ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕುಟುಂಬ, ಉದ್ಯೋಗ ಹಾಗೂ ದಿನನಿತ್ಯದ ಜವಾಬ್ದಾರಿಗಳ ನಡುವೆಯೂ ತಮ್ಮ ನೃತ್ಯದ ಮೇಲಿನ ಪ್ರೀತಿಯನ್ನು ಜೀವಂತವಾಗಿರಿಸಿಕೊಂಡಿರುವ ತಾಯಂದಿರ ಕನಸುಗಳಿಗೆ ಹೊಸ ರೆಕ್ಕೆ ನೀಡಲು ಜೀ ಕನ್ನಡ ವಾಹಿನಿ (Zee Kannada) ಮತ್ತೊಮ್ಮೆ ಸಜ್ಜಾಗಿದೆ. ಬಹುನಿರೀಕ್ಷಿತ (Dance Karnataka Dance) ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್–ಸೂಪರ್ ಮಾಮ್’ ರಿಯಾಲಿಟಿ ಶೋ ಸೆಪ್ಟೆಂಬರ್ 12ರಿಂದ ಆರಂಭವಾಗಲಿದೆ.
ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸುವ ಪ್ರತಿಭಾವಂತ ತಾಯಂದಿರು ತಮ್ಮ ನೃತ್ಯ ಕೌಶಲ್ಯವನ್ನು ಅನಾವರಣಗೊಳಿಸಲಿದ್ದಾರೆ.
ಬದಿಗೊತ್ತಿದ್ದ ಕನಸುಗಳಿಗೆ ಮತ್ತೆ ಜೀವ
ಅಮ್ಮಂದಿರು ತಮ್ಮ ಜೀವನದ ಬಹುಪಾಲು ಸಮಯವನ್ನು ಕುಟುಂಬ ಮತ್ತು ಮಕ್ಕಳಿಗಾಗಿ ಮೀಸಲಿಡುತ್ತಾರೆ. ಈ ಜವಾಬ್ದಾರಿಗಳ ನಡುವೆ ಅವರ ವೈಯಕ್ತಿಕ ಆಸೆ-ಆಕಾಂಕ್ಷೆಗಳು ಹಾಗೂ ಕನಸುಗಳು ಹಲವು ಬಾರಿ ಹಿಂದೆ ಸರಿಯುತ್ತವೆ. ಅಂತಹ ತಾಯಂದಿರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ಆತ್ಮವಿಶ್ವಾಸದಿಂದ ಮತ್ತೆ ವೇದಿಕೆಯೇರಲು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್–ಸೂಪರ್ ಮಾಮ್’ ವಿಶೇಷ ವೇದಿಕೆಯಾಗಲಿದೆ.
ಆಡಿಷನ್ ಸಂಚಿಕೆಗಳಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ತಾಯಂದಿರನ್ನು ಪರಿಚಯಿಸಲಾಗುತ್ತದೆ. ತಮ್ಮ ನೃತ್ಯ ಪ್ರತಿಭೆಯ ಜೊತೆಗೆ ವೈಯಕ್ತಿಕ ಬದುಕಿನ ಪಯಣ, ಹೋರಾಟ, ಕನಸುಗಳು ಹಾಗೂ ಆಕಾಂಕ್ಷೆಗಳನ್ನೂ ಅವರು ಹಂಚಿಕೊಳ್ಳಲಿದ್ದಾರೆ.
Also Read>> ಹುತಾತ್ಮ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ತ್ಯಾಗ ಮರೆಯಲಾಗದು: ನ್ಯಾ.ಮಂಜುನಾಥ
ಕುಟುಂಬದ ಜವಾಬ್ದಾರಿಗಳ ನಡುವೆ ವರ್ಷಗಳಿಂದ ಬದಿಗೊತ್ತಿದ್ದ ತಮ್ಮ ಕನಸುಗಳಿಗೆ ಮತ್ತೊಮ್ಮೆ ಆದ್ಯತೆ ನೀಡುತ್ತಿರುವ ತಾಯಂದಿರ ಕಥೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿವೆ.
ತಾರೆಯರ ತೀರ್ಪುಗಾರರ ಬಳಗ
ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮ ವಿಶಿಷ್ಟ ನಿರೂಪಣಾ ಶೈಲಿಯ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಇನ್ನು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿರುವ ತೀರ್ಪುಗಾರರ ಬಳಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಖ್ಯಾತ ನಿರ್ದೇಶಕ ತರುಣ್ ಸುಧೀರ್, ನಟ ವಿಜಯ್ ರಾಘವೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇರಲಿದ್ದಾರೆ.
ತಮ್ಮ ಅನುಭವ ಮತ್ತು ವಿಭಿನ್ನ ದೃಷ್ಟಿಕೋನಗಳ ಮೂಲಕ ತೀರ್ಪುಗಾರರು ಸ್ಪರ್ಧಿಗಳ ಪ್ರದರ್ಶನವನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ, ಅವರಿಗೆ ಅಗತ್ಯ ಮಾರ್ಗದರ್ಶನವನ್ನೂ ನೀಡಲಿದ್ದಾರೆ.
Dance Karnataka Dance : ವಿಭಿನ್ನ ಕಥೆ, ವಿಭಿನ್ನ ನೃತ್ಯ ಶೈಲಿ
ಕರ್ನಾಟಕದ ವಿವಿಧ ಹಿನ್ನೆಲೆಯಿಂದ ಬಂದಿರುವ ತಾಯಂದಿರು ತಮ್ಮದೇ ಆದ ವ್ಯಕ್ತಿತ್ವ, ಅನುಭವ ಮತ್ತು ನೃತ್ಯ ಶೈಲಿಯೊಂದಿಗೆ ವೇದಿಕೆಯೇರಲಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿಯ ಬದುಕಿನ ಕಥೆ ಹಾಗೂ ವಿಭಿನ್ನ ನೃತ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿವೆ.
ಕುಟುಂಬದವರ ಕನಸುಗಳಿಗೆ ಸದಾ ಬೆಂಬಲವಾಗಿ ನಿಂತಿರುವ ಈ ತಾಯಂದಿರು, ಇದೀಗ ತಮ್ಮದೇ ಕನಸುಗಳನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಡಲಿದ್ದಾರೆ.
ಸೆಪ್ಟೆಂಬರ್ 12 ಮತ್ತು 13ರಂದು ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್–ಸೂಪರ್ ಮಾಮ್’ ವೀಕ್ಷಿಸಬಹುದು. ಕಾರ್ಯಕ್ರಮದ ಸಂಚಿಕೆಗಳನ್ನು ZEE5ನಲ್ಲಿಯೂ ವೀಕ್ಷಿಸುವ ಅವಕಾಶವಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








