ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
2001ರಿಂದ 2026ರವರೆಗೆ ಗುಜರಾತ್ (Gujarat) ಹಾಗೂ ಭಾರತದಲ್ಲಿ ಜಲ ಆಡಳಿತ ವಿಕಸನಗೊಂಡ ಹಾದಿಯನ್ನು ದಾಖಲಿಸಿರುವ ‘ಫ್ರಮ್ ಗುಜರಾತ್ ಟು ಇಂಡಿಯಾ: ವಾಟರ್ ಲೆಸನ್ಸ್ ಫಾರ್ ದಿ ವರ್ಲ್ಡ್’ ಎಂಬ ನೂತನ ಅಧ್ಯಯನ ವರದಿಯನ್ನು ಬೆಂಗಳೂರಿನ ಐಐಎಂ ಕ್ಯಾಂಪಸ್‌ನಲ್ಲಿ ಬಿಡುಗಡೆ ಮಾಡಲಾಯಿತು.
ಜಾಗತಿಕ ದಕ್ಷಿಣದ ರಾಷ್ಟ್ರಗಳ ನೀತಿ ನಿರೂಪಕರು ಹಾಗೂ ಕ್ಷೇತ್ರ ಕಾರ್ಯಕರ್ತರಿಗೆ ಭಾರತದ ಜಲ ಆಡಳಿತದ ಅನುಭವದಿಂದ ದೊರೆತ ಪ್ರಮುಖ ಪಾಠಗಳನ್ನು ಈ ವರದಿ ಮುಂದಿಟ್ಟಿದೆ. ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡೇನಿಯಲ್ ಡಬ್ಲ್ಯು. ಸ್ಮಿತ್, ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್‌ಮೆಂಟ್ ಅಂಡ್ ವಾಟರ್ (CEEW) ಫೆಲೋ ನಿತಿನ್ ಬಸ್ಸಿ ಹಾಗೂ ಭಾರತ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಾಜಿ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅವರು ವರದಿಯನ್ನು ಜಂಟಿಯಾಗಿ ಸಿದ್ಧಪಡಿಸಿದ್ದಾರೆ.
Gujarat: ಗುಜರಾತ್‌ನಿಂದ ರಾಷ್ಟ್ರಮಟ್ಟಕ್ಕೆ ವಿಸ್ತರಣೆ
2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆರಂಭವಾದ ಜಲ ಆಡಳಿತದ 25 ವರ್ಷಗಳ ಪಯಣವನ್ನು ವರದಿ ವಿಶ್ಲೇಷಿಸಿದೆ. ನಿರಂತರ ಬರಗಾಲ ಮತ್ತು ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ ಬೃಹತ್ ಜಲ ಮೂಲಸೌಕರ್ಯ, ಅಂತರ್ಜಲ ಮರುಪೂರಣ, ಜಲ ಸಂರಕ್ಷಣೆ, ನೀರಿನ ಬಳಕೆಯ ದಕ್ಷತೆ, ಸಾಂಸ್ಥಿಕ ಸುಧಾರಣೆ ಹಾಗೂ ಸಮುದಾಯದ ಸಹಭಾಗಿತ್ವಕ್ಕೆ ಒತ್ತು ನೀಡಲಾಯಿತು.
2001ರಿಂದ 2014ರವರೆಗೆ ಗುಜರಾತ್‌ನಲ್ಲಿ ಕೈಗೊಂಡ ಜಲ ಆಡಳಿತ ಸುಧಾರಣೆಗಳು, 2014ರ ಬಳಿಕ ರಾಷ್ಟ್ರಮಟ್ಟದಲ್ಲಿ ಜಾರಿಗೊಂಡ ಹಲವು ನೀತಿ ಹಾಗೂ ಕಾರ್ಯಕ್ರಮಗಳಿಗೆ ಪ್ರಯೋಗಾಲಯದಂತೆ ಕಾರ್ಯನಿರ್ವಹಿಸಿದವು ಎಂದು ವರದಿ ತಿಳಿಸಿದೆ.
