ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ | ವಿಶೇಷ ಲೇಖನ: ರಾಕೇಶ್ ಸೋಮಿನಕೊಪ್ಪ |
ಶಿವಮೊಗ್ಗ (Shivamogga) ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 1ರ ಸೋಮಿನಕೊಪ್ಪ ಭೋವಿ ಕಾಲೋನಿ ನಿವಾಸಿಗಳು ಮೂಲಭೂತ ಸೌಕರ್ಯದ ಕೊರತೆಯಿಂದ ಗಂಭೀರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ಮಶಾನಕ್ಕೆ ಸಂಪರ್ಕಿಸುವ ರಸ್ತೆ ಇಲ್ಲದ ಕಾರಣ, ಮೃತದೇಹವನ್ನು ಕೊಂಡೊಯ್ಯುವ ಸಂದರ್ಭದಲ್ಲೇ ನಿವಾಸಿಗಳು ತೀವ್ರ ತೊಂದರೆ ಅನುಭವಿಸಬೇಕಾಗಿರುವುದು ಬೆಳಕಿಗೆ ಬಂದಿದೆ.
ಅಂತ್ಯಸಂಸ್ಕಾರಕ್ಕೂ ರೈಲ್ವೆ ಹಳಿ ದಾಟಬೇಕಾದ ಸ್ಥಿತಿ
ಸೋಮಿನಕೊಪ್ಪ ಭೋವಿ ಕಾಲೋನಿಯ ಸ್ಮಶಾನಕ್ಕೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ, ಅಂತ್ಯಸಂಸ್ಕಾರ ಸಂದರ್ಭದಲ್ಲಿ ಮೃತದೇಹವನ್ನು ಹೊತ್ತುಕೊಂಡು ಹೋಗುವ ಜನರು ಕಲ್ಲು-ಮುಳ್ಳುಗಳ ನಡುವೆ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ, ಸ್ಮಶಾನಕ್ಕೆ ಹೋಗಲು ರೈಲ್ವೆ ಹಳಿ ದಾಟಲೇಬೇಕಾದ ಅನಿವಾರ್ಯತೆ ಇರುವುದರಿಂದ ಜನರ ಸುರಕ್ಷತೆಗೆ ದೊಡ್ಡ ಧಕ್ಕೆ ಉಂಟಾಗಿದೆ.
“ನಮ್ಮ ಜನರಿಗೆ ಸತ್ತ ಮೇಲೂ ನೆಮ್ಮದಿ ಇಲ್ಲ. ಅಂತ್ಯಸಂಸ್ಕಾರಕ್ಕೆ ಹೋಗಲು ರಸ್ತೆ ಇಲ್ಲ. ಸ್ಮಶಾನದಲ್ಲಿ ಕಲ್ಲು-ಮುಳ್ಳುಗಳು, ಗಿಡಗಂಟಿಗಳು ತುಂಬಿವೆ. ನಮ್ಮ ಸಂಕಷ್ಟವನ್ನು ಅರಿತು ಸಂಸದರು ತಕ್ಷಣ ಕ್ರಮ ಕೈಗೊಳ್ಳಬೇಕು,
-ಈರಪ್ಪ, ಸ್ಥಳೀಯ ಹಿರಿಯ ಮುಖಂಡ

ಮಳೆಗಾಲದಲ್ಲಿ ಮತ್ತಷ್ಟು ಕಷ್ಟ
ಮಳೆಗಾಲದ ಸಮಯದಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ. ಗಿಡಗಂಟಿಗಳು, ಜುಳ್ಳುಗಳು ಹಾಗೂ ಕೆಸರು ತುಂಬಿರುವ ಮಾರ್ಗದಲ್ಲಿ ಮೃತದೇಹವನ್ನು ಸಾಗಿಸುವುದು ಅತ್ಯಂತ ಕಷ್ಟಕರವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Shivamogga : ರೈಲ್ವೆ ಕೋಚಿಂಗ್ ಡಿಪೋ ಹಿನ್ನೆಲೆ – ಅಂಡರ್‌ಪಾಸ್ ಅಗತ್ಯ
ಸಮೀಪದ ಕೋಟೆಗಂಗೂರು ಪ್ರದೇಶದಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಭವಿಷ್ಯದಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈಗಿರುವ ಸಮಸ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರವಾಗುವ ಮುನ್ನ ಅಂಡರ್‌ಪಾಸ್ ನಿರ್ಮಿಸಬೇಕೆಂಬ ಬೇಡಿಕೆ ಸ್ಥಳೀಯರಿಂದ ಕೇಳಿಬಂದಿದೆ.
