ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಹೆಸರಾಂತ ಭರತನಾಟ್ಯ (Bhartanatya) ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟ್ ವತಿಯಿಂದ ಗುರು ಕಲಾಭೂಷಿಣಿ ಡಾ. ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ಆಯೋಜಿಸಲಾಗಿದ್ದ “ನೃತ್ಯ ನೀರಾಜನ–14” ಕಾರ್ಯಕ್ರಮವು ಬೆಂಗಳೂರು (Bengaluru) ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ವರ್ಷದ ನೃತ್ಯ ನೀರಾಜನ ಕಾರ್ಯಕ್ರಮಕ್ಕೆ “ನೃತ್ಯಪ್ರಭಾ” ಎಂಬ ಶೀರ್ಷಿಕೆ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಗುರು ಡಾ. ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು. ಪಿ. ಲಿಖಿತಾ, ಕು. ಜಯಶ್ರೀ ವೇಣು ಕುಳಾವಿ ಹಾಗೂ ಕು. ಆರ್. ಸಮೃದ್ಧಿ ಅವರು ಭರತನಾಟ್ಯದ ವಿವಿಧ ಆಯಾಮಗಳನ್ನು ಒಳಗೊಂಡ ಮನಮೋಹಕ ನೃತ್ಯ ಪ್ರದರ್ಶನ ನೀಡಿದರು.
ಮುಖ್ಯ ಅತಿಥಿಗಳಾಗಿ ಡಾ. ಸಾಧನಾಶ್ರೀ, ಆಯುರ್ವೇದ ವೈದ್ಯರು ಹಾಗೂ ಸಾಧನಾ ಸಂಗಮ ಟ್ರಸ್ಟ್‌ನ ನಿರ್ದೇಶಕರು, ಮತ್ತು ರಜನಿ ಆರ್., ಸಹಾಯಕ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಅವರು ಉಪಸ್ಥಿತರಿದ್ದು ಯುವ ಕಲಾವಿದೆಯರಿಗೆ ಶುಭ ಹಾರೈಸಿದರು.
ಸಂಪ್ರದಾಯಬದ್ಧ ‘ಪುಷ್ಪಾಂಜಲಿ’ಯೊಂದಿಗೆ ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ರಾಗ ಅಮೃತವರ್ಷಿಣಿ, ಆದಿತಾಳದಲ್ಲಿ ಪುಷ್ಪಾಂಜಲಿ ಹಾಗೂ ಚಕ್ರವಾಕ ರಾಗದ ‘ಗಜಾನನಾಯುತಂ’ ಕೃತಿಯನ್ನು ಕಲಾವಿದೆಯರು ಪ್ರಸ್ತುತಪಡಿಸಿದರು. ನಂತರ ಖಂಡ ಅಲರಿಪು, ಅಭೋಗಿ ಜತಿಸ್ವರ ಹಾಗೂ ನೃತ್ಯಬಂಧ ಸೇರಿದಂತೆ ವಿವಿಧ ಶಾಸ್ತ್ರೀಯ ನೃತ್ಯ ಪ್ರಕಾರಗಳು ಪ್ರೇಕ್ಷಕರ ಗಮನ ಸೆಳೆದವು.
Bengaluru : ಲಿಖಿತ ಏಕವ್ಯಕ್ತಿ ಪ್ರದರ್ಶನ
ಏಕವ್ಯಕ್ತಿ ಪ್ರದರ್ಶನದಲ್ಲಿ ಲಿಖಿತ ಅವರು ಶಿವನನ್ನು ಕುರಿತ ‘ಆನಂದತಾಂಡವೇಶ್ವರ’ ಕೃತಿಯನ್ನು ನವರಸಗಳ ಸುಂದರ ಅಭಿವ್ಯಕ್ತಿಯೊಂದಿಗೆ ಪ್ರಸ್ತುತಪಡಿಸಿ ಮೆಚ್ಚುಗೆ ಪಡೆದರು. ಸಮೃದ್ಧಿ ಅವರು ‘ಓಂಕಾರಕಾರಿಣಿ’ ಕೃತಿಯಲ್ಲಿ ಬಾಣಾಸುರ ವಧೆಯ ಪ್ರಸಂಗವನ್ನು ನೃತ್ಯರೂಪದಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟರು.