ಜಲ ಕ್ಷೇತ್ರದ ಬಜೆಟ್ ಹಂಚಿಕೆ ಹೆಚ್ಚಳ
ಜಲ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಆದ್ಯತೆಯೂ ಗಣನೀಯವಾಗಿ ಹೆಚ್ಚಾಗಿದೆ. 2001-02ರಲ್ಲಿ ಒಕ್ಕೂಟ ಸರ್ಕಾರದ ಒಟ್ಟು ಬಜೆಟ್‌ನಲ್ಲಿ ಜಲ ವಲಯಕ್ಕೆ ಶೇ.0.8ರಷ್ಟು ಹಂಚಿಕೆಯಾಗಿದ್ದರೆ, 2025-26ರಲ್ಲಿ ಅದು ಶೇ.2.2ಕ್ಕೆ ಏರಿಕೆಯಾಗಿದೆ ಎಂದು ಅಧ್ಯಯನ ಹೇಳಿದೆ.
ಇದೇ ವೇಳೆ, 2000ನೇ ಇಸವಿಗೆ ಹೋಲಿಸಿದರೆ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಇಂದು 46.4 ಕೋಟಿಗೂ ಹೆಚ್ಚು ಜನರು ಸುರಕ್ಷಿತ ಹಾಗೂ ವ್ಯವಸ್ಥಿತ ಕುಡಿಯುವ ನೀರಿನ ಸೌಲಭ್ಯ ಪಡೆಯುತ್ತಿದ್ದಾರೆ. ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸಂಪರ್ಕದ ಪ್ರಮಾಣವು 2019ರಲ್ಲಿ ಶೇ.17ರಷ್ಟಿದ್ದದ್ದು 2026ರ ವೇಳೆಗೆ ಶೇ.80ಕ್ಕಿಂತಲೂ ಅಧಿಕವಾಗಿದೆ.
ಗುಜರಾತ್‌ನ ಜಲ ಸಂರಕ್ಷಣಾ ಮಾದರಿ
ಗುಜರಾತ್‌ನಲ್ಲಿ ಕೈಗೊಂಡ ಪರಿಹಾರ ಕಾರ್ಯಗಳಲ್ಲಿ ನರ್ಮದಾ ಆಧಾರಿತ ಬೃಹತ್ ವಾಟರ್ ಗ್ರಿಡ್, ವಾಸ್ಮೊ ಸಂಸ್ಥೆ ಹಾಗೂ ಗ್ರಾಮ ಮಟ್ಟದ ಪಾನಿ ಸಮಿತಿಗಳು ಪ್ರಮುಖ ಪಾತ್ರ ವಹಿಸಿವೆ. ಇದರೊಂದಿಗೆ ಬೃಹತ್ ಪ್ರಮಾಣದಲ್ಲಿ ಜಲ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣ ಕಾರ್ಯಗಳನ್ನೂ ಕೈಗೊಳ್ಳಲಾಯಿತು.
2013ರ ವೇಳೆಗೆ ಸರ್ದಾರ್ ಪಟೇಲ್ ಜಲ ಸಂರಕ್ಷಣಾ ಯೋಜನೆಯಡಿ ಗುಜರಾತ್‌ನಲ್ಲಿ 76,000ಕ್ಕೂ ಹೆಚ್ಚು ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲಾಗಿತ್ತು. ಈ ಅನುಭವದ ಹಲವು ಅಂಶಗಳು ಬಳಿಕ ಜಲ್ ಜೀವನ್ ಮಿಷನ್, ಜಲ್ ಶಕ್ತಿ ಅಭಿಯಾನ, ನಮಾಮಿ ಗಂಗೆ, ಅಟಲ್ ಭೂಜಲ್ ಯೋಜನೆ, ಪರ್ ಡ್ರಾಪ್ ಮೋರ್ ಕ್ರಾಪ್ ಹಾಗೂ ಅಮೃತ್ ಸೇರಿದಂತೆ ವಿವಿಧ ರಾಷ್ಟ್ರೀಯ ಯೋಜನೆಗಳಿಗೆ ಅಡಿಪಾಯ ಒದಗಿಸಿದವು ಎಂದು ವರದಿ ವಿಶ್ಲೇಷಿಸಿದೆ.
2019ರಲ್ಲಿ ಕೇಂದ್ರ ಜಲ ಶಕ್ತಿ ಸಚಿವಾಲಯದ ರಚನೆಯು ಕುಡಿಯುವ ನೀರು, ನೈರ್ಮಲ್ಯ ಹಾಗೂ ಜಲಸಂಪನ್ಮೂಲ ನಿರ್ವಹಣೆಗೆ ಏಕೀಕೃತ ಸಾಂಸ್ಥಿಕ ಬಲ ನೀಡಿದೆ ಎಂದು ವರದಿ ಹೇಳಿದೆ.
