ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
(Shivamogga) ಬಡವರ ಆಶ್ರಯ ಮನೆಗಳಿಗೆ ಅಗತ್ಯ ಅನುದಾನ ತರಲು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ, (KS Eshwarappa) ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಶ್ರಯ ಮನೆಗಳಿಗೆ ಅನುದಾನ ತರದಿದ್ದರೆ ಮಧು ಬಂಗಾರಪ್ಪ ಅವರ ಕಾರಿಗೆ ಅಡ್ಡಗಟ್ಟಿ ಮುತ್ತಿಗೆ ಹಾಕಲಾಗುವುದು. ಸಚಿವರು ಶಿವಮೊಗ್ಗ ನಗರಕ್ಕೆ ಬಂದಾಗ ಅವರನ್ನು ಪ್ರಶ್ನಿಸಲಾಗುವುದು ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.
ನಗರದ ಫೇಸ್ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಆಯೋಜಿಸಿದ್ದ ಬೂತ್ ಮಟ್ಟದ ಪದಾಧಿಕಾರಿಗಳ ಸಭೆ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಮತ್ತು ಬೂತ್ ಮಟ್ಟದ ಪದಾಧಿಕಾರಿಗಳ ಕರಡು ಮತದಾರರ ಪಟ್ಟಿ ವಿಶ್ಲೇಷಣೆ ಮತ್ತು ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Shivamogga : ‘ಆಶ್ರಯ ಮನೆಗಳಿಗೆ ಅನುದಾನ ತರಲು ಸಚಿವರು ವಿಫಲ’
ತಾವು ಶಾಸಕರಾಗಿದ್ದ ಅವಧಿಯಲ್ಲಿ ಕಡುಬಡವರು, ಪರಿಶಿಷ್ಟ ಜಾತಿ–ಪಂಗಡ ಹಾಗೂ ಅಲ್ಪಸಂಖ್ಯಾತರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಸುಮಾರು 4,000 ಮನೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಪೈಕಿ 600 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ಈಶ್ವರಪ್ಪ ಹೇಳಿದರು.
ಉಳಿದ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ಮೂಲಭೂತ ಸೌಕರ್ಯ ಮತ್ತು ಅನುದಾನ ಒದಗಿಸುವಂತೆ ವಸತಿ ಸಚಿವರೊಂದಿಗೆ ಎರಡು ಬಾರಿ ಚರ್ಚಿಸಿದ್ದಾಗಿ ಅವರು ತಿಳಿಸಿದರು.
ವಸತಿ ಸಚಿವರು ಶಿವಮೊಗ್ಗಕ್ಕೆ ಆಗಮಿಸಿ ಸಭೆ ನಡೆಸಿ ಅನುದಾನ ನೀಡುವುದಾಗಿ ಘೋಷಿಸಿ ಹೋಗಿದ್ದರೂ, ಇದುವರೆಗೆ ಒಂದು ರೂಪಾಯಿ ಅನುದಾನವೂ ಬಂದಿಲ್ಲ ಎಂದು ಆರೋಪಿಸಿದರು.
“ಮಧು ಬಂಗಾರಪ್ಪ ಒಳ್ಳೆಯವರು. ಆದರೆ ಸಚಿವರಾಗಿ ಸರ್ಕಾರದಿಂದ ಅಗತ್ಯ ಅನುದಾನ ತರಲು ಅವರು ವಿಫಲರಾಗಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನೀರು, ರಸ್ತೆ, ಚರಂಡಿ ಸೇರಿದಂತೆ ವಿವಿಧ ಮೂಲಸೌಕರ್ಯಗಳಿಗೆ ನೀಡಲಾಗುತ್ತಿದ್ದ ಅನುದಾನಗಳನ್ನು ಈಗ ನಿಲ್ಲಿಸಲಾಗಿದೆ” ಎಂದು ಈಶ್ವರಪ್ಪ ಆರೋಪಿಸಿದರು.
‘ಅಕ್ಟೋಬರ್ 1ರಿಂದ ಆಶ್ರಯ ಮನೆಗಳಿಗಾಗಿ ಹೋರಾಟ’
ಬಡವರ ಪರವಾಗಿ ಹೋರಾಟ ನಡೆಸುವುದಾಗಿ ಹೇಳಿದ ಈಶ್ವರಪ್ಪ, ಅಕ್ಟೋಬರ್ 1ರಿಂದ ಆಶ್ರಯ ಮನೆಗಳಿಗಾಗಿ ಹೋರಾಟ ಆರಂಭಿಸಲಾಗುವುದು ಎಂದು ಘೋಷಿಸಿದರು.
