ಕಲ್ಪ ಮೀಡಿಯಾ ಹೌಸ್ | ಸಾಗರ | ವರದಿ: ಮಧುರಾಮ್ |
ಹೋರಾಟಗಳ ನೆನಪನ್ನು ಸದಾ ಜೀವಂತವಾಗಿಟ್ಟುಕೊಳ್ಳಬೇಕು. ಹೋರಾಟಗಳ ಇತಿಹಾಸವನ್ನು (History) ತಿಳಿದಾಗ ಮಾತ್ರ ಸಮಾಜದ ಪ್ರಗತಿಗೆ ಅಗತ್ಯವಾದ ಸ್ಫೂರ್ತಿ ದೊರೆಯುತ್ತದೆ ಎಂದು (Sagara) ಸಾಗರ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್. ಜಯಂತ್ ಹೇಳಿದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ನಡೆಸುತ್ತಿರುವ ಡಾ. ಜಿ.ಎ. ನಾರಿಬೋಳಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗೇಣಿ ಪದ್ಧತಿ ಹೋರಾಟದ ಹಿನ್ನೆಲೆಯ ‘ಎರಡು ಖಂಡುಗ’ ಕಾದಂಬರಿ ಕುರಿತು ಪ್ರಶಿಕ್ಷಣಾರ್ಥಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1974ರ ಭೂ ಸುಧಾರಣಾ ಕಾಯ್ದೆಗೆ ಐತಿಹಾಸಿಕ ಮಹತ್ವವಿದೆ. ಸಾಗರ ತಾಲೂಕಿನಲ್ಲಿ ನಡೆದ ‘ಉಳುವವನೇ ಹೊಲದೊಡೆಯ’ ಹೋರಾಟವು ದೇಶಕ್ಕೆ ಮಾದರಿಯಾಗಿದೆ. ಭೂಮಾಲಿಕರಿಂದ ಉಳುವ ರೈತರಿಗೆ ಜಮೀನು ದೊರಕಿಸಿಕೊಟ್ಟ ಕೀರ್ತಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಸಲ್ಲಬೇಕು. ಈ ಐತಿಹಾಸಿಕ ಕೊಡುಗೆಗಾಗಿ ರೈತರು ಸದಾ ಅವರಿಗೆ ಚಿರಋಣಿಯಾಗಿರಬೇಕು ಎಂದು ಅವರು ಹೇಳಿದರು.
ಗೇಣಿ ರೈತರ ಮೇಲಿನ ದೌರ್ಜನ್ಯದ ದಿನಗಳು
ಒಂದು ಕಾಲದಲ್ಲಿ ಜಮೀನು ಮಾಲೀಕರು ಸಣ್ಣ ಖಂಡುಗದಲ್ಲಿ ಬೀಜದ ಭತ್ತವನ್ನು ಅಳತೆ ಮಾಡಿ ರೈತರಿಗೆ ನೀಡುತ್ತಿದ್ದರು. ರೈತರು ಕಷ್ಟಪಟ್ಟು ಬೆಳೆ ಬೆಳೆದು ನಂತರ ದೊಡ್ಡ ಖಂಡುಗದಲ್ಲಿ ಅಳತೆ ಮಾಡಿ ಮಾಲೀಕರಿಗೆ ಧಾನ್ಯವನ್ನು ನೀಡಬೇಕಾಗಿತ್ತು. ರೈತರು ಬೆವರು ಸುರಿಸಿ ಬೆಳೆದ ಧಾನ್ಯವನ್ನು ಸಮರ್ಪಕವಾಗಿ ನೀಡದಿದ್ದರೆ ಭೂಮಾಲಿಕರು ದೌರ್ಜನ್ಯ ನಡೆಸಿ, ಚಿತ್ರಹಿಂಸೆ ನೀಡಿ ಧಾನ್ಯವನ್ನು ಪಡೆದುಕೊಳ್ಳುತ್ತಿದ್ದ ದಿನಗಳಿದ್ದವು ಎಂದು ಜಯಂತ್ ವಿವರಿಸಿದರು.