‘ನೀರು ಜನರ ಆಂದೋಲನವಾಗಬೇಕು’
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಕೇಂದ್ರ ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಅಶೋಕ್ ಕೆ. ಮೀನಾ ಅವರು, ಪ್ರತಿಯೊಬ್ಬ ನಾಗರಿಕನಿಗೂ ನೀರು ಖಾತರಿಪಡಿಸುವುದು ಸಚಿವಾಲಯದ ಪ್ರಮುಖ ಆದ್ಯತೆಯಾಗಿದೆ ಎಂದರು.
ಬಲಿಷ್ಠ ಸಂಸ್ಥೆಗಳು, ನಿರಂತರ ಬಂಡವಾಳ ಹೂಡಿಕೆ ಹಾಗೂ ಗ್ರಾಮ ಪಂಚಾಯತ್‌ಗಳ ಮಾಲೀಕತ್ವದ ಬೆಂಬಲದೊಂದಿಗೆ ನೀರು ಜನರ ಆಂದೋಲನವಾಗಿ ರೂಪುಗೊಂಡಾಗ ದೊಡ್ಡ ಪ್ರಮಾಣದ ಬದಲಾವಣೆ ಸಾಧ್ಯವಾಗುತ್ತದೆ. ಒಂದು ರಾಜ್ಯದಲ್ಲಿ ಆರಂಭವಾದ ಪರಿಕಲ್ಪನೆ ಇಂದು ರಾಷ್ಟ್ರೀಯ ಬದ್ಧತೆಯಾಗಿ ಪರಿವರ್ತನೆಯಾಗಿದೆ ಎಂದು ಅವರು ಹೇಳಿದರು.
ನೀರಿನ ಭದ್ರತೆ ಕೇವಲ ಎಂಜಿನಿಯರಿಂಗ್ ಸವಾಲಲ್ಲ, ಅದು ಆಡಳಿತಾತ್ಮಕ ಸವಾಲೂ ಹೌದು ಎಂಬುದು ಅಧ್ಯಯನದ ಪ್ರಮುಖ ತೀರ್ಮಾನವಾಗಿದೆ.
ಯಾವುದೇ ಭೌತಿಕ ಜಲ ಮೂಲಸೌಕರ್ಯ ಯಶಸ್ವಿಯಾಗಬೇಕಾದರೆ 4ಪಿ ಸೂತ್ರಗಳಾದ ರಾಜಕೀಯ ನಾಯಕತ್ವ (Political Leadership), ಸಾರ್ವಜನಿಕ ಹಣಕಾಸು (Public Financing), ಪಾಲುದಾರಿಕೆ (Partnership) ಹಾಗೂ ಸಾರ್ವಜನಿಕರ ಸಹಭಾಗಿತ್ವ (People’s Participation) ಅತ್ಯಗತ್ಯ ಎಂದು ವರದಿ ತಿಳಿಸಿದೆ.
ಸಮುದಾಯದ ಮಾಲೀಕತ್ವ ಅಗತ್ಯ
ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ಹಾಗೂ ವರದಿಯ ಸಹ-ಲೇಖಕ ಪರಮೇಶ್ವರನ್ ಅಯ್ಯರ್ ಮಾತನಾಡಿ, ಬೃಹತ್ ಪ್ರಮಾಣದಲ್ಲಿ ನೀರು ಪೂರೈಸಲು ದೃಢ ರಾಜಕೀಯ ನಾಯಕತ್ವ ಮತ್ತು ಆದ್ಯತೆ, ಸ್ಪಷ್ಟ ಹೊಣೆಗಾರಿಕೆಯ ಸಾಂಸ್ಥಿಕ ವ್ಯವಸ್ಥೆ ಹಾಗೂ ತಮ್ಮ ಜಲ ಮೂಲಗಳ ನಿರ್ವಹಣೆಯಲ್ಲಿ ಸಮುದಾಯಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಹೇಳಿದರು.
ಭವಿಷ್ಯದಲ್ಲಿ ವಿಶ್ವಾಸಾರ್ಹ ಸೇವಾ ಪೂರೈಕೆ, ನೀರಿನ ಗುಣಮಟ್ಟ, ಜಲ ಮೂಲಗಳ ಸುಸ್ಥಿರತೆ, ಅಂತರ್ಜಲ ಮರುಪೂರಣ, ನೀರಿನ ಬಳಕೆಯ ದಕ್ಷತೆ ಹಾಗೂ ಸಂಸ್ಕರಿಸಿದ ನೀರಿನ ಮರುಬಳಕೆಯಂತಹ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವರದಿ ಸಲಹೆ ನೀಡಿದೆ.
