ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರವೇ ಪ್ರಮುಖ ಆಧಾರವಾಗಿದೆ. ಹಿತವಾದ ಆಹಾರ ಸೇವನೆ, ಮಿತ ಪ್ರಮಾಣದ ಊಟ ಹಾಗೂ ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದು ಆರೋಗ್ಯಕರ ಜೀವನದ ಮೂಲ ಸೂತ್ರಗಳಾಗಿವೆ. ಇಷ್ಟವಾದ್ದನ್ನು ತಿನ್ನುವುದಲ್ಲ, ಒಳ್ಳೆಯದನ್ನು ತಿನ್ನಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋಕರ್ಣದಲ್ಲಿ (Gokarna) ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಪ್ರವಚನ ಸರಣಿಯ ಆಶೀರ್ವಚನ ನೀಡಿದರು.
ಮಿತಿ ಮೀರಿದ ಸೊಪ್ಪು~ ತರಕಾರಿಗಳು ಹಲವು ರೋಗಗಳಿಗೆ ಮೂಲ. ಹೆಚ್ಚಿನ ಪ್ರಮಾಣದ ಸೊಪ್ಪು ~ ತರಕಾರಿಗಳ ಸೇವನೆ ಕಣ್ಣು , ಮೂಳೆಗಳ ಸಮಸ್ಯೆ ಹಾಗೂ ಮಂದಬುದ್ಧಿಗೆ ಕಾರಣ ಎಂದು ಆಯುರ್ವೇದ ಹೇಳಿದೆ.
-ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
ಆಯುರ್ವೇದದ ಪ್ರಸಿದ್ಧ ವೈದ್ಯ ವಾಗ್ಭಟ ಮತ್ತು ಆರೋಗ್ಯದ ಅಧಿದೇವತೆ ಧನ್ವಂತರಿ ಕುರಿತ ಪ್ರಸಂಗವನ್ನು ಉಲ್ಲೇಖಿಸಿ, ‘ಯಾರು ರೋಗರಹಿತರು?ʼ ಎಂಬ ಪಕ್ಷಿ ರೂಪದ ಧನ್ವಂತರಿಯ ಪ್ರಶ್ನೆಗೆ ವಾಗ್ಭಟರು ‘ಹಿತಭುಕ್, ಮಿತಭುಕ್, ಅಶಾಕಭುಕ್ʼ ಎಂಬ ಮೂರು ಪದಗಳಲ್ಲೇ ಉತ್ತರ ನೀಡಿರುವುದನ್ನು ವಿವರಿಸಿದರು. ‘ಹಿತಭುಕ್ ಎಂದರೆ ದೇಹಕ್ಕೆ ಹಿತವಾದ ಆಹಾರವನ್ನು ಆಯ್ಕೆ ಮಾಡಿಕೊಂಡು ಸೇವಿಸುವವನು, ಮಿತಭುಕ್ ಎಂದರೆ ಅಗತ್ಯ ಪ್ರಮಾಣದಲ್ಲಿ ಮಾತ್ರ ಆಹಾರ ಸೇವಿಸುವವನು, ಅಶಾಕಭುಕ್ ಎಂದರೆ ಅತಿಯಾಗಿ ಸೊಪ್ಪು – ತರಕಾರಿಗಳನ್ನು ತಿನ್ನದವನುʼ ಎಂದು ತಿಳಿಸಿದರು.