ಒಂದೆಡೆ ಭೂಮಾಲಿಕರು ಐಶಾರಾಮಿ ಜೀವನ ನಡೆಸುತ್ತಿದ್ದರೆ, ಮತ್ತೊಂದೆಡೆ ರೈತರು ಅರೆಹೊಟ್ಟೆಯಲ್ಲಿ ಕಠಿಣ ಜೀವನ ನಡೆಸುತ್ತಿದ್ದರು. ಇಂತಹ ಸಂಕಷ್ಟದ ಬದುಕಿನ ಸಂಕೋಲೆಯಿಂದ ರೈತರನ್ನು ಹೊರತಂದ ಮಹತ್ವದ ಹೋರಾಟವೇ ಕಾಗೋಡು ಸತ್ಯಾಗ್ರಹ ಎಂದು ಅವರು ಹೇಳಿದರು.
Sagara 22 ವರ್ಷಗಳ ಹೋರಾಟಕ್ಕೆ ಫಲ
ಗೇಣಿ ಪದ್ಧತಿ ವಿರುದ್ಧದ ಹೋರಾಟಕ್ಕೆ ರಾಷ್ಟ್ರಮಟ್ಟದ ನಾಯಕರು ಡಾ. ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಗೋಪಾಲಗೌಡ ಸೇರಿದಂತೆ ಹಲವಾರು ನಾಯಕರು ಬೆಂಬಲ ನೀಡಿದ್ದರು. ದೀರ್ಘಕಾಲದ ಹೋರಾಟದ ಫಲವಾಗಿ ಸುಮಾರು 22 ವರ್ಷಗಳ ನಂತರ ರೈತರ ಕನಸು ನನಸಾಯಿತು. ಗೇಣಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಮಸೂದೆ ಜಾರಿಯಾಯಿತು ಎಂದು ಅವರು ತಿಳಿಸಿದರು.
ಕಾಯ್ದೆ ಜಾರಿಯಾದ ನಂತರ ಅದನ್ನು ಜನರಿಗೆ ತಲುಪಿಸಿ, ರೈತರಿಗೆ ಜಮೀನಿನ ಮಾಲಿಕತ್ವವನ್ನು ನೀಡುವುದು ಮತ್ತೊಂದು ಹೋರಾಟವೇ ಆಗಿತ್ತು. ಇಂತಹ ಹೋರಾಟಗಳ ನೆನಪನ್ನು ಮಾಡುತ್ತಾ ಇರಬೇಕು. ಆಗ ಮಾತ್ರ ಇತಿಹಾಸದ ಅರಿವು ಮೂಡಿ, ಸಮಾಜವಾಗಿ ನಾವು ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ತಾವು ಈ ಹೋರಾಟದಲ್ಲಿ ಹಲವು ನಾಯಕರೊಂದಿಗೆ ಭಾಗವಹಿಸಿ ರೈತರಿಗೆ ನೆರವು ನೀಡಿರುವುದೇ ತಮ್ಮ ಹೋರಾಟದ ಬದುಕಿಗೆ ದೊರೆತ ದೊಡ್ಡ ಜಯ ಎಂದು ಬಿ.ಆರ್. ಜಯಂತ್ ಸ್ಮರಿಸಿದರು.
ಗೇಣಿ ರೈತರ ಕಷ್ಟಗಳನ್ನು ವಿವರಿಸಿದ ಬಿ. ಸ್ವಾಮಿರಾವ್
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಹೊಸನಗರ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿರುವ ನಿಕಟಪೂರ್ವ ವಿಧಾನಸಭಾ ಸದಸ್ಯ ಹಾಗೂ ಗೇಣಿ ಪದ್ಧತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಬಿ. ಸ್ವಾಮಿರಾವ್, ತಮ್ಮ ಹೋರಾಟದ ದಿನಗಳ ಅನುಭವಗಳನ್ನು ಹಂಚಿಕೊಂಡರು.