ಸುಸ್ಥಿರ ಜಲ ವ್ಯವಸ್ಥೆಗೆ ಆದ್ಯತೆ
ಐಐಎಂ ಬೆಂಗಳೂರಿನ ಸಾರ್ವಜನಿಕ ನೀತಿ ಕೇಂದ್ರದ ಅಧ್ಯಕ್ಷರು, ಹಿರಿಯ ಫೆಲೋ ಹಾಗೂ ಜಲ್ ಜೀವನ್ ಮಿಷನ್ ಚೇರ್ ಪ್ರೊಫೆಸರ್ ಗೋಪಾಲ್ ನಾಯ್ಕ್ ಮಾತನಾಡಿ, ಬೃಹತ್ ಪ್ರಮಾಣದಲ್ಲಿ ನೀರು ಒದಗಿಸುವುದು ಒಂದು ಸವಾಲಾದರೆ, ಅದನ್ನು ದೀರ್ಘಕಾಲ ಸುಸ್ಥಿರವಾಗಿ ನಿರ್ವಹಿಸುವುದು ಮತ್ತೊಂದು ದೊಡ್ಡ ಸವಾಲಾಗಿದೆ ಎಂದರು.
ಗುಜರಾತ್ ಹಾಗೂ ಭಾರತದ 25 ವರ್ಷಗಳ ಅನುಭವಗಳನ್ನು ಒಂದೆಡೆ ಸೇರಿಸಿರುವ ವರದಿಯು ಯಾವುದು ಯಶಸ್ವಿಯಾಗಿದೆ ಮತ್ತು ಮುಂದಿನ ಹಂತದಲ್ಲಿ ಏನು ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆಡಳಿತ, ಸಮುದಾಯದ ಮಾಲೀಕತ್ವ ಹಾಗೂ ಮಹತ್ವಾಕಾಂಕ್ಷೆಯ ಕುರಿತಾದ ವರದಿಯ ಪಾಠಗಳು ಅತ್ಯಂತ ಪ್ರಾಯೋಗಿಕವಾಗಿವೆ ಎಂದು ಅವರು ಹೇಳಿದರು.
ವೃತ್ತಾಕಾರದ ಜಲ ಆರ್ಥಿಕತೆಗೆ ಒತ್ತು
ಸಿಇಇಡಬ್ಲ್ಯು ಫೆಲೋ ಹಾಗೂ ಸಹ-ಲೇಖಕ ಡಾ. ನಿತಿನ್ ಬಸ್ಸಿ ಮಾತನಾಡಿ, ಭಾರತದ ಜಲ ಭದ್ರತೆಯ ಮುಂದಿನ ಹಂತವು ವೃತ್ತಾಕಾರದ ಜಲ ಆರ್ಥಿಕತೆಗೆ ಆದ್ಯತೆ ನೀಡುವುದನ್ನು ಒಳಗೊಂಡಿರಲಿದೆ ಎಂದರು.
ಸಂಸ್ಕರಿಸಿದ ಬಳಕೆಯಾದ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಸೂಕ್ತ ರೀತಿಯಲ್ಲಿ ಮರುಬಳಕೆ ಮಾಡುವುದು ಪರಿಸರದ ದೃಷ್ಟಿಯಿಂದ ಮಾತ್ರವಲ್ಲದೆ ಆರ್ಥಿಕವಾಗಿಯೂ ಮಹತ್ವದ ಅವಕಾಶವಾಗಿದೆ ಎಂದು ಅವರು ತಿಳಿಸಿದರು.
ಜಾಗತಿಕ ದಕ್ಷಿಣಕ್ಕೆ ನಾಲ್ಕು ಪ್ರಮುಖ ಪಾಠ
ಜಾಗತಿಕ ದಕ್ಷಿಣದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಭಾರತದ ಅನುಭವದಿಂದ ನಾಲ್ಕು ಪ್ರಮುಖ ಪಾಠಗಳನ್ನು ವರದಿ ಗುರುತಿಸಿದೆ.
- ಭೌತಿಕ ಮೂಲಸೌಕರ್ಯಕ್ಕಿಂತ ಜಲ ಆಡಳಿತಕ್ಕೆ ಮುಂಚೂಣಿ ಆದ್ಯತೆ ನೀಡಬೇಕು.