“ಗುರಿ ಮುಟ್ಟುವವರೆಗೆ ಬಡವರ ಪರವಾದ ಹೋರಾಟ ನಿಲ್ಲುವುದಿಲ್ಲ. ಪೊಲೀಸರು ನನ್ನನ್ನು ಬಂಧಿಸಿದರೂ ಪರವಾಗಿಲ್ಲ. ನಾನೇ ಮುಂದೆ ನಿಂತು ಹೋರಾಟ ನಡೆಸುತ್ತೇನೆ. ಜನರಿಗಾಗಿ ಜೈಲಿಗೆ ಹೋಗಲೂ ಸಿದ್ಧ” ಎಂದು ಅವರು ಹೇಳಿದರು.
ಶಿವಮೊಗ್ಗದಲ್ಲಿ 59 ಸಾವಿರ ಮತದಾರರ ಹೆಸರು ಡಿಲೀಟ್?
ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿಯೂ ಮಾತನಾಡಿದ ಈಶ್ವರಪ್ಪ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಐಆರ್ (SIR) ಪ್ರಕ್ರಿಯೆಯ ಒಂದು ಹಂತ ಪೂರ್ಣಗೊಂಡಿದ್ದು, ಸುಮಾರು 59 ಸಾವಿರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿದರು.
ಈ ಪೈಕಿ ಸುಮಾರು 15 ಸಾವಿರ ಮತದಾರರಿಗೆ ಈಗಾಗಲೇ ಚುನಾವಣಾ ಆಯೋಗದಿಂದ ನೋಟಿಸ್ ನೀಡಿ ದಾಖಲೆಗಳನ್ನು ಕೇಳಲಾಗಿದೆ ಎಂದು ತಿಳಿಸಿದರು.
ಅಕ್ಟೋಬರ್ 27ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ಹೇಳಿದ ಅವರು, ಯಾವುದೇ ಅರ್ಹ ಮತದಾರರ ಮತ ಹಕ್ಕು ಕಳೆದುಹೋಗದಂತೆ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
Also read>> ಬಾಕ್ಸ್ ಆಫೀಸ್ನಲ್ಲಿ ₹300 ರ ಗಡಿಯತ್ತ ‘ಟಾಕ್ಸಿಕ್’ | 5 ದಿನದಲ್ಲಿ ಚಿತ್ರ ಗಳಿಸಿದ್ದು ಎಷ್ಟು?
25 ಸಾವಿರ ಮತದಾರರಿಗೆ ಮಾಹಿತಿ
ರಾಷ್ಟ್ರಭಕ್ತರ ಬಳಗವು ಶಿವಮೊಗ್ಗ ನಗರದಲ್ಲಿ ಮೂರು ಕಡೆ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿ ಸುಮಾರು 25 ಸಾವಿರ ಮತದಾರರಿಗೆ ಮಾಹಿತಿ ನೀಡಿದೆ ಎಂದು ಈಶ್ವರಪ್ಪ ಹೇಳಿದರು.
“ಒಂದೇ ಒಂದು ಮತವೂ ಹಾಳಾಗಬಾರದು. ಪ್ರತಿಯೊಬ್ಬ ಮತದಾರರ ಮನೆಗೂ ನಮ್ಮ ಕಾರ್ಯಕರ್ತರು ತಲುಪಬೇಕು” ಎಂದು ಅವರು ಸೂಚಿಸಿದರು.
ಪ್ರತಿ 250 ಮತದಾರರಿಗೆ ನಾಲ್ಕು ಬಿಎಲ್ಎಗಳ ತಂಡ ರಚಿಸಿ ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯ ಕುರಿತು ಮಾಹಿತಿ ನೀಡಲಾಗುತ್ತಿದೆ. ಹೊಸ ಮತದಾರರ ಸೇರ್ಪಡೆ, ಮೃತಪಟ್ಟವರು, ಬೇರೆ ಊರಿಗೆ ವಲಸೆ ಹೋದವರು ಹಾಗೂ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸುವ ಕೆಲಸವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಯಾವುದೇ ರಾಜಕೀಯ ಪಕ್ಷ ಮಾಡದ ರೀತಿಯಲ್ಲಿ ರಾಷ್ಟ್ರಭಕ್ತರ ಬಳಗ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಹೇಳಿದರು.
