ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು(Bangaluru) ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ MPLADS ಅನುದಾನದ ಮೂಲಕ ಒದಗಿಸಿದ ವೈದ್ಯಕೀಯ ಉಪಕರಣಗಳನ್ನು ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್ಗೆ ಹಸ್ತಾಂತರಿಸಿದರು. ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ (Shankara Cancer Hospital) ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಕರಣಗಳನ್ನು ಹಸ್ತಾಂತರಿಸಲಾಯಿತು.
ತೀವ್ರ ಅಸ್ವಸ್ಥ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ನೆರವು
MPLADS ಅನುದಾನದಡಿ ಒದಗಿಸಲಾದ ವೈದ್ಯಕೀಯ ಉಪಕರಣಗಳಲ್ಲಿ ಅತ್ಯಾಧುನಿಕ ಮಲ್ಟಿಪ್ಯಾರಾಮೀಟರ್ ಪೇಷಂಟ್ ಮಾನಿಟರ್ಗಳು ಹಾಗೂ 16 ಸಿರಿಂಜ್ ಇನ್ಫ್ಯೂಷನ್ ಪಂಪ್ಗಳು ಸೇರಿವೆ.
ಈ ಉಪಕರಣಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೀವ್ರ ಅಸ್ವಸ್ಥ ಕ್ಯಾನ್ಸರ್ ರೋಗಿಗಳ ಆರೋಗ್ಯ ಸ್ಥಿತಿಯ ನಿರಂತರ ಮೇಲ್ವಿಚಾರಣೆ ಹಾಗೂ ನಿಖರ ಔಷಧ ವಿತರಣೆಗೆ ಸಹಕಾರಿಯಾಗಲಿವೆ. ಇದರಿಂದ ರೋಗಿಗಳ ಚಿಕಿತ್ಸಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಾಗಲಿದೆ.

Shankara Cancer Hospital: ಶಂಕರ ಆಸ್ಪತ್ರೆಯ ಸೇವೆ ಶ್ಲಾಘನೀಯ: ತೇಜಸ್ವಿ ಸೂರ್ಯ
ಉಪಕರಣಗಳ ಹಸ್ತಾಂತರದ ಬಳಿಕ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯ ಛಲ, ಬದ್ಧತೆ ಹಾಗೂ ದೂರದೃಷ್ಟಿ ಇಂದಿನ ಯುವಜನತೆಗೆ ಮಾದರಿಯಾಗಿದೆ ಎಂದು ಹೇಳಿದರು.
ಅಪಾರ ಮಾನವೀಯತೆ, ಪ್ರೀತಿ ಹಾಗೂ ಸಾಮಾಜಿಕ ಬದ್ಧತೆಯಿಂದ ಕ್ಯಾನ್ಸರ್ ರೋಗಿಗಳಿಗೆ ಅತ್ಯುನ್ನತ ಚಿಕಿತ್ಸೆ ನೀಡುತ್ತಿರುವ ಸಂಸ್ಥೆಗಳಲ್ಲಿ ಶಂಕರ ಕ್ಯಾನ್ಸರ್ ಆಸ್ಪತ್ರೆ ಪ್ರಮುಖವಾಗಿದೆ. ಕಳೆದ 15 ವರ್ಷಗಳಿಂದ ಹಲವು ಸವಾಲುಗಳ ನಡುವೆಯೂ ಸಂಸ್ಥೆಯು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಪ್ರತಿವರ್ಷ MPLADS ಮೂಲಕ ಸಹಕಾರ
ಇಂತಹ ಸೇವಾ ಸಂಸ್ಥೆಗಳಿಗೆ ಬೆಂಬಲ ನೀಡುವುದರಿಂದ ಅದರ ಪ್ರಯೋಜನ ಹೆಚ್ಚಿನ ಸಂಖ್ಯೆಯ ಜನರಿಗೆ ತಲುಪುತ್ತದೆ. ಪ್ರತಿ ವರ್ಷ MPLADS ಅನುದಾನದಲ್ಲಿ ತಮ್ಮಿಂದ ಸಾಧ್ಯವಾಗುವಷ್ಟು ಶ್ರೀ ಶಂಕರ ಆಸ್ಪತ್ರೆಗೆ ಬೆಂಬಲ ನೀಡಲು ಪ್ರಯತ್ನಿಸಲಾಗುವುದು ಎಂದು ತೇಜಸ್ವಿ ಸೂರ್ಯ ಹೇಳಿದರು.
ಇಂತಹ ಸಂಸ್ಥೆಗಳಿಗೆ ಅನುದಾನ ನೀಡಿದಾಗ ಅದರ ಸದುಪಯೋಗವಾಗುತ್ತದೆ ಎಂಬ ಸಾರ್ಥಕ್ಯ ಭಾವನೆ ನಮ್ಮೆಲ್ಲರಲ್ಲೂ ಮೂಡುತ್ತದೆ. ಹೊಸ ವೈದ್ಯಕೀಯ ಸೌಲಭ್ಯಗಳು ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
Also Read>> ಬೆಂಗಳೂರು–ಬೆಳಗಾವಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು
ಉಪಕರಣ ಬದಲಾವಣೆಗೆ ನೆರವು
ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್ನ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ಬಿ.ಎಸ್. ಶ್ರೀನಾಥ್ ಮಾತನಾಡಿ, ಆಸ್ಪತ್ರೆಯಲ್ಲಿ ಬಳಸುವ ಇಂತಹ ವೈದ್ಯಕೀಯ ಉಪಕರಣಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಹಕಾರ ನೀಡಿದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್ನ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ಬಿ.ಎಸ್. ಶ್ರೀನಾಥ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ ಗರುಡಾಚಾರ್, ಆಸ್ಪತ್ರೆಯ ಇತರ ಗೌರವಾನ್ವಿತ ಟ್ರಸ್ಟಿಗಳು, ಹಿರಿಯ ವೈದ್ಯರು, ವಿದ್ಯಾರ್ಥಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವೈದ್ಯಕೀಯ ಉಪಕರಣಗಳ ಕೊಡುಗೆ ಮಹತ್ವದ್ದಾಗಿದ್ದು, ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯಗಳಿಗೆ ಮತ್ತಷ್ಟು ಬಲ ನೀಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










