ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸ್ವಿಜರ್ಲೆಂಡ್ ಅಧ್ಯಕ್ಷ (Swiss President) ಗೈ ಪರ್ಮೆಲಿನ್ ಅವರ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ನವದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಆಯೋಜಿಸಿದ್ದ ವಿಶೇಷ ಔತಣಕೂಟದಲ್ಲಿ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ (Anand Sankeshwar) ಅವರು ಆಹ್ವಾನಿತ ಗಣ್ಯರಾಗಿ ಭಾಗವಹಿಸಿದರು.
ಭಾರತ ಮತ್ತು ಸ್ವಿಜರ್ಲೆಂಡ್ ನಡುವಿನ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಬಂಧಗಳ ವೃದ್ಧಿಗೆ ಮಹತ್ವ ನೀಡುವ ಈ ಭೇಟಿಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಎರಡೂ ದೇಶಗಳ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ಮೂರು ದಿನಗಳ ಭಾರತ ಭೇಟಿಗಾಗಿ ಸೋಮವಾರ ನವದೆಹಲಿಗೆ ಆಗಮಿಸಿದ ಸ್ವಿಜರ್ಲೆಂಡ್ ಅಧ್ಯಕ್ಷ ಗೈ ಪರ್ಮೆಲಿನ್ ಅವರಿಗೆ ಆತ್ಮೀಯ ಹಾಗೂ ಭವ್ಯ ಸ್ವಾಗತ ನೀಡಲಾಯಿತು. ಬಳಿಕ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಭಾರತ ಮತ್ತು ಸ್ವಿಜರ್ಲೆಂಡ್ ನಡುವಿನ ದೀರ್ಘಕಾಲದ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದು, ವ್ಯಾಪಾರ ಮತ್ತು ಹೂಡಿಕೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ಹಾಗೂ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ವಿಸ್ತರಿಸುವ ಕುರಿತು ಚರ್ಚೆ ನಡೆಯಿತು.

ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಹಕಾರಕ್ಕೆ ಒತ್ತು
ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ವಿಜರ್ಲೆಂಡ್ ಅಧ್ಯಕ್ಷ ಗೈ ಪರ್ಮೆಲಿನ್ ಅವರ ನಡುವಿನ ಮಾತುಕತೆಯಲ್ಲಿ ವ್ಯಾಪಾರ, ಹೂಡಿಕೆ, ಕೃತಕ ಬುದ್ಧಿಮತ್ತೆ (ಎಐ), ರಕ್ಷಣಾ ಉತ್ಪಾದನೆ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳು ಚರ್ಚೆಯ ಕೇಂದ್ರಬಿಂದುವಾಗಿದ್ದವು. ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯಲ್ಲಿ ಉಭಯ ದೇಶಗಳು ಪರಸ್ಪರ ಸಹಕಾರವನ್ನು ಹೆಚ್ಚಿಸಿಕೊಳ್ಳುವ ಅಗತ್ಯದ ಬಗ್ಗೆಯೂ ನಾಯಕರು ಸಮಾಲೋಚನೆ ನಡೆಸಿದರು.
ಭಾರತ ಮತ್ತು ಸ್ವಿಜರ್ಲೆಂಡ್ ನಡುವಿನ ಆರ್ಥಿಕ ಸಂಬಂಧಗಳಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ 2024ರ ಮಾರ್ಚ್ನಲ್ಲಿ ಸಹಿ ಮಾಡಲಾದ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದದ (ಟಿಇಪಿಎ) ಮಹತ್ವವನ್ನು ಉಭಯ ನಾಯಕರು ಉಲ್ಲೇಖಿಸಿದರು. ಈ ಒಪ್ಪಂದದ ಮೂಲಕ ವ್ಯಾಪಾರ ವಹಿವಾಟು, ಹೂಡಿಕೆ ಹಾಗೂ ಆರ್ಥಿಕ ಸಹಕಾರಕ್ಕೆ ಹೊಸ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆಯಿದೆ.
Also Read>> ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ತೇಜಸ್ವಿ ಸೂರ್ಯ ನೆರವು: ವೈದ್ಯಕೀಯ ಉಪಕರಣಗಳ ಹಸ್ತಾಂತರ
ತಂತ್ರಜ್ಞಾನ, ನಾವೀನ್ಯತೆ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಪರಸ್ಪರ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಎರಡೂ ದೇಶಗಳಿಗೆ ಪ್ರಯೋಜನವಾಗಲಿದೆ ಎಂಬ ಆಶಯವೂ ಈ ಭೇಟಿಯ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
PM Modi : ಆಯ್ದ ಗಣ್ಯರಿಗೆ ಪ್ರಧಾನಿ ಮೋದಿ ಅವರ ವಿಶೇಷ ಔತಣಕೂಟ
ಸ್ವಿಜರ್ಲೆಂಡ್ ಅಧ್ಯಕ್ಷ ಗೈ ಪರ್ಮೆಲಿನ್ ಅವರ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನವದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಆಯ್ದ ಗಣ್ಯರಿಗಾಗಿ ವಿಶೇಷ ಔತಣಕೂಟವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಭಾರತ ಮತ್ತು ಸ್ವಿಜರ್ಲೆಂಡ್ನ ಪ್ರಮುಖ ಪ್ರತಿನಿಧಿಗಳು ಹಾಗೂ ಗಣ್ಯರನ್ನು ಆಹ್ವಾನಿಸಲಾಗಿತ್ತು.
ಔತಣಕೂಟದಲ್ಲಿ ಭಾರತದ 13 ಗಣ್ಯರು ಮತ್ತು ಸ್ವಿಸ್ ನಿಯೋಗದ ಸದಸ್ಯರು ಸೇರಿದಂತೆ ಒಟ್ಟು 40 ಪ್ರಮುಖರು ಭಾಗವಹಿಸಿದ್ದರು. ಈ ಗಣ್ಯರ ಪಟ್ಟಿಯಲ್ಲಿ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರೂ ಸ್ಥಾನ ಪಡೆದಿದ್ದರು.
ಭಾರತದ ಪ್ರಮುಖ ಉದ್ಯಮ ವಲಯದ ಪ್ರತಿನಿಧಿಯಾಗಿ ಡಾ. ಆನಂದ ಸಂಕೇಶ್ವರ ಅವರು ಇಂತಹ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಗಮನಾರ್ಹವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ವಿಜರ್ಲೆಂಡ್ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಈ ಔತಣಕೂಟವು ಉಭಯ ದೇಶಗಳ ನಡುವಿನ ಸ್ನೇಹಪರ ಸಂಬಂಧ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರ ನಡುವಿನ ಸಂವಾದಕ್ಕೆ ಮಹತ್ವದ ವೇದಿಕೆಯಾಗಿತ್ತು.
ಕಾರ್ಯಕ್ರಮದಲ್ಲಿ ಸ್ವಿಜರ್ಲೆಂಡಿನ ಪ್ರಥಮ ಮಹಿಳೆ, ಅಧ್ಯಕ್ಷ ಗೈ ಪರ್ಮೆಲಿನ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಡಾ. ಆನಂದ ಸಂಕೇಶ್ವರ ಅವರು ಉಪಸ್ಥಿತರಿದ್ದರು.
ಭಾರತ ಮತ್ತು ಸ್ವಿಜರ್ಲೆಂಡ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದೊಂದಿಗೆ ನಡೆದ ಈ ಉನ್ನತ ಮಟ್ಟದ ಭೇಟಿಯು ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರಕ್ಕೆ ದಾರಿ ಮಾಡಿಕೊಡುವ ನಿರೀಕ್ಷೆ ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








