ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಗೆ ಇನ್ಮುಂದೆ ಮುಖಚರ್ಯೆ ಆಧಾರಿತ ಫೇಶಿಯಲ್ ಹಾಜರಾತಿ ವ್ಯವಸ್ಥೆ (Facial Attendance) ಜಾರಿಗೆ ಬರಲಿದೆ.
ಈ ಸಂಬಂಧ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಸರ್ಕಾರಿ ಶಾಲೆಗಳ ಮಾದರಿಯಲ್ಲಿ ಪಾಲಿಕೆ ಶಾಲೆಗಳಲ್ಲೂ ವ್ಯವಸ್ಥೆ
ಮಂಗಳವಾರ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ವಿವಿಧ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ವಿದ್ಯಾರ್ಥಿಗಳ ಹಾಜರಾತಿಗೆ ಮುಖಚರ್ಯೆ ಆಧಾರಿತ ವ್ಯವಸ್ಥೆ ಜಾರಿಯಲ್ಲಿದೆ ಎಂದು ತಿಳಿಸಿದರು.
ಅದೇ ಮಾದರಿಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿರುವ ಪಾಲಿಕೆ ಶಾಲೆಗಳಲ್ಲೂ ವಿದ್ಯಾರ್ಥಿಗಳ ಹಾಜರಾತಿ ದಾಖಲಿಸಲು ಫೇಶಿಯಲ್ ರೆಕಗ್ನಿಷನ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದರ ಜೊತೆಗೆ ಶಾಲಾ ಮಕ್ಕಳಿಗೆ ಸಮವಸ್ತ್ರಗಳನ್ನು ನಿಗದಿತ ಸಮಯಕ್ಕೆ ವಿತರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
Also read>> 4 ತಿಂಗಳ ಅವಳಿ ಹೆಣ್ಣುಮಕ್ಕಳನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ; ಬಳಿಕ ಆತ್ಮಹತ್ಯೆಗೆ ಯತ್ನ
ಶಾಲೆಗಳ ಶೌಚಾಲಯ ನಿರ್ವಹಣೆಗೆ ಆದ್ಯತೆ
ಪಾಲಿಕೆ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜುಗಳ ಶೌಚಾಲಯಗಳ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದು ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಅಗತ್ಯವಿರುವ ಶಾಲೆಗಳಲ್ಲಿ ಸಿಎಸ್‌ಆರ್ ಅನುದಾನ ಬಳಸಿಕೊಂಡು ಹೊಸ ಶೌಚಾಲಯಗಳನ್ನು ನಿರ್ಮಿಸಬೇಕು. ಈಗಾಗಲೇ ನಿರ್ಮಿಸಿರುವ ಶೌಚಾಲಯಗಳ ನಿರ್ವಹಣೆಯೂ ಸಮರ್ಪಕವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಬೀದಿ ನಾಯಿಗಳ ಸಂತಾನಹರಣಕ್ಕೆ ವೇಗ
ಸಭೆಯಲ್ಲಿ ನಗರದಲ್ಲಿನ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಕಾರ್ಯಾಚರಣೆಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಸ್ತುತ ಪ್ರತಿದಿನ ಸುಮಾರು 280 ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದು, ತಿಂಗಳಿಗೆ ಸುಮಾರು 7,000 ನಾಯಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಾರ್ಷಿಕವಾಗಿ ಸುಮಾರು 80,000 ಎಬಿಸಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂದು ಸಭೆಗೆ ತಿಳಿಸಲಾಯಿತು.
ನಗರದಲ್ಲಿ ಎಬಿಸಿ ಕಾರ್ಯಾಚರಣೆಗಳನ್ನು ಮತ್ತಷ್ಟು ಹೆಚ್ಚಿಸಲು ಅಗತ್ಯವಿರುವ ಕಡೆಗಳಲ್ಲಿ ಕೆನಲ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಚಿವರು ಸೂಚಿಸಿದರು.
GBA : ಎಲ್ಲಾ ಪಾಲಿಕೆಗಳಲ್ಲೂ ಪ್ರಾಣಿಗಳ ಚಿತಾಗಾರ ನಿರ್ಮಾಣಕ್ಕೆ ಸೂಚನೆ
ಪ್ರಸ್ತುತ ಬೆಂಗಳೂರಿನ ಸುಮ್ಮನಹಳ್ಳಿಯಲ್ಲಿ ಮಾತ್ರ ಪ್ರಾಣಿಗಳ ಚಿತಾಗಾರವಿದೆ. ಉಳಿದ ಪಾಲಿಕೆಗಳ ವ್ಯಾಪ್ತಿಯಲ್ಲೂ ಅಗತ್ಯವಿರುವ ಕಡೆಗಳಲ್ಲಿ ಪ್ರಾಣಿಗಳ ಚಿತಾಗಾರಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ 175 ಪಾಲಿಕೆ ಶಿಕ್ಷಣ ಸಂಸ್ಥೆಗಳು
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಒಟ್ಟು 175 ಪಾಲಿಕೆ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 94 ನರ್ಸರಿ, 18 ಪ್ರಾಥಮಿಕ, 36 ಪ್ರೌಢ, 21 ದ್ವಿತೀಯ, 4 ಪದವಿ ಹಾಗೂ 2 ಸ್ನಾತಕೋತ್ತರ ಶಿಕ್ಷಣ ಸಂಸ್ಥೆಗಳು ಸೇರಿವೆ.
ಪ್ರಸಕ್ತ ಸಾಲಿನಲ್ಲಿ ಒಟ್ಟು 22,210 ವಿದ್ಯಾರ್ಥಿಗಳು ಪಾಲಿಕೆ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೋಧನೆ ನೀಡಲು 115 ಖಾಯಂ ಶಿಕ್ಷಕರು ಹಾಗೂ 841 ಅತಿಥಿ ಶಿಕ್ಷಕರು ಸೇರಿದಂತೆ ಒಟ್ಟು 956 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುಷಮಾ ಗೋಡಬೋಲೆ, ನಿತೀಶ್, ವೆಂಕಟಾಚಲಪತಿ ಸೇರಿದಂತೆ ವಿವಿಧ ನಗರ ಪಾಲಿಕೆಗಳ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