‘ಮತದಾರರ ಸಮಸ್ಯೆಗಳಿಗೂ ಸ್ಪಂದಿಸಿ’
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಕೆಲಸಕ್ಕೆ ಮಾತ್ರ ಕಾರ್ಯಕರ್ತರು ಸೀಮಿತವಾಗಬಾರದು. ಪ್ರತಿ ಮತದಾರರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಒದಗಿಸಲು ಸಹ ಪ್ರಯತ್ನಿಸಬೇಕು ಎಂದು ಈಶ್ವರಪ್ಪ ಕರೆ ನೀಡಿದರು.
ರಾಷ್ಟ್ರಭಕ್ತರ ಬಳಗವು ಗೋ ಸಂರಕ್ಷಣೆ, ಪರಿಸರ ಸಂರಕ್ಷಣೆ ಹಾಗೂ ಬಡವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
ಮುಂಬರುವ ಪಾಲಿಕೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರಭಕ್ತರ ಬಳಗದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
‘ಬೂತ್ ಗೆದ್ದರೆ ಚುನಾವಣೆ ಗೆದ್ದಂತೆ’
ಮಾಜಿ ನಗರಸಭಾ ಅಧ್ಯಕ್ಷ ಎಂ.ಶಂಕರ್ ಮಾತನಾಡಿ, ಲಕ್ಷಾಂತರ ಕಾರ್ಯಕರ್ತರ ಅಪೇಕ್ಷೆಯ ಮೇರೆಗೆ ಬಿಜೆಪಿ ಶುದ್ಧೀಕರಣಕ್ಕಾಗಿ ಕೆ.ಎಸ್.ಈಶ್ವರಪ್ಪ ಅವರು ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಹೇಳಿದರು.
ರಾಜಕೀಯದಲ್ಲಿ ಬಲಾಢ್ಯ ಸಮುದಾಯಗಳ ಪ್ರಭಾವ ಹೆಚ್ಚಾಗಿದೆ ಎಂದು ಆರೋಪಿಸಿದ ಅವರು, ಬಡವರ ಮಕ್ಕಳು ರಾಜಕೀಯದಲ್ಲಿ ಬೆಳೆಯಲು ಅವಕಾಶ ಸಿಗಬೇಕು ಎಂದರು.
ಪಕ್ಷವನ್ನು ಒಬ್ಬರಿಂದ ಮಾತ್ರ ಕಟ್ಟಲು ಸಾಧ್ಯವಿಲ್ಲ. ಕೆ.ಎಸ್.ಈಶ್ವರಪ್ಪ ಸೇರಿದಂತೆ ಅನೇಕ ಹಿರಿಯ ನಾಯಕರು ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ. ಕಾರ್ಯಕರ್ತರು ಮೊದಲು ಮತದಾರರ ಪಟ್ಟಿಯನ್ನು ಅಧ್ಯಯನ ಮಾಡಿ, ಬಳಿಕ ಮನೆ ಮನೆಗೆ ತೆರಳಿ ಜನರೊಂದಿಗೆ ಸಂಪರ್ಕ ಬೆಳೆಸಬೇಕು ಎಂದು ಹೇಳಿದರು.
‘ಮಹಿಳಾ ಕಾರ್ಯಕರ್ತರು ಮನೆ–ಮನ ಮುಟ್ಟಬೇಕು’
ಆರ್ಎಸ್ಎಸ್ನ ಮಾಜಿ ವಿಸ್ತಾರಕರಾಗಿದ್ದ ಮಂಜಣ್ಣ ಮಾತನಾಡಿ, ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಿದರೆ ಈಶ್ವರಪ್ಪ ಅವರನ್ನು ಭಾರಿ ಅಂತರದಿಂದ ಗೆಲ್ಲಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಮನೆಗೂ ನಾಲ್ಕೈದು ಬಾರಿ ತೆರಳಿ ಮತದಾರರೊಂದಿಗೆ ಸಂಪರ್ಕ ಬೆಳೆಸಬೇಕು. ಕೆಲವರು ವಿರೋಧ ವ್ಯಕ್ತಪಡಿಸಿದರೂ ಕಾರ್ಯಕರ್ತರು ತಮ್ಮ ಕೆಲಸ ಮುಂದುವರಿಸಬೇಕು. ಮಹಿಳೆಯರ ಮನೆ ಮತ್ತು ಮನಸ್ಸನ್ನು ತಲುಪುವ ಕೆಲಸವನ್ನು ಮಹಿಳಾ ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು.