ಅದೇ ರೀತಿ ಜಯಶ್ರೀ ಅವರು ವಾದಿರಾಜರ ದೇವರನಾಮ ‘ಆವಕುಲವೋ ರಂಗ’ ಮೂಲಕ ಪಾರಿಜಾತ ಕಥೆ ಹಾಗೂ ಪೂತನ ಮೋಕ್ಷದ ಕಥಾಪ್ರಸಂಗಗಳನ್ನು ಭಾವಪೂರ್ಣವಾಗಿ ಬಣ್ಣಿಸಿದರು.
ಪ್ರತಿಯೊಂದು ನೃತ್ಯ ಪ್ರಸ್ತುತಿಯಲ್ಲಿಯೂ ಗುರುಪರಂಪರೆಯ ಶೈಲಿ, ಶಾಸ್ತ್ರೀಯ ಮೌಲ್ಯಗಳು ಹಾಗೂ ಕಲಾತ್ಮಕ ಸೊಬಗು ಎದ್ದು ಕಾಣಿಸಿತು. ಏಕವ್ಯಕ್ತಿ ಹಾಗೂ ಸಮೂಹ ಪ್ರದರ್ಶನಗಳ ಮೂಲಕ ಕಲಾವಿದೆಯರು ಪ್ರೇಕ್ಷಕರ ಮನ ಗೆದ್ದು ಪ್ರಶಂಸೆಗೆ ಪಾತ್ರರಾದರು.
ಕಾರ್ಯಕ್ರಮದ ಸಮಾರೋಪದಲ್ಲಿ ರಂಜಕ ‘ಕದನಕುತುಹಲ’ ತಿಲ್ಲಾನ ಹಾಗೂ ‘ಗರುಡ ಗಮನ ಮಂಗಳಂ’ ಪ್ರಸ್ತುತಗೊಂಡು ನೃತ್ಯಯಾನಕ್ಕೆ ಮಂಗಳಕರ ತೆರೆ ಎಳೆಯಲಾಯಿತು.
Also Read>> ‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯ: ಪರಿವರ್ತನೆಯೇ ಉದ್ದೇಶ, ಖ್ಯಾತಿ-ಪ್ರಚಾರವಲ್ಲ : ರಾಘವೇಶ್ವರ ಭಾರತೀ ಶ್ರೀ
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಲಾಭಿಮಾನಿಗಳು ಯುವ ಕಲಾವಿದೆಯರ ಪ್ರತಿಭೆ ಮತ್ತು ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸಂಪೂರ್ಣ ಕಾರ್ಯಕ್ರಮದ ನೃತ್ಯ ಸಂಯೋಜನೆ, ತರಬೇತಿ ಹಾಗೂ ನಿರ್ದೇಶನವನ್ನು ಗುರು ಕಲಾಭೂಷಿಣಿ ಡಾ. ದರ್ಶಿನಿ ಮಂಜುನಾಥ್ ಅವರು ನಿರ್ವಹಿಸಿದರು. ಯುವ ಕಲಾವಿದೆಯರಿಗೆ ಶಾಸ್ತ್ರೀಯ ನೃತ್ಯದ ತರಬೇತಿ ನೀಡುವ ಜೊತೆಗೆ ಅವರ ಪ್ರತಿಭೆಯನ್ನು ವೇದಿಕೆಯಲ್ಲಿ ಅನಾವರಣಗೊಳಿಸಿದ ಗುರುಗಳ ಶ್ರಮ ಮತ್ತು ಕಲಾಸೇವೆಗೆ ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











