ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ (Shivamogga) ನಗರದ ಮಂಜುನಾಥ ಚಿತ್ರಮಂದಿರದ ಪಕ್ಕದ ಕನ್ಸರ್‌ವೆನ್ಸಿ ಹಾಗೂ ಎಸ್.ಎಲ್.ಎನ್. ರಸ್ತೆಯಲ್ಲಿರುವ ಫುಡ್‌ಕೋರ್ಟ್‌ಗೆ (Food Court) ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡಿ ವಿವಿಧ ಆಹಾರ ಮತ್ತು ಖಾದ್ಯಗಳನ್ನು ಸೇವಿಸುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ತಯಾರಿಕಾ ಸ್ಥಳಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರು ಫುಡ್‌ಕೋರ್ಟ್ ಮಾಲೀಕರು ಹಾಗೂ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರು ತಾಲೂಕು ಆರೋಗ್ಯಾಧಿಕಾರಿಗಳು, ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ ಫುಡ್‌ಕೋರ್ಟ್‌ಗೆ ಖುದ್ದು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಆಹಾರ ತಯಾರಿಸುವ ಸ್ಥಳಗಳು, ಸುತ್ತಮುತ್ತಲಿನ ಪರಿಸರ, ಸ್ವಚ್ಛತೆ, ನೈರ್ಮಲ್ಯ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು.
ಫುಡ್‌ಕೋರ್ಟ್‌ನಲ್ಲಿ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಹಾರ ಸೇವಿಸುತ್ತಿರುವುದರಿಂದ, ಆಹಾರ ತಯಾರಿಸುವ ಸ್ಥಳವನ್ನು ಯಾವುದೇ ಕಾರಣಕ್ಕೂ ಅಶುಚಿತ್ವದಿಂದ ಕೂಡಿರದಂತೆ ನೋಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರನ್ನು ಸಾರ್ವಜನಿಕರಿಗೆ ಒದಗಿಸುವುದರ ಜೊತೆಗೆ, ಆಹಾರ ತಯಾರಿಕೆಗೂ ಶುದ್ಧ ನೀರನ್ನೇ ಬಳಸಬೇಕು ಎಂದು ಅವರು ಅಂಗಡಿ ಮಾಲೀಕರಿಗೆ ಸೂಚಿಸಿದರು.
ಅಲ್ಲದೇ, ಫುಡ್‌ಕೋರ್ಟ್‌ನ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಾಲಕಾಲಕ್ಕೆ ಅಗತ್ಯ ಔಷಧಿ ಸಿಂಪಡಣೆ ನಡೆಸಿ ಸೊಳ್ಳೆ, ಕೀಟಗಳು ಹಾಗೂ ಇತರೆ ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಮಾಲೀಕರಿಗೆ ನಿರ್ದೇಶನ ನೀಡಿದರು.
ನೈರ್ಮಲ್ಯ ಕಾಪಾಡದಿದ್ದರೆ ಪರವಾನಗಿ ರದ್ದು
ಫುಡ್‌ಕೋರ್ಟ್‌ನಲ್ಲಿರುವ ಅಂಗಡಿಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳದಿರುವುದು ಕಂಡುಬಂದಲ್ಲಿ, ಅಂತಹ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಮೈತ್ರಿ ಎಚ್ಚರಿಸಿದರು. ನಿಯಮಗಳನ್ನು ಪಾಲಿಸದೆ ಮುಂದುವರಿದರೆ ನೀಡಲಾಗಿರುವ ಪರವಾನಗಿಯನ್ನೇ ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಪರಿಶೀಲನೆಯ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು ಕಂಡುಬಂದ ಬಹುತೇಕ ಎಲ್ಲಾ ಅಂಗಡಿಗಳ ಮಾಲೀಕರಿಗೆ ತಕ್ಷಣವೇ ನೋಟಿಸ್ ಜಾರಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
ಇದಲ್ಲದೆ, ಮುಂದಿನ 15 ದಿನಗಳೊಳಗಾಗಿ ಫುಡ್‌ಕೋರ್ಟ್‌ನ ಎಲ್ಲಾ ಅಂಗಡಿಗಳ ಮಾಲೀಕರ ಸಭೆ ಕರೆದು, ಆಹಾರ ಸುರಕ್ಷತೆ, ಸ್ವಚ್ಛತೆ, ಕುಡಿಯುವ ನೀರಿನ ಗುಣಮಟ್ಟ ಹಾಗೂ ಆಹಾರ ತಯಾರಿಕೆಯಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಸ್ಪಷ್ಟ ಸೂಚನೆ ನೀಡಲಾಗುವುದು ಎಂದು ಉಪವಿಭಾಗಾಧಿಕಾರಿ ತಿಳಿಸಿದರು.
