ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಕರ್ನಾಟಕದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ, ಬೆಳವಣಿಗೆ ಹಾಗೂ ಆಡಳಿತದಲ್ಲಿ ಕನ್ನಡದ ಅನುಷ್ಠಾನಕ್ಕೆ ಕನ್ನಡ ಕಾವಲು ಸಮಿತಿಯನ್ನು ರಚಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ, ರಾಜಕೀಯ ಮುತ್ಸದಿ ರಾಮಕೃಷ್ಣ ಹೆಗಡೆಯವರಿಗೆ ಸಲ್ಲುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್. ಋಗ್ವೇದಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವ ಮತ್ತು ಅವರ ಕೊಡುಗೆಗಳ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ರಾಮಕೃಷ್ಣ ಹೆಗಡೆಯವರು ಮೊದಲ ಬಾರಿಗೆ ಕನ್ನಡ ಕಾವಲು ಸಮಿತಿಯನ್ನು ರಚಿಸಿದ್ದರು. ಅದರ ಮೊದಲ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಿದ್ದರು ಎಂದು ತಿಳಿಸಿದರು.
Also read>> ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ
ಕನ್ನಡ ಭಾಷೆಯ ಸಂಪೂರ್ಣ ಬಳಕೆ ಮತ್ತು ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ರಚಿಸಲಾದ ಕನ್ನಡ ಕಾವಲು ಸಮಿತಿ, ತದನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿ ರೂಪುಗೊಂಡು ಕನ್ನಡದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ. ಹೆಗಡೆಯವರ ದೂರದೃಷ್ಟಿಯ ಚಿಂತನೆಯಿಂದ ಆಡಳಿತದಲ್ಲಿ ಕನ್ನಡ ಭಾಷೆಯ ಕಡ್ಡಾಯ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ದೊರೆಯಿತು ಎಂದು ಹೇಳಿದರು.
ಕವಿಗಳು, ಸಾಹಿತಿಗಳು, ಚಿಂತಕರು ಮತ್ತು ಬರಹಗಾರರ ಕೊಡುಗೆಯಷ್ಟೇ ಕನ್ನಡ ಸಾಹಿತ್ಯ ಹಾಗೂ ಭಾಷೆಯ ಬೆಳವಣಿಗೆಗೆ ಆಡಳಿತಗಾರರು ಮತ್ತು ಕಾರ್ಯಾಂಗದ ಬೆಂಬಲವೂ ಅತ್ಯಗತ್ಯವಾಗಿದೆ. ರಾಮಕೃಷ್ಣ ಹೆಗಡೆಯವರು ಚಾಮರಾಜನಗರಕ್ಕೂ ಹಲವಾರು ಬಾರಿ ಭೇಟಿ ನೀಡಿದ್ದರು ಎಂದು ಋಗ್ವೇದಿ ಸ್ಮರಿಸಿದರು.
ಲೋಕಾಯುಕ್ತ ಮತ್ತು ಪಂಚಾಯತ್ ರಾಜ್ ಕಾಯ್ದೆ ಕೊಡುಗೆ
ಬರಹಗಾರ ಲಕ್ಷ್ಮೀನರಸಿಂಹ ಮಾತನಾಡಿ, ಆಡಳಿತದಲ್ಲಿ ಪಾರದರ್ಶಕತೆ ತಂದು ಭ್ರಷ್ಟಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ರಾಮಕೃಷ್ಣ ಹೆಗಡೆಯವರು ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತಂದರು. ಅಲ್ಲದೆ, ಪಂಚಾಯತ್ ರಾಜ್ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗುವ ವ್ಯವಸ್ಥೆಯನ್ನು ರೂಪಿಸಿದರು ಎಂದರು.
ಬಡವರ ಅನುಕೂಲಕ್ಕಾಗಿ ಎರಡು ರೂಪಾಯಿಗೆ ಎರಡು ಕೆಜಿ ಅಕ್ಕಿ ಯೋಜನೆಯನ್ನು ಜಾರಿಗೊಳಿಸಿದ್ದರು. 1983ರಿಂದ 1988ರ ಅವಧಿಯಲ್ಲಿ ಹಲವಾರು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿ, ಬಿ. ರಾಚಯ್ಯ ಅವರ ಮೂಲಕ ನಗರದ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದರು ಎಂದು ಹೇಳಿದರು.
ಅಬ್ದುಲ್ ನಜೀರ್ ಸಾಬ್, ಎಚ್.ಡಿ. ದೇವೇಗೌಡ, ಬಿ. ರಾಚಯ್ಯ ಮತ್ತು ಬಿ.ಎಲ್. ಶಂಕರ್ ಸೇರಿದಂತೆ ಹಲವು ಪ್ರಮುಖ ನಾಯಕರು ರಾಮಕೃಷ್ಣ ಹೆಗಡೆಯವರೊಂದಿಗೆ ಕಾರ್ಯನಿರ್ವಹಿಸಿದ್ದರು ಎಂದು ಅವರು ತಿಳಿಸಿದರು.
ಮಾಜಿ ನಗರಸಭಾ ಸದಸ್ಯ ಪದ್ಮ ಪುರುಷೋತ್ತಮ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಲ್. ಶಿವಲಿಂಗಮೂರ್ತಿ, ಬಿ.ಕೆ. ಆರಾಧ್ಯ, ರವಿಚಂದ್ರ ಪ್ರಸಾದ್ ಕಹಳೆ, ಸರಸ್ವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