- ಜಲಸಂಪನ್ಮೂಲ ಹಾಗೂ ಜಲ ಸೇವೆಗಳನ್ನು ಒಟ್ಟಾಗಿ ನಿರ್ವಹಿಸಬೇಕು.
- ಯೋಜನೆಗಳಲ್ಲಿ ಸಮುದಾಯದ ಮಾಲೀಕತ್ವವನ್ನು ಬೇರೂರಿಸಬೇಕು.
- ಬಲವಾದ ರಾಜಕೀಯ ಇಚ್ಛಾಶಕ್ತಿ, ಹಣಕಾಸು ಹಾಗೂ ಆಡಳಿತಾತ್ಮಕ ದಕ್ಷತೆಯೊಂದಿಗೆ ಮಹತ್ವಾಕಾಂಕ್ಷೆಯ ಗುರಿಗಳನ್ನು ದೊಡ್ಡ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು.
ಭಾರತದ ಅನುಭವ ಜಗತ್ತಿಗೆ ಮಾದರಿ
ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಸಹ-ಲೇಖಕ ಡೇನಿಯಲ್ ಡಬ್ಲ್ಯು. ಸ್ಮಿತ್ ಮಾತನಾಡಿ, ಭಾರತದ ಜಲ ಪಯಣವು ದೇಶದ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲೂ ಮಹತ್ವದ ಪಾಠಗಳನ್ನು ಒದಗಿಸುತ್ತದೆ ಎಂದರು.
ಬೃಹತ್ ಪ್ರಮಾಣದಲ್ಲಿ ಜಲ ಭದ್ರತೆ ಸಾಧಿಸಲು ಬಲಿಷ್ಠ ಜಲ ಆಡಳಿತ ವ್ಯವಸ್ಥೆ ಅನಿವಾರ್ಯವಾಗಿದ್ದು, ಸಾರ್ವತ್ರಿಕ ಹಾಗೂ ಸುಸ್ಥಿರ ಜಲ ಭದ್ರತೆಗಾಗಿ ಶ್ರಮಿಸುತ್ತಿರುವ ರಾಷ್ಟ್ರಗಳು ಭಾರತದ ಆಡಳಿತಾತ್ಮಕ ಅನುಭವದಿಂದ ಕಲಿತು ತಮ್ಮದೇ ದೇಶೀಯ ಸನ್ನಿವೇಶಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಬಹುದು ಎಂದು ಹೇಳಿದರು.
ವರದಿ ಬಿಡುಗಡೆಯ ಬಳಿಕ ಐಐಎಂ ಬೆಂಗಳೂರಿನ ಪ್ರೊಫೆಸರ್ ಗೋಪಾಲ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಪ್ಯಾನೆಲ್ ಚರ್ಚೆ ನಡೆಯಿತು. ವರದಿಯ ಲೇಖಕರು, ಜಲ ತಜ್ಞರು ಹಾಗೂ ನೀತಿ ನಿರೂಪಕರು ಭಾಗವಹಿಸಿ ಭಾರತದ ಜಲ ಆಡಳಿತದ ಭವಿಷ್ಯ ಮತ್ತು ಜಾಗತಿಕವಾಗಿ ಅನ್ವಯಿಸಬಹುದಾದ ಪಾಠಗಳ ಕುರಿತು ವಿಚಾರ ವಿನಿಮಯ ನಡೆಸಿದರು.
‘ಫ್ರಮ್ ಗುಜರಾತ್ ಟು ಇಂಡಿಯಾ: ವಾಟರ್ ಲೆಸನ್ಸ್ ಫಾರ್ ದಿ ವರ್ಲ್ಡ್’ ಅಧ್ಯಯನ ವರದಿಯನ್ನು ಡೇನಿಯಲ್ ಡಬ್ಲ್ಯು. ಸ್ಮಿತ್, ನಿತಿನ್ ಬಸ್ಸಿ ಹಾಗೂ ಪರಮೇಶ್ವರನ್ ಅಯ್ಯರ್ ಅವರು ರಚಿಸಿದ್ದು, ಜಾರ್ಜ್ ಮೇಸನ್ ವಿಶ್ವವಿದ್ಯಾಲಯ ಹಾಗೂ ಗೇಟ್ಸ್ ಫೌಂಡೇಶನ್ ಜಂಟಿಯಾಗಿ ಪ್ರಕಟಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








