ಕಲ್ಪ ಮೀಡಿಯಾ ಹೌಸ್ | ಎನ್.ಆರ್.ಪುರ(ಚಿಕ್ಕಮಗಳೂರು) |
ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಭೈರನಕಟ್ಟೆ ಸಮೀಪದ ಭದ್ರಾ ಹಿನ್ನೀರಿನಲ್ಲಿ (Bhadra River) ಈಜಲು ತೆರಳಿದ್ದ ಶಿವಮೊಗ್ಗದ (Shivamogga) ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತ ಯುವಕನನ್ನು ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿ ನಿಖಿಲ್ ಆರ್. ಸಿಂಗ್ (23) ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ನಿಖಿಲ್ ತನ್ನ ಮೂವರು ಸ್ನೇಹಿತರೊಂದಿಗೆ ಭೈರನಕಟ್ಟೆ ಸಮೀಪದ ಭದ್ರಾ ಹಿನ್ನೀರಿನ ಪ್ರದೇಶಕ್ಕೆ ತೆರಳಿದ್ದ ಎನ್ನಲಾಗಿದೆ. ನಿಖಿಲ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸ್ನೇಹಿತರು ಅಲ್ಲಿಗೆ ತೆರಳಿ ಪಾರ್ಟಿ ನಡೆಸಿದ್ದರು ಎಂದು ತಿಳಿದುಬಂದಿದೆ.
Also Read>> ಭದ್ರಾವತಿ ಪೊಲೀಸರಿಗೆ ಬಲ; 4 ಬುಲೆರೋ ನಿಯೋ ವಾಹನ ಹಸ್ತಾಂತರ : ಶಾಸಕರ ಪ್ರಯತ್ನದ ಫಲ
ಪಾರ್ಟಿ ಬಳಿಕ ನಿಖಿಲ್ ಹಾಗೂ ಮತ್ತೋರ್ವ ಸ್ನೇಹಿತ ಭದ್ರಾ ಹಿನ್ನೀರಿನಲ್ಲಿ ಈಜಲು ಇಳಿದಿದ್ದರು ಎನ್ನಲಾಗಿದೆ. ಈ ವೇಳೆ ನಿಖಿಲ್ ನೀರಿನಲ್ಲಿ ಮುಳುಗಿದ್ದು, ಬಳಿಕ ಮೇಲಕ್ಕೆ ಬರಲು ಸಾಧ್ಯವಾಗದೆ ನೀರುಪಾಲಾಗಿದ್ದಾನೆ ಎಂದು ತಿಳಿದುಬಂದಿದೆ.
Chikkamagaluru : ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ
ಘಟನೆಯ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ಕೆಲಕಾಲ ಶೋಧ ನಡೆಸಿದ ಬಳಿಕ ನಿಖಿಲ್‌ನ ಮೃತದೇಹವನ್ನು ಹಿನ್ನೀರಿನಿಂದ ಹೊರತೆಗೆಯಲಾಯಿತು.
ಘಟನೆಯಿಂದ ನಿಖಿಲ್ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ಆಘಾತ ವ್ಯಕ್ತವಾಗಿದೆ. ಭದ್ರಾ ಹಿನ್ನೀರಿನಂತಹ ಆಳವಾದ ನೀರಿನ ಪ್ರದೇಶಗಳಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










