ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಸರ್ಕಾರದ ಇಂಧನ ಸಚಿವ ಕೆ.ಜೆ. ಜಾರ್ಜ್‍ರವರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಸುಳ್ಳಿನ ಕಂತೆಯಾಗಿದ್ದು, ಕೂಡಲೇ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ನೀಡಿರುವ ತಪ್ಪು ಮಾಹಿತಿಗಳ ಬಗ್ಗೆ ವಿವರಣೆ ನೀಡಬೇಕು ಎಂದು ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1976ರಲ್ಲಿಯೇ ಶೆಫಿವುಲ್ಲಾ ವರದಿಯಲ್ಲಿ ಶರಾವತಿ ಕೊಳ್ಳಕ್ಕೆ ಸಂಬಂಧಿಸಿದಂತೆ ಯಾವುದೇ ಯೋಜನೆ ಮಾಡಬಾರದೆಂದು ವರದಿ ನೀಡಿದ್ದರೂ ತದನಂತರ ಇನ್ನೊಂದು ಸಮಿತಿ ರಚಿಸಿ ಆ ವರದಿಯನ್ನು ಕೂಡ ಬದಿಗಿಟ್ಟು ಸರ್ಕಾರ ಡ್ಯಾಂ ನಿರ್ಮಾಣ ಮಾಡಿತ್ತು. ಈ ಬಗ್ಗೆ ಸಾರ್ವಜನಿಕರೊಬ್ಬರು ಕೋರ್ಟ್‍ನಲ್ಲಿ ದೂರು ದಾಖಲಿಸಿದ್ದರು. ವಿಶೇಷವೆಂದರೆ ದೂರು ದಾಖಲುದಾರ ಮತ್ತು ಅವರ ವಕೀಲರು ಕೂಡ ಅಪಘಾತಕ್ಕೆ ತುತ್ತಾಗಿ ಸಾವಾಗೀಡಾಗಿದ್ದು, ಇನ್ನು ಕೆಲವು ಹೋರಾಟಗಾರರು ಆಕಸ್ಮಿಕ ಮರಣವನ್ನಪ್ಪುತ್ತಾರೆ. ಇದು ಇಂದಿಗೂ ನಿಗೂಢವಾಗಿದೆ. ಕೆಲವೇ ಕೆಲವು ಹಿತಾಸಕ್ತಿಗಳ ಲಾಭಕ್ಕಾಗಿ ಪಶ್ಚಿಮಘಟ್ಟಗಳ ಮೇಲೆ ಪ್ರಹಾರ ನಡೆಸಲಾಗುತ್ತಿದೆ. ಇದು ವಿಶ್ವಪಾರಂಪರಿಕ ತಾಣವೆಂದು ಈಗಾಗಲೇ ಘೋಷಣೆಯಾಗಿದೆ.
120 ಮಿಲಿಯನ್ ವರ್ಷದ ಹಿಂದೆಯೇ ಇದನ್ನು ಗೊಂಡಮಾನ ಅರಣ್ಯಪ್ರದೇಶ ಎಂದು ಕರೆಯುತ್ತಿದ್ದರು. ಇದು ವಿಭಾಗವಾದ ಮೇಲೆ ಇಲ್ಲಿ ಸಿಗುವ ವಿಶೇಷ ಸಸ್ಯ ಸಂಕುಲ ಜೀವಿಗಳು, ಸಸ್ತನಿಗಳು, ಪ್ರಾಣಿ ವೈವಿಧ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವಪಾರಂಪರಿಕ ತಾಣವಾಗಿದೆ. ಇದರ ರಕ್ಷಣೆ ಭಾರತ ಸರ್ಕಾರದ ಕರ್ತವ್ಯವಾಗಿದೆ. ಗಾಡ್‍ಗೀಳ್, ಕಸ್ತೂರಿ ರಂಗನ್ ಕೂಡ ಪಶ್ಚಿಮಘಟ್ಟಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಿದ್ದು ಐಸಿಎಸ್‍ಆರ್‍ಸಿ ಕೂಡ ಸುಪ್ರೀಂಕೋರ್ಟಿಗೆ 600 ಪುಟಗಳ ವರದಿ ನೀಡಿದ್ದು, ಗುಜರಾತ್‍ನಿಂದ ಕೇರಳದ ವರೆಗೆ 1200 ಕಿ.ಮೀ. ಪಶ್ಚಿಮಘಟ್ಟಗಳ ರಕ್ಷಣೆ ಬಗ್ಗೆ ಕರ್ನಾಟಕಕ್ಕೆ ಸೀಮಿತವಾಗಿ 2018ರ ಜೂನ್‍ನಲ್ಲಿ ಮತ್ತೆ ವರದಿಯನ್ನು ನೀಡಲಾಗಿತ್ತು. ಅಧ್ಯಯನಕ್ಕೆ ಒಳಪಡದ ಇನ್ನಷ್ಟು ಪ್ರಾಣಿ, ಪಕ್ಷಿ, ಜೀವಿಗಳ ವೈವಿಧ್ಯಗಳು, ಇಲ್ಲಿ ಇದ್ದು ಈ ಪ್ರದೇಶವನ್ನು ಮುಟ್ಟಿದರೆ ತುಂಬಲಾಗದ ನಷ್ಟ ಎಂದು ವರದಿಯನ್ನು ಸುಪ್ರೀಂಕೋರ್ಟಿಗೆ ನೀಡಿತ್ತು.
ಜಗತ್ತಿನಲ್ಲಿ ಎಲ್ಲೂ ಇಲ್ಲದ ಸಿಂಘಳೀಕ ಸಂರಕ್ಷಣಾ ಅರಣ್ಯ ಪ್ರದೇಶ ಕೂಡ ಇಲ್ಲಿದ್ದು, ಪಶ್ಚಿಮಘಟ್ಟದ ಉತ್ತರದ ತುದಿಯಾದ ಕತ್ತಲೆಕಾನ್ ಮತ್ತು ಗೇರುಸೊಪ್ಪ ಎಂದು ಕರೆಯಲ್ಪಡುವ ಇದನ್ನು ತುಂಡರಿಸುವ ಹಕ್ಕು ಯಾರಿಗೂ ಇಲ್ಲ, ಈಗಾಗಲೇ ಇಲ್ಲಿ 7 ಡ್ಯಾಂಗಳನ್ನು ಮಾಡಲಾಗಿದೆ. ಹಿಂದೆ ಇಂದಿರಾಗಾಂಧಿ ಕಾಲದಲ್ಲಿ ಕೂಡ ಅವರು ಕೆಲವು ಯೋಜನೆಗಳನ್ನು ಆ ಪ್ರದೇಶದಲ್ಲಿ ಶಾಶ್ವತವಾಗಿ ರದ್ದುಮಾಡಿದ್ದರು. ಸಂವಿಧಾನದಂತೆ ನಾವು ಬದುಕಬೇಕು. ಸಸ್ಯಪ್ರಾಣಿಗಳೂ ಬದುಕಬೇಕು. ಮಳೆ ಕಡಿಮೆಯಾಗಬಾರದು. ಮರ ಕಡಿತಲೆಯಾಗಬಾರದು ಎಂದಾದರೆ ಇಲ್ಲಿ ಯಾವುದೇ ಯೋಜನೆ ಬರಬಾರದು. ಕೇಂದ್ರ ಸಚಿವರಿಗೆ ಈಗಾಗಲೇ ಪತ್ರ ಬರೆದಿದ್ದು, ಅವರು ಕೇಂದ್ರದಿಂದ ಒಂದು ಸಮಿತಿ ಕಳುಹಿಸಿ ಆ ಸಮಿತಿ ಕೂಡ ಅಧ್ಯಯನ ಮಾಡಿ 146 ಪುಟದ ವರದಿ ನೀಡಿದೆ
ಲಿಂಗನಮಕ್ಕಿ ಯೋಜನೆಯ ನಿರಾಶ್ರಿತರಿಗೆ ಸರ್ಕಾರವು ಇದೂವರೆಗೆ ಪುನರ್‍ವಸತಿ ಹಾಗೂ ಪರಿಹಾರ ನೀಡಿಲ್ಲ. ಮತ್ತೆ ಹೊಸ ನಿರಾಶ್ರಿತರನ್ನು ಮಾಡಲು ಹೊರಟಿರುವುದು ಪ್ರಶ್ನಾರ್ಥಕ ಎಂದರು.
