ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗರ್ತಿಕೆರೆ ಸಮೀಪದ ಸುಣ್ಣದಬಸ್ತಿ ಬಳಿ ತಾರಿಗ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ನಡೆದ ದುರ್ಘಟನೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಒಣ ಮರದ ರೆಂಬೆ ಬಿದ್ದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಚೋರಡಿ ಗ್ರಾಮದ ಮೂಲದ ಸಂತೋಷ್ (26), ತಂದೆ ಬೊಮ್ಮಣ್ಣ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ವೀರಭದ್ರ, ತಂದೆ ರಾಮಪ್ಪ, ಚೋರಡಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮೀನು ಹಿಡಿಯಲು ಅಗತ್ಯವಾದ ಉಕ್ಕಡವನ್ನು ಬೈಕ್‌ನಲ್ಲಿ ಹೊತ್ತುಕೊಂಡು ಚೋರಡಿಯಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ತಾರಿಗ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಸುಮಾರು 50 ಅಡಿ ಎತ್ತರದಲ್ಲಿದ್ದ ಒಣ ಮರದ ರೆಂಬೆ ಏಕಾಏಕಿ ಬೈಕ್ ಮೇಲೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರೆಂಬೆ ಬಿದ್ದ ರಭಸಕ್ಕೆ ಬೈಕ್ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ.
ಮೃತ ಸಂತೋಷ್ ಅವರ ಮೃತದೇಹವನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









