ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಹೊಸ ಸಂಪುಟದಲ್ಲಿ ಮೊದಲ ವಿಕೆಟ್ ಉರುಳಿಬಿದ್ದಿದೆ. ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ರಾಜೀನಾಮೆ ಘೋಷಿಸಿದ್ದು, ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಕಣ್ಣೀರಿಟ್ಟರು.
ದೆಹಲಿಯಿಂದ ವಾಪಸಾದ ಬಳಿಕ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ. ನಾಗೇಂದ್ರ ಅವರು, ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಪಕ್ಷಗಳು ಸದನ ಸರಿಯಾಗಿ ನಡೆಯಲು ಅವಕಾಶ ನೀಡಲಿಲ್ಲ. ಉದ್ದೇಶಪೂರ್ವಕವಾಗಿ ಸದನದ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸಿ ಹಾಳು ಮಾಡಿದರು ಎಂದು ಅವರು ಆರೋಪಿಸಿದರು.
ವಿಪಕ್ಷಗಳನ್ನು ಸಂವಿಧಾನ ವಿರೋಧಿಗಳು ಎಂದು ಕರೆದ ನಾಗೇಂದ್ರ, ವಿಪಕ್ಷಗಳು ಈಗಲೂ ಮನುಸ್ಮೃತಿ ಜಾರಿಗೆ ತರುವ ಪ್ರಯತ್ನ ಮಾಡುತ್ತಿವೆ ಎಂದು ಕಿಡಿಕಾರಿದರು.
Also read>> ಹುಬ್ಬಳ್ಳಿ-ಚೆನ್ನೈ ಮಾರ್ಗ ಸೇರಿದಂತೆ ಹಲವು ರೈಲುಗಳ ಸಂಚಾರ ವ್ಯತ್ಯಯ
ಇದು ವೇದ ಕಾಲವಲ್ಲ, ಪುರಾಣ ಕಾಲವೂ ಅಲ್ಲ. ಇದು ಸಂವಿಧಾನದ ಕಾಲ. ಇದು ಡಾ. ಬಿ.ಆರ್. ಅಂಬೇಡ್ಕರ್ ಅವರ ಯುಗ. ಹಿಂದೆ ಉತ್ತರಕಾಂಡದಲ್ಲಿ ಶಂಭುಕನ ಹತ್ಯೆಯಾಗಿತ್ತು. ಆದರೆ, ಇವತ್ತಿನ ಕಾಲದಲ್ಲಿ ಶಂಭುಕನಂತಹವರ ಹತ್ಯೆ ನಡೆಯಲು ಸಾಧ್ಯವಿಲ್ಲ. ನಮ್ಮನ್ನು ರಕ್ಷಿಸಲು ಸಂವಿಧಾನವಿದೆ ಎಂದು ಅವರು ಹೇಳಿದರು.
ಮನುಸ್ಮೃತಿಯ ಆಲೋಚನೆಯಿಂದ ಹಿಂದೆ ಶಂಭುಕನ ಹತ್ಯೆಯಾದ ರೀತಿಯ ಪರಿಸ್ಥಿತಿ ಈಗ ಮತ್ತೆ ನಿರ್ಮಾಣವಾಗುವುದಿಲ್ಲ. ದಲಿತರು, ಶೂದ್ರರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು ಬದುಕಬಾರದು ಎಂಬುದು ಮನುಸ್ಮೃತಿ ಹಾಗೂ ಬಿಜೆಪಿ ಅವರ ಮನಸ್ಥಿತಿ. ಆದರೆ, ನಮ್ಮನ್ನು ರಕ್ಷಿಸಲು ಭಾರತದಲ್ಲಿ ಬಲಿಷ್ಠ ಸಂವಿಧಾನವಿದೆ ಎಂದು ನಾಗೇಂದ್ರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ವೇಳೆ ನಾಗೇಂದ್ರ ಭಾವುಕರಾದರು. ಕಣ್ಣೀರಿಡುತ್ತಲೇ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಅವರು, ಈ ರಾಜೀನಾಮೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಬಿ. ನಾಗೇಂದ್ರ ಅವರ ರಾಜೀನಾಮೆ ಘೋಷಣೆಯು ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಮೊದಲ ಪ್ರಮುಖ ರಾಜಕೀಯ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆ ಮತ್ತು ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