“ಬೂತ್ನಲ್ಲಿ ಗೆದ್ದರೆ ಚುನಾವಣೆ ಗೆದ್ದಂತೆ” ಎಂದು ಅವರು ಹೇಳಿದರು.
‘35 ವಾರ್ಡ್ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ’
ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ಮಾತನಾಡಿ, ತಮ್ಮ ತಂದೆ ಐದು ಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಗೆದ್ದಿದ್ದಾರೆ. ಪಕ್ಷದ ಸೂಚನೆಯಂತೆ ಚುನಾವಣೆಯಿಂದ ಹಿಂದೆ ಸರಿದು ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದರೂ, ಪಕ್ಷದೊಳಗಿನ ಕೆಲವು ನಿರ್ಧಾರಗಳ ಬಗ್ಗೆ ಪ್ರಶ್ನೆಗಳಿವೆ ಎಂದು ಹೇಳಿದರು.
ಇತರ ರಾಜ್ಯಗಳಲ್ಲಿ ಒಂದು ರೀತಿಯ ನೀತಿ ಹಾಗೂ ಶಿವಮೊಗ್ಗಕ್ಕೆ ಮತ್ತೊಂದು ರೀತಿಯ ನೀತಿ ಏಕೆ ಎಂದು ಪ್ರಶ್ನಿಸಿದ ಅವರು, ಹಿಂದುತ್ವ ಹಾಗೂ ರಾಷ್ಟ್ರಕ್ಕಾಗಿ ಕೆಲಸ ಮಾಡಿದ ತಮ್ಮ ತಂದೆಗೆ ಪಕ್ಷದಲ್ಲಿ ಸೂಕ್ತ ಅವಕಾಶ ನೀಡದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರ ಹಿಂದುತ್ವದ ಕ್ಷೇತ್ರವಾಗಿದ್ದು, ಮುಂದಿನ ಚುನಾವಣೆಯಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ಕಾಲ ಬಂದಾಗ ತೀರ್ಮಾನಿಸಲಾಗುವುದು ಎಂದರು.
“ನಾಳೆಯಿಂದಲೇ ಪ್ರತಿ ಬೂತ್ಗೆ ತೆರಳಿ ಮತದಾರರ ಪಟ್ಟಿಯನ್ನು ಪರಿಶೀಲಿಸೋಣ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿಯಿದೆ. ಈ ಅವಧಿಯಲ್ಲಿ ಪ್ರತಿಯೊಂದು ಮನೆ ಮತ್ತು ಮನಸ್ಸನ್ನು ಮುಟ್ಟಬೇಕು” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ರಾಷ್ಟ್ರಭಕ್ತರ ಬಳಗ ಕೇವಲ ಚುನಾವಣೆಯ ಉದ್ದೇಶದಿಂದ ಮಾತ್ರ ಕಾರ್ಯನಿರ್ವಹಿಸುತ್ತಿಲ್ಲ. ಸದೃಢ ಶಿವಮೊಗ್ಗ ನಿರ್ಮಾಣವೇ ಸಂಘಟನೆಯ ಗುರಿ ಎಂದು ಹೇಳಿದರು.
ಗೋ ಸಂರಕ್ಷಣೆ, ಪರಿಸರ ಹೋರಾಟದ ಉಲ್ಲೇಖ
ರಾಷ್ಟ್ರಭಕ್ತರ ಬಳಗದ ವಿವಿಧ ಜನಪರ ಕಾರ್ಯಗಳನ್ನು ವಿವರಿಸಿದ ಕಾಂತೇಶ್, ಗೋವರ್ಧನ ಟ್ರಸ್ಟ್ ಹಾಗೂ ಶ್ರೀಗಂಧದ ಮೂಲಕ ಜನರನ್ನು ತಲುಪುವ ಕೆಲಸ ಮಾಡಲಾಗಿದೆ ಎಂದರು.