ಬಡ ಗೇಣಿ ರೈತರ ಬವಣೆ, ಭೂಮಾಲಿಕರ ಆಳ್ವಿಕೆಯ ಕಾಲದಲ್ಲಿ ನಡೆದ ದೌರ್ಜನ್ಯ ಪ್ರಕರಣಗಳು ಹಾಗೂ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ ನಂತರ ಅದರ ಪ್ರಯೋಜನವನ್ನು ರೈತರಿಗೆ ತಲುಪಿಸಲು ಕೈಗೊಂಡ ಸಾಹಸಮಯ ಕಾರ್ಯಗಳ ಕುರಿತು ಅವರು ವಿಸ್ತಾರವಾಗಿ ವಿವರಿಸಿದರು.
Also Read>> ಶಿವಮೊಗ್ಗದ 30ಕ್ಕೂ ಹೆಚ್ಚು ಕೆರೆಗಳಿಗೆ ನೀರು: ₹22.42 ಕೋಟಿ ತುರ್ತು ಅನುಮೋದನೆಗೆ MP ರಾಘವೇಂದ್ರ ಮನವಿ
ಬಳಿಕ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಬಿ.ಆರ್. ಜಯಂತ್ ಅವರು ಬಿ. ಸ್ವಾಮಿರಾವ್ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಗೌರವಿಸಿದರು.
ಪುಸ್ತಕದ ಕುರಿತು ವಿವರ
‘ಎರಡು ಖಂಡುಗ’ ಕಾದಂಬರಿಯ ಕುರಿತು ಡಾ. ಅನ್ನಪೂರ್ಣಾ ಎಚ್., ಕ್ಷೇತ್ರ ಸಮನ್ವಯಾಧಿಕಾರಿ, ಲೇಖಕರ ಪರಿಚಯ ಹಾಗೂ ಪುಸ್ತಕದಲ್ಲಿರುವ ಪ್ರಮುಖ ವಿಷಯಗಳ ಬಗ್ಗೆ ಪ್ರಶಿಕ್ಷಣಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು.
ಪುಸ್ತಕವನ್ನು 75 ಪ್ರಶಿಕ್ಷಣಾರ್ಥಿಗಳು ಅಧ್ಯಯನ ಮಾಡಿ ಅದರ ಕುರಿತು ಲೇಖನಗಳನ್ನು ಬರೆದಿದ್ದರು. ಈ ಪೈಕಿ ಉತ್ತಮವಾದ ಐದು ಲೇಖನಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ರವೀಂದ್ರ ಭೋದಾಖಲೆಗಳ ಉಪನಿರ್ದೇಶಕರು, ಉಡುಪಿ ಜಿಲ್ಲೆ, ಸುದರ್ಶನ ಕೋಣೆ ಹೊಸೂರು, ಮುಖ್ಯ ಲೆಕ್ಕಾಧಿಕಾರಿ, ಕಾಡಾ ನಿಗಮ, ಚಂದ್ರಶೇಖರ ಸಿರಿವಂತೆ, ಹಾಸ್ಯಚಿತ್ರ ಕಲಾವಿದರು, ಈಶ್ವರ ನಾಯ್ಕ ಕುಗ್ವೆ, ರೈತ ಹೋರಾಟಗಾರರು, ಕೆ. ವೆಂಕಟೇಶ್ ಕವಲಕೋಡು, ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಕೋಶಾಧಿಕಾರಿ, ಹಾಗೂ ಕಾದಂಬರಿಯ ಲೇಖಕರಾದ ಶ್ರೀಧರ ಕೆ.ಎ. ಭಾಗವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ಡಾ. ಜಿ.ವಿ. ನಾರಿಬೋಳಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಿಲ್ಪಾ ವಿ.ಎನ್. ವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಹರ್ಷಿತಾ, ಸಿಂಧು, ಶ್ವೇತಾ ಮತ್ತು ಸಂಗಡಿಗರು ರೈತ ಗೀತೆಗಳನ್ನು ಹಾಡಿದರು. ಸಿಂಧೂಜಿ ಸ್ವಾಗತಿಸಿ, ವಿನುತಾ ವಂದಿಸಿದರು. ಕಾರ್ಯಕ್ರಮವನ್ನು ಲಿಖಿತಾ ಮತ್ತು ಸಿಂಚನಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








