ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೋಗಿಯ ಬದುಕಿಗೆ ಭರವಸೆಯಾಗಬೇಕಾದ ಔಷಧವೇ ನಕಲಿಯ ರೂಪದಲ್ಲಿ ಆತನ ಜೀವಕ್ಕೆ ಅಪಾಯ ತಂದೊಡ್ಡುವುದು ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಗಂಭೀರ ವಿಚಾರವಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಹಾಗೂ ಜಿಲ್ಲಾ ಔಷಧ ತಜ್ಞರ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಫಾರ್ಮಸಿಸ್ಟ್ (Pharmacist) ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿ ಅನಾರೋಗ್ಯದ ವಿರುದ್ಧ ಹೋರಾಡುತ್ತಾ, ಔಷಧದ ಮೇಲಿನ ನಂಬಿಕೆಯಿಂದ ತನ್ನ ಬದುಕನ್ನು ಮುನ್ನಡೆಸುತ್ತಿರುವ ಸಂದರ್ಭದಲ್ಲಿ ಆತನ ಕೈಗೆ ನಕಲಿ ಔಷಧ (Fake Medicine) ತಲುಪಿ ಜೀವಕ್ಕೆ ಅಪಾಯ ಎದುರಾಗುವುದು ಅತ್ಯಂತ ವಿಷಾದನೀಯ ಎಂದು ಹೇಳಿದರು.
ಔಷಧದ ಗುಣಮಟ್ಟ ಕಾಪಾಡುವುದು ಸಾಮಾಜಿಕ ಹೊಣೆಗಾರಿಕೆ
ಔಷಧವೆಂದರೆ ಕೇವಲ ಒಂದು ವಸ್ತುವಲ್ಲ. ಅದು ರೋಗಿಯ ಬದುಕಿನ ಮೇಲಿರುವ ನಂಬಿಕೆಯ ಪ್ರತೀಕವಾಗಿದೆ. ಆ ನಂಬಿಕೆಗೆ ಧಕ್ಕೆ ಬಾರದಂತೆ ಔಷಧಗಳ ಗುಣಮಟ್ಟವನ್ನು ಕಾಪಾಡುವುದು ಪ್ರತಿಯೊಬ್ಬ ಫಾರ್ಮಸಿಸ್ಟ್ನ ವೃತ್ತಿಪರ ಕರ್ತವ್ಯದ ಜತೆಗೆ ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಔಷಧ ಕ್ಷೇತ್ರವು ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟದ ಔಷಧಗಳ ಲಭ್ಯತೆ, ಅವುಗಳ ಸರಿಯಾದ ಸಂಗ್ರಹಣೆ, ವಿತರಣೆ ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಲಪಡಿಸುವ ಅಗತ್ಯವಿದೆ ಎಂದರು.
ಔಷಧ ನಿಯಂತ್ರಣ ಮತ್ತು ಮೇಲ್ವಿಚಾರಣಾ ಕ್ಷೇತ್ರದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರ ಜೊತೆಗೆ ನಿರಂತರ ಮೇಲ್ವಿಚಾರಣೆ ನಡೆಸಬೇಕು. ನಕಲಿ ಔಷಧಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ತಡೆಯಲು ಸಂಬಂಧಿಸಿದ ಎಲ್ಲ ಇಲಾಖೆಗಳು ಹಾಗೂ ವೃತ್ತಿಪರರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
Fake Medicine: ನಕಲಿ ಔಷಧ ಕಂಡುಬಂದರೆ ಮಾಹಿತಿ ನೀಡಿ
ನಕಲಿ ಅಥವಾ ಅನುಮಾನಾಸ್ಪದ ಔಷಧಗಳ ಕುರಿತು ಯಾವುದೇ ಮಾಹಿತಿ ಸಾರ್ವಜನಿಕರ ಗಮನಕ್ಕೆ ಬಂದರೆ ಅದನ್ನು ನಿರ್ಲಕ್ಷಿಸದೆ ಕೂಡಲೇ ಆರೋಗ್ಯ ಇಲಾಖೆ ಅಥವಾ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ಪ್ರಭುಲಿಂಗ ಕವಳಿಕಟ್ಟಿ ಮನವಿ ಮಾಡಿದರು.
ಸಮಯೋಚಿತವಾಗಿ ಮಾಹಿತಿ ನೀಡುವುದರಿಂದ ದೊಡ್ಡ ಅಪಾಯವನ್ನು ಆರಂಭದಲ್ಲಿಯೇ ತಡೆಯಲು ಸಾಧ್ಯವಾಗುತ್ತದೆ. ನಕಲಿ ಔಷಧಗಳ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಪ್ರಯತ್ನಗಳ ಜತೆಗೆ ಫಾರ್ಮಸಿಸ್ಟ್ಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವಾಗಿದೆ ಎಂದರು.
Also Read>> ಶಿವಮೊಗ್ಗ | ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟನೆ
ಸರ್ಕಾರ, ಫಾರ್ಮಸಿಸ್ಟ್ಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಆರೋಗ್ಯ ಸುರಕ್ಷತೆಯ ಬಲಿಷ್ಠ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.
ಉತ್ತಮ ಫಾರ್ಮಸಿಸ್ಟ್ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ‘ಉತ್ತಮ ಫಾರ್ಮಸಿಸ್ಟ್’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎ. ಶ್ರೀನಾಥ್ ಹಾಗೂ ಔಷಧ ಮಾರಾಟ ಕ್ಷೇತ್ರದಲ್ಲಿನ ಸೇವೆಗಾಗಿ ಭೂಪಾಳಂ ಶಂಕರ ಪ್ರದೀಪ್ ಅವರಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ ‘ಉತ್ತಮ ಫಾರ್ಮಸಿಸ್ಟ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್.ಎನ್. ಶ್ರೀಹರ್ಷ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ಕೆ.ಎನ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಹಾಯಕ ಔಷಧ ನಿಯಂತ್ರಕರಾದ ಡಾ. ವೀರೇಶ್ ಬಾಬು, ವಿಶಾಲಾಕ್ಷಿ ವಿ., ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಮಧುಕರ ಶೆಟ್ಟಿ ಹಾಗೂ ಜಿಲ್ಲಾ ಔಷಧ ತಜ್ಞರ ಸಂಘದ ಗಣೇಶ್ ಎಸ್. ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