Also Read>> ಯಶ್ vs ಯಶ್ | ‘ಟಾಕ್ಸಿಕ್’ ಟ್ರೈಲರ್ ರಿಲೀಸ್ | ರೋಲ್‌ನ ಸಖತ್ ಝಲಕ್! ಫ್ಯಾನ್ಸ್ ಫುಲ್ ಖುಷ್!
ಅಂಡರ್‌ಪಾಸ್ ನಿರ್ಮಾಣದಿಂದ ಹಲವರಿಗೆ ಲಾಭ
ಈ ಭಾಗದಲ್ಲಿ ಅಂಡರ್‌ಪಾಸ್ ನಿರ್ಮಾಣವಾದರೆ ಸೋಮಿನಕೊಪ್ಪ ಭೋವಿ ಕಾಲೋನಿ ಮಾತ್ರವಲ್ಲದೆ ಕೋಟೆಗಂಗೂರು, ತ್ಯಾವರೆಕೊಪ್ಪ ಹಾಗೂ ಪಶುವೈದ್ಯಕೀಯ ಕಾಲೇಜಿಗೆ ತೆರಳುವ ಸಾರ್ವಜನಿಕರಿಗೂ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ರೈಲ್ವೆ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಸಂಸದರಿಗೆ ಮನವಿ
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಮುಂದಾಳತ್ವದಲ್ಲಿ ಜಿಲ್ಲೆಯಲ್ಲಿ ಹಲವೆಡೆ ರೈಲ್ವೆ ಅಂಡರ್‌ಪಾಸ್‌ಗಳು ನಿರ್ಮಾಣಗೊಂಡಿವೆ. ಇದೇ ಮಾದರಿಯಲ್ಲಿ ಸೋಮಿನಕೊಪ್ಪ ಭೋವಿ ಕಾಲೋನಿ ಪ್ರದೇಶದಲ್ಲಿಯೂ ಅಂಡರ್‌ಪಾಸ್ ನಿರ್ಮಿಸಿ, ಸ್ಮಶಾನಕ್ಕೆ ಸಂಪರ್ಕ ರಸ್ತೆ ಕಲ್ಪಿಸಬೇಕೆಂದು ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.
“ಸ್ಮಶಾನಕ್ಕೆ ಸಂಪರ್ಕ ರಸ್ತೆ ನಿರ್ಮಾಣ ಹಲವು ವರ್ಷಗಳ ಬೇಡಿಕೆ. ಪ್ರತಿಸಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು,”
-ಎಸ್.ಎಂ. ಸುರೇಶ
ತುರ್ತು ಕ್ರಮಕ್ಕೆ ಆಗ್ರಹ
ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ಅಂಡರ್‌ಪಾಸ್ ನಿರ್ಮಾಣ ಹಾಗೂ ಸ್ಮಶಾನಕ್ಕೆ ಸೂಕ್ತ ಸಂಪರ್ಕ ರಸ್ತೆ ಕಲ್ಪಿಸುವ ಮೂಲಕ ಹಲವು ವರ್ಷಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸೋಮಿನಕೊಪ್ಪ ಭೋವಿ ಕಾಲೋನಿ ನಿವಾಸಿಗಳು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