ರಾಸಾಯನಿಕ ಬಳಕೆ ಕುರಿತು ಅನುಮಾನ; ಖಾದ್ಯಗಳ ಮಾದರಿ ಸಂಗ್ರಹ
ಪರಿಶೀಲನೆಯ ಸಂದರ್ಭದಲ್ಲಿ ಕೆಲವು ಅಂಗಡಿಗಳಲ್ಲಿ ತಯಾರಿಸಲಾಗಿದ್ದ ಖಾದ್ಯಗಳಲ್ಲಿ ರಾಸಾಯನಿಕ ಪದಾರ್ಥಗಳನ್ನು ಬಳಸಿರುವ ಸಾಧ್ಯತೆ ಕುರಿತು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ಅಂತಹ ಕೆಲವು ಅಂಗಡಿಗಳಲ್ಲಿನ ತಯಾರಾದ ಖಾದ್ಯಗಳ ತುಣುಕುಗಳ ಮಾದರಿಯನ್ನು ಅಧಿಕಾರಿಗಳು ಪರೀಕ್ಷೆಗಾಗಿ ಸಂಗ್ರಹಿಸಿದರು.
ಸಂಗ್ರಹಿಸಿರುವ ಮಾದರಿಗಳನ್ನು ಸಂಬಂಧಪಟ್ಟ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿ, ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಯಿತು. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಅನುಮತಿಸದ ಅಥವಾ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.
ಅದೇ ರೀತಿ, ಆಹಾರ ತಯಾರಿಕೆಯಲ್ಲಿ ಉತ್ತಮ ಗುಣಮಟ್ಟದ ಅಡುಗೆ ಎಣ್ಣೆಯನ್ನು ಮಾತ್ರ ಬಳಸಬೇಕು. ಪದೇಪದೇ ಬಳಸಿದ ಅಥವಾ ಕಳಪೆ ಗುಣಮಟ್ಟದ ಎಣ್ಣೆಯನ್ನು ಬಳಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಈ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು.
Shivamogga : ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿ
ಫುಡ್‌ಕೋರ್ಟ್‌ನಲ್ಲಿನ ಸ್ವಚ್ಛತೆ, ನೈರ್ಮಲ್ಯ, ಆಹಾರ ತಯಾರಿಕೆಯ ಗುಣಮಟ್ಟ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಪರಿಶೀಲನೆಯ ವೇಳೆ ಕಂಡುಬಂದ ಎಲ್ಲಾ ಅಂಶಗಳನ್ನು ಒಳಗೊಂಡ ಸಮಗ್ರ ಪರಿಶೀಲನಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ. ಮೈತ್ರಿ ತಿಳಿಸಿದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಹಾರ ಸೇವಿಸುವ ಇಂತಹ ಸ್ಥಳಗಳಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ. ಅಂಗಡಿ ಮಾಲೀಕರು ಅಧಿಕಾರಿಗಳ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ಕಂದಾಯಾಧಿಕಾರಿ ಸತೀಶ್, ದೀಪಕ್, ದೊಡ್ಡಬಸಪ್ಪರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