ಯೋಜನೆಯನ್ನು ವಿರೋಧಿಸಿದೆ. ಆದರೂ ಕೆಪಿಸಿಯವರು ಹಿಂದೆ ನೀಡಿದ ಎಲ್ಲಾ ವರದಿಯನ್ನು ಬದಿಗಿಟ್ಟು ಈ ಯೋಜನೆಗೆ ಅನುಕೂಲ ಮಾಡಿ ವರದಿ ನೀಡಿ ಎಂದು ಎನ್‍ಐಎಎಸ್‍ಗೆ ಪತ್ರ ಬರೆಯುತ್ತಾರೆ. ಕೋರ್ಟಿನಲ್ಲಿ ಕೇಸು ಇದ್ದರೂ ಕೂಡ ಈ ಭಾಗದಲ್ಲಿ ವೈಮಾನಿಕ ಸಮೀಕ್ಷೆ ಸ್ಥಳೀಯರಿಗೆ ಹಣದ ಆಮಿಷ, ಹೋರಾಟಗಾರರಿಗೆ ಬೆದರಿಕೆ, ಒಡೆದು ಆಳುವ ನೀತಿ ಎಲ್ಲವನ್ನೂ ಮಾಡುತ್ತಿದ್ದು, ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನನಗೂ ಕೂಡ ಜೀವಬೆದರಿಕೆ ಬಂದಿದೆ. ಸುಳ್ಳುಕೇಸು ದಾಖಲಿಸಿದ್ದಾರೆ. ನಾನು ಜಗ್ಗುವುದಿಲ್ಲ. ಯೋಜನೆ ಮಾಡುವುದಿದ್ದರೆ ನನ್ನ ಎದೆ ಮೇಲೆ ಮಾಡಿ ಎಂದಿದ್ದೇನೆ. ಸಚಿವ ಜಾರ್ಜ್‍ರವರು ಗುರುಗಳಿಗೆ ಮನವರಿಕೆ ಮಾಡುತ್ತೇವೆ ಎಂದಿದ್ದಾರೆ. ಇದು ತಂತ್ರಗಾರಿಕೆಯ ಒಂದು ಭಾಗ. ನೀವು ಸಾರ್ವಜನಿಕವಾಗಿ ಬನ್ನಿ ಮುಕ್ತಚರ್ಚೆ ಮಾಡೋಣ. ಎರಡೂವರೆ ಸಾವಿರ ಯೂನಿಟ್ ವಿದ್ಯುತ್ತನ್ನು ಖರ್ಚುಮಾಡಿ 2000 ಯೂನಿಟ್ ವಿದ್ಯುತ್ ಉತ್ಪಾದಿಸುವ ಈ ಯೋಜನೆ ಯಾವುದೇ ಕಾರಣಕ್ಕೂ ಬೇಡ. ಬ್ಯಾಟರಿ, ಸೋಲಾರ್ ಮತ್ತು ವಿಂಡ್‍ವ್ಹೀಲ್ ಯೋಜನೆಗಳಿಂದ ಪರ್ಯಾಯ ವಿದ್ಯುತ್ ಉತ್ಪಾದನೆ ಸಾಧ್ಯ. ಈ ಅವೈಜ್ಞಾನಿಕ ಯೋಜನೆಯನ್ನು ಕೈಬಿಡಿ ಎಂದರು. ಕುರುಡು ಕಾಂಚಾಣಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ನೀವು ಇಲ್ಲಿ ಈ ಯೋಜನೆಯಿಂದ ಉತ್ಪಾದಿಸುವ ವಿದ್ಯುತ್ತನ್ನು ಎಲ್ಲಿಗೆ ಕೊಡುತ್ತೀರಿ. ಈಗಾಗಲೇ ಡಿ.ಕೆ.ಶಿವಕುಮಾರ್ ಉತ್ಪಾದಿಸಿದ ಸೋಲಾರ್ ವಿದ್ಯುತ್ತನ್ನು ಎಷ್ಟು ಹಣಕ್ಕೆ ಖರೀದಿಸುತ್ತೀರಿ ಮತ್ತು ಸಾರ್ವಜನಿಕರು ಉತ್ಪಾದಿಸುವ ಸೋಲಾರ್ ವಿದ್ಯುತ್ತಿಗೆ ಏಕೆ ಕಡಿಮೆ ಹಣ ನೀಡುತ್ತೀರಿ ಎಂದು ಉತ್ತರಿಸಬೇಕು. ಈ ಜಾಗದಲ್ಲಿ ಪಾರಂಪರಿಕ ಚತುರ್ಮುಖ ಬಸದಿ ಇದ್ದು, ಪ್ರಾಚ್ಯವಸ್ತು ಇಲಾಖೆಯ ಅನುಮತಿಯನ್ನೇ ಪಡೆದಿಲ್ಲ. ಹೈದ್ರಾಬಾದ್ ಮೂಲದ ಮೆಗಾ ಇಂಜಿನೀಯರಿಂಗ್ ಕಂಪನಿ ಇದರ ಗುತ್ತಿಗೆ ಪಡೆದಿದ್ದು, ಸಚಿವರು ಹೇಳಿದಂತೆ ನಿಯಮಾವಳಿಯನ್ನು ಪಾಲಿಸುವುದಾದರೆ ಈ ವೈಮಾನಿಕ ಸಮೀಕ್ಷೆ ಮತ್ತು ಒಕ್ಕಲೆಬ್ಬಿಸುವ ಪ್ರಕ್ರಿಯೆ, ಅಣೆಕಟ್ಟಿನ ನಿರ್ಮಾಣ, ರಸ್ತೆಗಳ ನಿರ್ಮಾಣಕಾರ್ಯ ಪ್ರಾರಂಭವಾಗಿರುವುದು ಏಕೆ ಎಂದು ಸ್ಪಷ್ಟೀಕರಣ ನೀಡಬೇಕೆಂದು ಒತ್ತಾಯಿಸಿದರು.
Also read: ಶಿವಮೊಗ್ಗ | ಜುಲೈ 5ರವರೆಗೆ ಹಲಸು – ಮಾವು ಮೇಳ
ರಾಷ್ಟ್ರಭಕ್ತರ ಬಳಗದ ಶ್ರೀಕಾಂತ್ ಮಾತನಾಡಿ, ಇದೊಂದು ಅವೈಜ್ಞಾನಿಕ ಯೋಜನೆ. ಸಚಿವರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಸಾರ್ವಜನಿಕ ಚರ್ಚೆಗೆ ಬರಬೇಕು. ಜನರಿಗೆ ಸುಳ್ಳುಮಾಹಿತಿ ನೀಡಬಾರದು. ಈ ಯೋಜನೆಯಿಂದ 18 ಸಾವಿರ ಟನ್ ವಿಸ್ಫೋಟಕಗಳ ಬಳಕೆಯಿಂದ ಈ ಪ್ರದೇಶವು ಭೂಕುಸಿತ ಹಾಗೂ ಭೂಕಂಪ ಪೀಡಿತ ಪ್ರದೇಶವಾಗಿ ಮಾರ್ಪಡಲಿದೆ ಎಂದು ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಅಧಿಕಾರಿ ವರದಿ ನೀಡಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಕೆಪಿಸಿಯವರು ಕೇವಲ 16 ಸಾವಿರ ಮರಗಳ ನಾಶದ ಬಗ್ಗೆ ಒಪ್ಪಿಕೊಂಡಿದ್ದು, ಈ ಮರಗಳ ಮಾರುಕಟ್ಟೆಯ ಮೌಲ್ಯ ಸುಪ್ರೀಂಕೋರ್ಟ್ ನಿರ್ದೇಶನದಂತೆ 1,35,000 ಕೋಟಿ ರೂ.ಗಳಾಗಲಿದ್ದು ಸಚಿವರು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಯಾವುದೇ ಅನುಮತಿ ದೊರೆಯದಿದ್ದರೂ 10,500 ಕೋಟಿ ರೂ. ಟೆಂಡರನ್ನು ತರಾತುರಿಯಲ್ಲಿ ಕರೆದಿದ್ದು, ರೈತರನ್ನು ಮತ್ತು ಸಾರ್ವಜನಿಕರನ್ನು ಒಕ್ಕಲೆಬ್ಬಿಸುವ ಬಗ್ಗೆ ಅಧಿಕಾರಿಗಳು ಉತ್ತರಿಸಬೇಕು ಎಂದರು.
