂಲಕ ಭವಿಷ್ಯವನ್ನೇ ನಾಶ ಮಾಡುವತ್ತ ಮುಂದಾಗಿದೆ. ಸೋಲಾರ್ ವಿದ್ಯುತ್‍ನಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, ಪ್ರಯತ್ನ ಮಾಡಿದರೆ ಮೊದಲ ಸ್ಥಾನಕ್ಕೆ ಹೋಗುತ್ತೇವೆ. ಅದನ್ನು ಬಿಟ್ಟು ಪರಿಸರನಾಶ ಮಾಡುವ ಪಂಪ್ಡ್ ಸೋರೇಜ್‍ನಂತಹ ಯೋಜನೆ ಸರ್ಕಾರ ಕೈಬಿಡಬೇಕು. ಯೋಜನೆ ಸಂಪೂರ್ಣವಾಗಿ ಕೈಬಿಡಬೇಕು. ಇಲ್ಲವಾದಲ್ಲಿ ವಿಧಾನಸೌಧ ಮುತ್ತಿಗೆವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಕಾಂತೇಶ್ ಕೆ.ಇ. ಇನ್ನಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








