ಕಲ್ಪ ಮೀಡಿಯಾ ಹೌಸ್ | ಕೊಲ್ಲೂರು |
ಪ್ರಸಿದ್ಧ ಕೊಲ್ಲೂರು (Kollur) ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಉಡುಪಿ ಜಿಲ್ಲಾ ಪೊಲೀಸರು ಚುರುಕಾಗಿ ತನಿಖೆ ನಡೆಸಿ ಕೇವಲ 24 ಗಂಟೆಗಳಲ್ಲಿ ಭೇದಿಸಿರುವ ಘಟನೆ ಗಮನಾರ್ಹವಾಗಿದೆ.
ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ 80 ಸಾವಿರ ರೂಪಾಯಿ ನಗದು ಕಳವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ (Bhadravathi) ಮೂಲದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನೇತ್ರಾವತಿ (33), ಶಾರದ (50) ಹಾಗೂ ದುರ್ಗಮ್ಮ (44) ಎಂದು ಗುರುತಿಸಲಾಗಿದೆ. ಜುಲೈ 5ರಂದು ನಿಮಿಶಾ ಮತ್ತು ಅವರ ಪತಿ ಪ್ರಜೋಶ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಬೆಳಿಗ್ಗೆ ಸುಮಾರು 8.20ರ ವೇಳೆಗೆ ದರ್ಶನ ಮುಗಿಸಿ ದೇವಸ್ಥಾನದ ಹೊರಾಂಗಣಕ್ಕೆ ಬಂದಾಗ, ನಿಮಿಶಾ ಅವರ ಕಂದು ಬಣ್ಣದ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡ ಅವರು ಬ್ಯಾಗ್ ಪರಿಶೀಲಿಸಿದಾಗ ಅದರೊಳಗಿದ್ದ 80 ಸಾವಿರ ರೂಪಾಯಿ ನಗದು ಹೊಂದಿದ್ದ ಪರ್ಸ್ ಕಾಣೆಯಾಗಿರುವುದು ಪತ್ತೆಯಾಗಿದೆ. ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಕೊಲ್ಲೂರು ಪೊಲೀಸರ ತನಿಖೆ
ದೂರು ಸ್ವೀಕರಿಸಿದ ಕೊಲ್ಲೂರು ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿದರು.
ಎಸ್‌ಐ ವಿನಯ್ ಎಂ. ಕೊರ್ಲಹಳ್ಳಿ ನೇತೃತ್ವದ ತಂಡ ದೇವಸ್ಥಾನ ಪರಿಸರದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅಲ್ಲಿದ್ದ ಭಕ್ತರು ತೆಗೆದಿದ್ದ ಫೋಟೋಗಳನ್ನೂ ಸಂಗ್ರಹಿಸಿ ತಾಂತ್ರಿಕ ಮಾಹಿತಿಗಳನ್ನು ಒಗ್ಗೂಡಿಸಿತು.
ತನಿಖೆಯ ಭಾಗವಾಗಿ ಸಂಗ್ರಹಿಸಿದ ಮಾಹಿತಿಗಳ ಆಧಾರದಲ್ಲಿ ಅನುಮಾನಾಸ್ಪದ ಚಲನವಲನಗಳನ್ನು ಗುರುತಿಸಿ, ಕೇವಲ 24 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಯಿತು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸರ ತನಿಖೆಯಲ್ಲಿ ಬಂಧಿತ ಮಹಿಳೆಯರ ಕ್ರಿಮಿನಲ್ ಹಿನ್ನೆಲೆಯೂ ಬಹಿರಂಗವಾಗಿದೆ. ಆರೋಪಿ ದುರ್ಗಮ್ಮ ವಿರುದ್ಧ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆ ಹಾಗೂ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಕಳವು ಪ್ರಕರಣ ದಾಖಲಾಗಿವೆ.
ಮತ್ತೊಬ್ಬ ಆರೋಪಿ ಶಾರದಳ ವಿರುದ್ಧ ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎರಡು ಮತ್ತು ಮೈಸೂರಿನ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಒಂದು ಸೇರಿದಂತೆ ಒಟ್ಟು ಮೂರು ಕಳವು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಈ ಕಾರ್ಯಾಚರಣೆಯಲ್ಲಿ ತನಿಖಾಧಿಕಾರಿ ಪಿಎಸ್‌ಐ ಭೀಮಶಂಕರ್, ಹೆಡ್ ಕಾನ್ಸ್‌ಟೇಬಲ್ ರತ್ನಾಕರ, ಪೊಲೀಸ್ ಕಾನ್ಸ್‌ಟೇಬಲ್ ಸಂತೋಷ್, ಕುಂದಾಪುರ ಠಾಣೆಯ ಸಿಬ್ಬಂದಿ ಘನಶ್ಯಾಮ್, ಪದ್ಮಾವತಿ ಹಾಗೂ ಬೈಂದೂರು ಠಾಣೆಯ ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
Also read: Shivamogga: ಜೋಗದಲ್ಲಿ ಜಲ ವೈಭವ, ಪ್ರವಾಸಿಗರು ಪಿಧಾ
ಉಡುಪಿ ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ದೇವಸ್ಥಾನ ಪರಿಸರದಲ್ಲಿ ನಡೆದ ಕಳವು ಪ್ರಕರಣಕ್ಕೆ ಶೀಘ್ರದಲ್ಲೇ ತೆರೆಬಿದ್ದಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








