ಕಲ್ಪ ಮೀಡಿಯಾ ಹೌಸ್ | ಸೊರಬ |
ಭಾರತೀಯ ಧರ್ಮಗಳಲ್ಲಿ ಧರ್ಮ ಹಾಗೂ ವೃಕ್ಷಗಳ ನಡುವೆ ಅತ್ಯಂತ ಗಾಢವಾದ ಮತ್ತು ಪವಿತ್ರವಾದ ಸಂಬಂಧವಿದೆ. ಪ್ರಕೃತಿಯನ್ನು ದೇವರ ರೂಪದಲ್ಲಿ ಕಾಣುವ ಮತ್ತು ಸಂರಕ್ಷಿಸುವ ಪರಂಪರೆ ಭಾರತೀಯ ಧರ್ಮಗಳಲ್ಲಿ ಹಿಂದಿನಿಂದಲೂ ಇದೆ. ವೃಕ್ಷ ಸಂರಕ್ಷಣೆ ನೈತಿಕ ಜವಾಬ್ದಾರಿಯಾಗಿದ್ದು, ಪ್ರಕೃತಿಯನ್ನು ರಕ್ಷಿಸುವುದು ಧರ್ಮದ ಪ್ರಮುಖ ಭಾಗವಾಗಿದೆ ಎಂದು ಆರ್ಷ ವಿದ್ಯಾ ಟ್ರಸ್ಟ್ನ ‘ಆಯುಷ್ಮಾನ್ ಭವ ವಿಜಯೀ ಭವ’ ಸಂಘಟನೆಯ ರೂವಾರಿ ಮಂಜುನಾಥ ಭಟ್ ಹೇಳಿದರು.
ಪಟ್ಟಣದ ಚಿಕ್ಕಪೇಟೆ ದತ್ತ ಮಂದಿರದಲ್ಲಿ ಆರ್ಷ ವಿದ್ಯಾ ಟ್ರಸ್ಟ್ ವತಿಯಿಂದ ‘ರಾಷ್ಟ್ರಂ ಧಾರಯತಾಂ ಧ್ರುವಮ್’ ಘೋಷದಡಿ ಹಮ್ಮಿಕೊಂಡಿರುವ ನವಗ್ರಹ ವನ ನಿರ್ಮಾಣ ಅಭಿಯಾನದ ಅಂಗವಾಗಿ ನವಗ್ರಹ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವೃಕ್ಷಾರೋಪಣ ನೆರವೇರಿಸಿ ಮಾತನಾಡಿದ ಅವರು, ಪ್ರಸಕ್ತ ಸಂವತ್ಸರದಲ್ಲಿ ರಾಜ್ಯದ ವಿವಿಧೆಡೆ 108 ಸ್ಥಳಗಳಲ್ಲಿ ನವಗ್ರಹ ವನ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ವೃಕ್ಷಾರೋಪಣ ಪುಣ್ಯದ ಕಾರ್ಯ
ಧರ್ಮಗ್ರಂಥಗಳಲ್ಲಿ ಗಿಡಗಳನ್ನು ನೆಡುವುದು ಪುಣ್ಯದ ಕಾರ್ಯವಾಗಿದ್ದು, ಮಹಾಪಾಪಗಳಿಂದ ಮುಕ್ತಿ ನೀಡುವ ಸತ್ಕಾರ್ಯವೆಂದು ತಿಳಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿಯೇ ಅಥವಾ ಸಮೀಪದ ದೇವಸ್ಥಾನಗಳಲ್ಲಿ ನವಗ್ರಹ ವನ ನಿರ್ಮಿಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಬಹುದು ಎಂದು ಮಂಜುನಾಥ ಭಟ್ ಕರೆ ನೀಡಿದರು.
ಧರ್ಮದ ನೆರಳಿನಲ್ಲಿ ಇಂತಹ ಸತ್ಕಾರ್ಯಗಳು ನಡೆಯಬೇಕು. ನಮ್ಮ ಮನೆ ಅಥವಾ ಸಮೀಪದ ದೇವಸ್ಥಾನಗಳಲ್ಲಿ ವೇದಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜದಲ್ಲಿ ಧಾರ್ಮಿಕ ಹಾಗೂ ಪರಿಸರ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ರಾಮತಾರಕ ಜಪ, ಗೀತಾಪಾರಾಯಣಕ್ಕೆ ಸಂಕಲ್ಪ
ರಾಷ್ಟ್ರದ ಒಳಿತಿಗಾಗಿ ಶತಕೋಟಿ ರಾಮತಾರಕ ಜಪ ಸಂಕಲ್ಪ ಕೈಗೊಳ್ಳಲಾಗಿದೆ. ‘ಶ್ರೀರಾಮ ಜಯರಾಮ ಜಯಜಯರಾಮ’ ಜಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
Also read>> ಎನ್ಸಿಸಿ ತರಬೇತಿ ಶಿಸ್ತು, ನಾಯಕತ್ವ, ದೇಶಪ್ರೇಮ ಬೆಳೆಸಲು ಸಹಕಾರಿ: ಕೆ.ಸಿ. ರವೀಂದ್ರ
ಅದೇ ರೀತಿ ಲಕ್ಷ ಸಂಖ್ಯೆಯಲ್ಲಿ ಗೀತಾಪಾರಾಯಣ ನಡೆಸುವ ಸಂಕಲ್ಪ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಗೀತಾಪಾರಾಯಣದಲ್ಲಿ ಪಾಲ್ಗೊಳ್ಳಬೇಕು. ಇದರೊಂದಿಗೆ 108 ನವಗ್ರಹ ವನಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿಯೊಬ್ಬರೂ ಪುಣ್ಯ ವೃಕ್ಷಾರೋಪಣ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.
ಅರಣ್ಯ ಇಲಾಖೆಯಿಂದ ಸಹಕಾರ
ವೃಕ್ಷಾರೋಪಣ ಕಾರ್ಯಕ್ರಮಗಳಿಗೆ ಅರಣ್ಯ ಇಲಾಖೆ ಗಿಡಗಳನ್ನು ಒದಗಿಸುವ ಮೂಲಕ ಸಹಕಾರ ನೀಡುತ್ತಿದೆ ಎಂದು ಆಯೋಜಕರು ತಿಳಿಸಿದರು. ಪರಿಸರ ಸಂರಕ್ಷಣೆ ಹಾಗೂ ಧಾರ್ಮಿಕ ಜಾಗೃತಿಯೊಂದಿಗೆ ಕಾರ್ಯಕ್ರಮವನ್ನು ಮುಂದುವರಿಸಲಾಗುತ್ತಿದೆ.
ಕಾರ್ಯಕ್ರಮದ ಸಂದರ್ಭದಲ್ಲಿ ವೇದಪಾರಾಯಣ, ರಾಮತಾರಕ ಜಪ, ಅಖಂಡ ಗೀತಾಪಾರಾಯಣ ಹಾಗೂ ಭಾರತ ಮಾತಾಷ್ಟಕ ಸ್ತೋತ್ರ ಗಾಯನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ದತ್ತ ಮಂದಿರದ ಅನೇಕ ಭಕ್ತರು, ಮಂದಿರದ ಪ್ರಮುಖರು, ಪರಿಸರಾಸಕ್ತರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









