ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ (Soraba) ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಲಯಾಳಿ ಭಾಷಿಕರ ಪ್ರಮುಖ ಹಬ್ಬವಾದ ತಿರು ಓಣಂ (Tiru Onam) ಹಬ್ಬವನ್ನು ಬುಧವಾರ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು ಹೊಸ ಉಡುಗೆ-ತೊಡುಗೆ ಧರಿಸಿ ಸಂಭ್ರಮಿಸಿದರು. ಮನೆಗಳ ಅಂಗಳದಲ್ಲಿ ಓಣಂ ಹಬ್ಬದ ಪ್ರಮುಖ ಆಕರ್ಷಣೆಯಾದ ಹೂವಿನ ರಂಗೋಲಿ (ಪೂಕಳಂ) ರಚಿಸಿ ಅಲಂಕರಿಸಿದ್ದು ಗಮನ ಸೆಳೆಯಿತು.
ಮನೆಯಂಗಳವನ್ನು ಸಿಂಗಾರಿಸಿದ ಮಹಿಳೆಯರು ಕೇರಳದ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಸೀರೆಗಳನ್ನು ಧರಿಸಿ, ಹೂವಿನ ರಂಗೋಲಿಗೆ ದೀಪ ಬೆಳಗಿಸಿದರು. ಬಳಿಕ ಪರಸ್ಪರ ಓಣಂ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಬ್ಬದ ಪ್ರಯುಕ್ತ ಸಿದ್ಧಪಡಿಸಿದ್ದ ವಿಶೇಷ ಭೋಜನವನ್ನು ಕುಟುಂಬದ ಸದಸ್ಯರು ಹಾಗೂ ಬಂಧು-ಬಳಗದವರು ಒಟ್ಟಾಗಿ ಸವಿದು ಸಂಭ್ರಮಿಸಿದರು.
Soraba : ಕೃಷಿ ಮತ್ತು ಮಹಾಬಲಿ ಚಕ್ರವರ್ತಿಯೊಂದಿಗೆ ನಂಟು
ಓಣಂ ಹಬ್ಬವು ಕೃಷಿ ಪರಂಪರೆಯೊಂದಿಗೂ ನಿಕಟ ಸಂಬಂಧ ಹೊಂದಿದೆ. ಈ ಸಂದರ್ಭದಲ್ಲಿ ಕೃಷಿಕರ ಮೊದಲ ಬೆಳೆ ಕೊಯ್ಲಿಗೆ ಸಿದ್ಧವಾಗುವುದರಿಂದ, ಮೊದಲ ಬೆಳೆಯ ಸಂಭ್ರಮದ ಹಬ್ಬವಾಗಿಯೂ ಓಣಂ ಅನ್ನು ಆಚರಿಸಲಾಗುತ್ತದೆ.
ಮಲಯಾಳಿ ಸಮುದಾಯದ ನಂಬಿಕೆಯ ಪ್ರಕಾರ, ಮಹಾದಾನಿ ಮಹಾಬಲಿ ಚಕ್ರವರ್ತಿ ವರ್ಷಕ್ಕೊಮ್ಮೆ ಸಿಂಹ ಮಾಸದ ಶ್ರಾವಣ ನಕ್ಷತ್ರದಂದು ಭೂಲೋಕಕ್ಕೆ ಆಗಮಿಸುತ್ತಾನೆ. ತನ್ನ ಪ್ರಜೆಗಳನ್ನು ಭೇಟಿಯಾಗಲು ಮಹಾಬಲಿ ಚಕ್ರವರ್ತಿ ಆಗಮಿಸುವ ದಿನವೆಂಬ ನಂಬಿಕೆಯಿಂದ ಕೇರಳಿಗರು ಓಣಂ ಹಬ್ಬವನ್ನು ವಿಶೇಷ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸುತ್ತಾರೆ.
ಕೇರಳದ ಸಾಂಸ್ಕೃತಿಕ ಪರಂಪರೆ, ಕುಟುಂಬ ಬಾಂಧವ್ಯ, ಕೃಷಿ ಸಂಭ್ರಮ ಹಾಗೂ ಸೌಹಾರ್ದತೆಯ ಪ್ರತೀಕವಾಗಿ ತಿರು ಓಣಂ ಹಬ್ಬವನ್ನು ಸೊರಬದಲ್ಲಿಯೂ ಮಲಯಾಳಿ ಭಾಷಿಕರು ಸಂಭ್ರಮದಿಂದ ಆಚರಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