ಪರಿಸರ ಸಂರಕ್ಷಣೆಗಾಗಿ 150 ಬಸ್ಗಳಲ್ಲಿ ಸುಮಾರು 6,500 ಜನರನ್ನು ಸಂಘಟಿಸಿ ಶಿವಮೊಗ್ಗದಿಂದ ಸಾಗರಕ್ಕೆ ತೆರಳಿ ಪಂಪ್ಸ್ಟೋರೇಜ್ ಯೋಜನೆ ವಿರುದ್ಧ ಹೋರಾಟ ನಡೆಸಲಾಗಿದೆ ಎಂದು ಹೇಳಿದರು.
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಹಸುಗಳು, ಚರಂಡಿಗೆ ಬಿದ್ದ ಹಾಗೂ ಗಾಯಗೊಂಡ ಹಸುಗಳನ್ನು ರಕ್ಷಿಸಿ ಅವುಗಳಿಗೆ ಮೇವು ಒದಗಿಸುವ ಕಾರ್ಯವನ್ನೂ ಸಂಘಟನೆ ಮಾಡಿದೆ ಎಂದು ವಿವರಿಸಿದರು.
ಮುಖ್ಯಮಂತ್ರಿ ಡಿಸೆಂಬರ್ ಅಂತ್ಯದೊಳಗೆ ಮಹಾನಗರ ಪಾಲಿಕೆ ಚುನಾವಣೆ ನಡೆಸುವುದಾಗಿ ಹೇಳಿದ್ದಾರೆ. ಹೀಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ 35 ವಾರ್ಡ್ಗಳಲ್ಲೂ ರಾಷ್ಟ್ರಭಕ್ತರ ಬಳಗದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸುವ ಗುರಿ ಹೊಂದಲಾಗಿದೆ ಎಂದು ಕಾಂತೇಶ್ ಘೋಷಿಸಿದರು.
ವಿವಿಧ ಜನಪರ ಹೋರಾಟಗಳ ಉಲ್ಲೇಖ
ಎಸ್ಐಆರ್ ಮಾಹಿತಿ ಕೇಂದ್ರ, ಆಶ್ರಯ ಬಡಾವಣೆಗಾಗಿ ಹೋರಾಟ, ಹೂವಿನ ಮಾರುಕಟ್ಟೆ ಕಟ್ಟಡ ಪೂರ್ಣಗೊಂಡಿದ್ದರೂ ಬಡ ವ್ಯಾಪಾರಿಗಳಿಗೆ ಹಂಚಿಕೆ ಮಾಡದಿರುವ ವಿಚಾರ, ಇ-ಸ್ವತ್ತು ಮಾಡಿಕೊಡುವಲ್ಲಿ ಲಂಚದ ಆರೋಪ ಸೇರಿದಂತೆ ಹಲವು ವಿಚಾರಗಳಲ್ಲಿ ರಾಷ್ಟ್ರಭಕ್ತರ ಬಳಗ ಹೋರಾಟ ನಡೆಸಿದೆ ಎಂದು ಕಾಂತೇಶ್ ಹೇಳಿದರು.
ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಜಾಗದ ವಿಚಾರದಲ್ಲಿಯೂ ಸೂಕ್ತ ದಾಖಲೆಗಳನ್ನು ಪಾಲಿಕೆ, ಜಿಲ್ಲಾಡಳಿತ ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಿ ಆ ಜಾಗವನ್ನು ಉಳಿಸಿಕೊಳ್ಳುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುರೇಶ್ ಶೆಟ್ಟಿ, ಸತ್ಯನಾರಾಯಣ, ಈ ವಿಶ್ವಾಸ್, ಮೋಹನ್ ಜಾದವ್, ರಮೇಶ್ ಬಾಬು ಜಾದವ್, ಶ್ರೀಕಾಂತ್, ಬಾಲು, ಆನಂದಣ್ಣ, ಗುರುಶೆಟ್, ರಾಜು, ಶಿವಾಜಿ, ಲತಾ ಗಣೇಶ್, ಸುವರ್ಣ ಶಂಕರ್, ಲಕ್ಷ್ಮಿ ಶಂಕರ್ ನಾಯಕ್, ಕೆಂಪಮ್ಮ, ಅನಿತಾ ಮಂಜುನಾಥ್, ಸೀತಾಲಕ್ಷ್ಮಿ, ಸಿರೀಶ್, ಮೋಹನ್, ಕುಬೇರಪ್ಪ, ಗಾರೆ ನಾಗಣ್ಣ ಸೇರಿದಂತೆ ರಾಷ್ಟ್ರಭಕ್ತರ ಬಳಗದ ಪ್ರಮುಖರು ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