ಇತ್ತೀಚೆಗೆ ಮುಂಜಾನೆ ಪ್ರಯಾಣಮಾಡುವಾಗ ಬೆಳಗ್ಗೆ 4 ಗಂಟೆಗೇ ಹೋಟೆಲ್’ಗಳ ಮುಂದೆ ಜನ ಸೇರಿರುವುದು ಗಮನಕ್ಕೆ ಬಂತು. ಸೂರ್ಯೋದಯಕ್ಕೂ ಮೊದಲೇ ಆಹಾರವನ್ನು ತಿನ್ನುವ ಕ್ರಮ ಮಹಾ ನಗರದ ಯುವ ಸಮೂಹದಲ್ಲಿ ಕಂಡುಬರುತ್ತಿದೆ. ಇದು ಸರಿಯಾದ ಪ್ರವೃತ್ತಿಯಲ್ಲ. ಈ ಸಮಯದಲ್ಲಿ ಅಮೃತವನ್ನೇ ತಿಂದರೂ ಅದು ದೇಹಕ್ಕೆ ವಿಷಮಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂದು ಊಟವನ್ನು ಕ್ಯಾಲೋರಿಗಳಲ್ಲಿ ಅಳೆದು ತಿನ್ನುವ ಕ್ರಮ ಜನಪ್ರಿಯವಾಗುತ್ತಿದೆ. ಆದರೆ ಸರಿಯಾದ ಸಮಯ ಹಾಗೂ ಕ್ರಮದಲ್ಲಿ ಆಹಾರವನ್ನು ಸೇವಿಸುವ ಪದ್ಧತಿಯನ್ನು ಬೆಳಸಿಕೊಂಡರೆ, ಹೊಟ್ಟೆಯೇ ನಮಗೆ ಎಷ್ಟು ತಿನ್ನಬೇಕು ಎಂಬ ಸೂಚನೆಯನ್ನು ಕೊಡುತ್ತದೆ. ಆಹಾರವು ಕೇವಲ ಹೊಟ್ಟೆ ತುಂಬಿಸುವ ಸಾಧನವಲ್ಲ, ಅದು ದೇಹ, ಮನಸ್ಸು ಮತ್ತು ಆರೋಗ್ಯವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ಜೀರ್ಣವಾಗದೇ ದೇಹದಲ್ಲಿ ಉಳಿಯುವ ಆಹಾರಕ್ಕೆ ಆಯುರ್ವೇದದಲ್ಲಿ ‘ಆಮ’ ಎಂದು ಹೇಳಲಾಗಿದೆ. ಜೀರ್ಣವಾಗದ ಆಹಾರವೇ ಅನೇಕ ರೋಗಗಳ ಮೂಲʼ ಎಂದು ಎಚ್ಚರಿಕೆ ನೀಡಿದರು.
Also Read>> ಬೆಂಗಳೂರು: ಆಗಸ್ಟ್ 1ರಿಂದ ‘ಶ್ರೀ ಜಯತೀರ್ಥರ ಜೀವನ ಮತ್ತು ಸಾಧನೆ’ ಪ್ರವಚನ
ಗಣ್ಯವ್ಯಕ್ತಿಗಳನ್ನು ಸಂದರ್ಶಿಸುವಾಗ ‘ಮೆಟಲ್ ಡಿಟೆಕ್ಟರ್’ ನಿಂದ ಪರಿಶೀಲಿಸಿ, ಆನಂತರ ಅವರ ಬಳಿಹೋಗಲು ಅವಕಾಶ ನೀಡಲಾಗುತ್ತದೆ. ಹಾಗೆಯೇ ನಮ್ಮ ದೇಹ ಎಂಬ ಗಣ್ಯವ್ಯಕ್ತಿಗೆ ಆಹಾರವನ್ನು ನೀಡುವ ಮೊದಲು ಸಮರ್ಪಕವಾಗಿ ಪರಿಶೀಲಿಸಿ, ಏನನ್ನು ತಿನ್ನುತ್ತಿದ್ದೇವೆ? ಹೇಗೆ ತಿನ್ನುತ್ತಿದ್ದೇವೆ? ಯಾವಾಗ ತಿನ್ನುತ್ತಿದ್ದೇವೆ? ಎಂಬ ಪ್ರಶ್ನೆಗಳನ್ನು ಕೇಳಿಕೊಂಡ ನಂತರವಷ್ಟೇ ಆಹಾರವನ್ನು ತಿನ್ನಬೇಕು ಎಂದು ಕಿವಿಮಾತು ಹೇಳಿದರು.