ಪರಿಸರ ತಜ್ಞ ಡಾ.ಶ್ರೀಪತಿ ಮಾತನಾಡಿ, ಇದು ಕೇವಲ 25 ಎಕರೆ ಭೂಮಿಯಲ್ಲಿ ಮಾಡುವ ಯೋಜನೆಯಲ್ಲ, 153 ಹೆಕ್ಟೇರ್ ಭೂಮಿ ಬೇಕು ಎಂದು ಈಗಾಗಲೇ ಅರಣ್ಯ ಇಲಾಖೆಗೆ ಕೆಪಿಸಿಎಲ್ ಸ್ಪಷ್ಟವಾಗಿ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೆ ಇದರ ನಿರ್ವಹಣೆಗೆ ಪ್ರತಿವರ್ಷ 1750 ಕೋಟಿ ರೂ. ಹಣ ಬೇಕಾಗುತ್ತದೆ. ಇದರ ವಿದ್ಯುತ್ ಸಾಗಾಣಿಕೆಗೆ 600 ಹೆಕ್ಟೇರ್‍ಗೂ ಹೆಚ್ಚುವರಿ ಭೂಮಿ ಬೇಕಾಗುತ್ತದೆ ಎಂದರು.
ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್ ಮಾತನಾಡಿ, 120ಕ್ಕೂ ಹೆಚ್ಚು ಬಸ್ಸುಗಳಲ್ಲಿ ಪರಿಸರ ಹೋರಾಟಗಾರರು ಮಳೆಯನ್ನೂ ಲೆಕ್ಕಿಸದೇ ಭಾಗವಹಿಸಿ ಸರ್ಕಾರದ ಗಮನ ಸೆಳೆದರೂ ಸಚಿವರು ಹಾರಿಕೆಯ ಉತ್ತರ ನೀಡಿದ್ದಾರೆ. ನಮ್ಮ ಬೇಡಿಕೆ ಏನೆಂದರೆ ದಯವಿಟ್ಟು ಶಿವಮೊಗ್ಗ ಜಿಲ್ಲೆಗೆ ಬನ್ನಿ ಇಲ್ಲಿನ ಪರಿಸರ ವಾದಿಗಳ, ಸಾಧು-ಸಂತರ, ಪರಿಸರ ವಿಜ್ಞಾನಿಗಳ ಸಲಹೆ ಪಡೆಯಿರಿ. ನಾವು ಈ ಜಿಲ್ಲೆಯಲ್ಲಿ ಈ ಯೋಜನೆಯ ಮಾಡಲು ಬಿಡುವುದಿಲ್ಲ. ಒಂದೇ ಒಂದು ಮರ ಕಡಿಯಲು ಬಿಡುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗ, ಮತ್ತು ಪರಿಸರಕ್ಕಾಗಿ ನಾವು ಸಂಘಟನೆಯ ಮಹಾದೇವ ಸ್ವಾಮಿ, ವಿ.ರಾಜು, ಜನಾರ್ಧನ್ ಪೈ, ದಿಲೀಪ್‍ನಾಡಿಗ್, ಸುಬ್ಬಣ್ಣ, ರಂಜನ್, ರವಿಪ್ರಸಾದ್, ಅರುಣ್, ವಿಶ್ವೇಶ್ವರಯ್ಯ, ಸುಬ್ರಹ್ಮಣ್ಯ, ಪ್ರಕಾಶ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







