ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
‘ಕನ್ನಡದ ಶಿವಮಣಿ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಡ್ರಮ್ಮರ್ ದೇವ (64) (Drummer Deva) ಅವರು ತೀವ್ರ ಅನಾರೋಗ್ಯದಿಂದ ಭಾನುವಾರ ನಿಧನರಾದರು. ಕಳೆದ ಮೂರೂವರೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಗ್ಯಾಂಗ್ರಿನ್ (Gangrene) ಸಮಸ್ಯೆಯಿಂದಾಗಿ ಒಂದು ಕಾಲನ್ನು ಕಳೆದುಕೊಂಡಿದ್ದರು. ಆದರೂ ಧೃತಿಗೆಡದೆ ಕೃತಕ ಕಾಲಿನ ನೆರವಿನಿಂದಲೂ ಡ್ರಮ್ಸ್ ನುಡಿಸುವುದನ್ನು ಮುಂದುವರಿಸಿದ್ದರು.
ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೇವ ಅವರು ಇತ್ತೀಚೆಗೆ ಮನೆಗೆ ಮರಳಿದ್ದರು. ಆದರೆ, ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಭಾನುವಾರ ಅವರು ಕೊನೆಯುಸಿರೆಳೆದರು.
Drummer Deva: 300ಕ್ಕೂ ಅಧಿಕ ಹಾಡುಗಳಿಗೆ ಡ್ರಮ್ಸ್
ಕನ್ನಡ ಚಿತ್ರರಂಗದಲ್ಲಿ ದೇವ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ವರನಟ ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ಪ್ರಮುಖ ನಟರ 300ಕ್ಕೂ ಅಧಿಕ ಸಿನಿಮಾಗೀತೆಗಳಿಗೆ ಅವರು ಡ್ರಮ್ಸ್ ನುಡಿಸಿದ್ದರು.
ಸಾಧುಕೋಕಿಲ, ಗುರುಕಿರಣ್ ಸೇರಿದಂತೆ ಕನ್ನಡದ ಹಲವು ಸಂಗೀತ ನಿರ್ದೇಶಕರೊಂದಿಗೆ ದೇವ ಅವರು ಕೆಲಸ ಮಾಡಿದ್ದರು. ಡ್ರಮ್ಮರ್ ಆಗಿ ಮಾತ್ರವಲ್ಲದೆ ಸಂಗೀತ ನಿರ್ದೇಶಕರಾಗಿಯೂ ಅವರು ಗುರುತಿಸಿಕೊಂಡಿದ್ದರು. ‘5 ಈಡಿಯಟ್ಸ್’ ಹಾಗೂ ‘ಪ್ರೀತಿ ನೀ ಹಿಂಗ್ಯಾಕೆ’ ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
Also Read>> ದೀನ್ ದಯಾಳ್ ಉಪಾಧ್ಯಾಯರು ಯುವಕರಿಗೆ ಮಾದರಿ: ಸುರೇಶ್ ಎನ್. ಋಗ್ವೇದಿ
ಕೊನೆಯ ಕ್ಷಣದವರೆಗೂ ಡ್ರಮ್ಸ್ ಮೇಲೆಯೇ ಒಲವು
ದೇವ ಅವರ ನಿಧನದ ಕುರಿತು ಪುತ್ರಿ ರಿಶೋನಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಡ್ರಮ್ಸ್ ಎಂದರೆ ತಮ್ಮ ತಂದೆಗೆ ಅಪಾರ ಪ್ರೀತಿ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೂ ಬೆಡ್ ಮೇಲೆಯೇ ಡ್ರಮ್ಸ್ ನುಡಿಸುತ್ತಿದ್ದರು. ‘ಕೈಗೆ ಸ್ಟಿಕ್ಸ್ ಕೊಡಿ’ ಎಂದು ಕೇಳುತ್ತಿದ್ದರು. ಕಳೆದ ಎರಡು ದಿನಗಳಿಂದ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಭಾನುವಾರ ನಮ್ಮನ್ನು ಅಗಲಿದ್ದಾರೆ ಎಂದು ರಿಶೋನಾ ಕಣ್ಣೀರಿಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