ರಾಮಚಂದ್ರ ಭಟ್ ದಂಪತಿಗಳು ಶ್ರೀಪರಿವಾರದ ಪರವಾಗಿ ಭಿಕ್ಷಾಸೇವೆ ಸಮರ್ಪಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಮಠದ ಶಾಸ್ತ್ರಿಗಳಾದ ವೇ.ಮೂ ಸುಬ್ರಾಯ್ ಭಟ್ ಅಗ್ನಿಹೋತ್ರಿ, ವೇ.ಮೂ ಮಂಜುನಾಥ ಶಾಸ್ತ್ರೀ, ಶ್ರೀಚರಣ ವಿಭಾಗದ ಶ್ರೀಸಂಯೋಜಕ ರಾಘವೇಂದ್ರ ಮಧ್ಯಸ್ಥ, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಸುರೇಶ್ ಆಡುಗೋಡಿ, ಮಧು ಜಿ.ಕೆ, ದಿನೇಶ್ ಹೆಗಡೆ, ಆಚಾರ ವಿಚಾರ ಗಜಾನನ ಭಟ್, ರಮೇಶ್ ವಿಭೂತಿಮನೆ, ದಿನ ಪ್ರಧಾನರಾದ ಪ್ರಕಾಶ್ ಹೆಗಡೆ ದಂಪತಿಗಳು, ಶಿಕ್ಷಣ ತಜ್ಞ ಡಾ.ಜಿ.ಜಿ. ಹೆಗಡೆ, ಉದ್ಯಮಿ ಶಶಾಂಕ್ ಹೆಗಡೆ ಕವಲಕ್ಕಿ ಮುಂತಾದವರು ಉಪಸ್ಥಿತರಿದ್ದರು.
Gokarna : 60 ದಿನಗಳಲ್ಲಿ 300+ ವೈವಿಧ್ಯಮಯ ಆಹಾರ
ಅನ್ನಬ್ರಹ್ಮ ಚಾತುರ್ಮಾಸ್ಯದ 60 ದಿನಗಳಲ್ಲಿ ವೈವಿಧ್ಯಮಯ ಪಾರಂಪರಿಕ ಪಾಕ ಲೋಕದ ಅನಾವರಣವಾಗಲಿದ್ದು, 300 ಕ್ಕೂ ಅಧಿಕ ವಿಶೇಷ ಸಾತ್ವಿಕ ಆಹಾರಗಳನ್ನು ಚಾತುರ್ಮಾಸ್ಯದಲ್ಲಿ ಆಗಮಿಸುವವರಿಗೆ ಉಣಬಡಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಮಲೆನಾಡು ಹಾಗೂ ಕರಾವಳಿಯ ಪಾರಂಪರಿಕ ಭಕ್ಷ್ಯಗಳನ್ನು ಮಠದ ಮಾತೃವಿಭಾದ ನೇತೃತ್ವದಲ್ಲಿ ತಯಾರಿಸುವ ವ್ಯವಸ್ಥೆಯಾಗಿದ್ದು, ವೈವಿಧ್ಯಮಯ ತಂಬುಳಿ, ಕೋಸಂಬರಿ, ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳು ದೇಹಕ್ಕೆ ಹಿತವನ್ನು ನಾಲಿಗೆಗೆ ರುಚಿಯನ್ನೂ ಉಣಬಡಿಸಲಿವೆ.
‘ಭೋಜನ ಕುತೂಹಲಮ್’ ಹಾಗೂ ‘ಕ್ಷೇಮ ಕುತೂಹಲಮ್’ ಎಂಬ ಪ್ರಾಚೀನ ಗ್ರಂಥಗಳನ್ನು ಆಧರಿಸಿಯೂ ಹಲವಾರು ಆರೋಗ್ಯಯುಕ್ತ ಸಾತ್ವಿಕ ಆಹಾರಗಳೂ ಊಟದ ಬಾಳೆಯನ್ನು ಅಲಂಕರಿಸಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










