ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
“ನಮ್ಮ ತಂದೆ ಎಸ್. ಬಂಗಾರಪ್ಪ (S.Bangarappa) ಅವರು ನಮ್ಮ ಕುಟುಂಬದ ಆಸ್ತಿಯಲ್ಲ; ಇಡೀ ಸೊರಬದ (Soraba) ಜನತೆಯ ಆಸ್ತಿ. ನಿಮ್ಮ ಕುಟುಂಬದ ಹಿರಿಯರು ಮತ ನೀಡಿ ಅವರನ್ನು ಗೆಲ್ಲಿಸಿದ್ದರಿಂದ ಅವರು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಆ ಋಣ ನಮ್ಮ ಮೇಲಿದೆ. ಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು ನಮ್ಮ ತಂದೆಯವರಿಗೆ ಸಲ್ಲಿಸುವ ಗೌರವವಾಗಿದೆ,” ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಎಸ್. ಬಂಗಾರಪ್ಪ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಟೀಮ್ ಸಮ್ಮಿಲನ ವತಿಯಿಂದ ಆನಂದರಾವ್ ಸರ್ಕಲ್ ಸಮೀಪದ ರೇಸ್ ಕೋರ್ಸ್ ಕ್ರಾಸ್ ರಸ್ತೆಯ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ನೆಲೆಸಿರುವ ಸೊರಬ ವಿಧಾನಸಭಾ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಅವರ ಮುಂದಿನ ಸಾಧನೆಗೆ ಶುಭ ಹಾರೈಸಿದರು.
45 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಕ್ರೀಡೆ, ಸಾಂಸ್ಕೃತಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರು ಸೇರಿದಂತೆ ಒಟ್ಟು 45 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲಾ ₹15 ಸಾವಿರ ಪ್ರೋತ್ಸಾಹಧನ ವಿತರಿಸಲಾಯಿತು.
‘ಪೋಷಕರ ಶ್ರಮವನ್ನು ಮರೆಯಬೇಡಿ’ ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಿಂದೆ ಪೋಷಕರ ಶ್ರಮವಿದೆ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಮಧು ಬಂಗಾರಪ್ಪ ಕಿವಿಮಾತು ಹೇಳಿದರು.
“ನಿಮ್ಮ ಸಾಧನೆಯನ್ನು ತಂದೆ-ತಾಯಿಗೆ ಅರ್ಪಿಸಿ. ಅವರು ಶ್ರಮಪಟ್ಟು ನಿಮ್ಮನ್ನು ಓದಿಸಿದ್ದರಿಂದಲೇ ನೀವು ಈ ಹಂತಕ್ಕೆ ತಲುಪಿದ್ದೀರಿ. ಈಗ ದೊರೆತಿರುವ ಪ್ರೋತ್ಸಾಹ ನಿಮ್ಮ ಮುಂದಿನ ಸಾಧನೆಗಳಿಗೆ ಸ್ಫೂರ್ತಿಯಾಗಲಿ. ಭವಿಷ್ಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆದು ದೊಡ್ಡ ಸಾಧನೆಗಳನ್ನು ಮಾಡಬೇಕು,” ಎಂದು ಹಾರೈಸಿದರು.
ಟೀಮ್ ಸಮ್ಮಿಲನ ಕಾರ್ಯಕ್ಕೆ ಮೆಚ್ಚುಗೆ
ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಸೊರಬದ ಜನರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಮುಂದಾಗಿರುವುದು ಸಂತಸದ ಸಂಗತಿ ಎಂದು ಸಚಿವರು ಹೇಳಿದರು.
“ನೀವೆಲ್ಲರೂ ಸೇರಿ ಟೀಮ್ ಸಮ್ಮಿಲನ ಸಂಘಟನೆಯನ್ನು ಕಟ್ಟಿಕೊಂಡು ಕಳೆದ ಎರಡು ವರ್ಷಗಳಿಂದ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೀರಿ. ಇದರ ಸಂಪೂರ್ಣ ಶ್ರೇಯಸ್ಸು ಸಂಘಟಕರಿಗೆ ಸಲ್ಲಬೇಕು,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಜನರ ಪ್ರೀತಿಯೇ ನನ್ನ ದೊಡ್ಡ ಶಕ್ತಿ’
“ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿ ಸಚಿವನಾಗಿದ್ದೇನೆ. ಶಿಕ್ಷಣ ಸಚಿವನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪಕ್ಷ ಮತ್ತು ನಾಯಕರು ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಕೆಲಸ ಮಾಡುತ್ತೇನೆ. ನಿಮ್ಮ ಆಶೀರ್ವಾದ ಹೀಗೆಯೇ ಇರಲಿ,” ಎಂದು ಮಧು ಬಂಗಾರಪ್ಪ ಹೇಳಿದರು.
ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಸೊರಬದ ಘನತೆಯನ್ನು ಹೆಚ್ಚಿಸಿದ್ದಾರೆ. ಶಿಕ್ಷಣ ಸಚಿವನಾಗಿ ಅವರನ್ನು ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
S.Bangarappa: ‘ಲಕ್ಷಾಂತರ ಬಂಗಾರಪ್ಪ ಅವರನ್ನು ಪಡೆದುಕೊಂಡಿದ್ದೇನೆ’
ಸೊರಬ ಹಾಗೂ ಶಿವಮೊಗ್ಗ ಜಿಲ್ಲೆಯ ಜನರು ತೋರುತ್ತಿರುವ ಪ್ರೀತಿ ಮತ್ತು ಅಭಿಮಾನವನ್ನು ಸ್ಮರಿಸಿದ ಮಧು ಬಂಗಾರಪ್ಪ ಭಾವುಕರಾದರು.
“ನಾನು ನಮ್ಮ ತಂದೆ ಬಂಗಾರಪ್ಪ ಅವರನ್ನು ಕಳೆದುಕೊಂಡಿರಬಹುದು. ಆದರೆ, ಲಕ್ಷಾಂತರ ಬಂಗಾರಪ್ಪ ಅವರನ್ನು ಪಡೆದುಕೊಂಡಿದ್ದೇನೆ ಎಂಬ ಹೆಮ್ಮೆ ನನಗಿದೆ. ಜನರ ಪ್ರೀತಿ ಮತ್ತು ಅಭಿಮಾನವೇ ನಮ್ಮ ದೊಡ್ಡ ಶಕ್ತಿ,” ಎಂದು ಹೇಳಿದರು.
Also Read>> ಕುಂದಾಪುರದಲ್ಲಿ ಕಾರು–ಸ್ಕೂಟರ್ ಭೀಕರ ಅಪಘಾತ: ಸ್ಕೂಟರ್ ಸವಾರ ಸಾವು
ಸಚಿವ ದಂಪತಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಸಚಿವ ಎಸ್. ಮಧು ಬಂಗಾರಪ್ಪ ಹಾಗೂ ಅವರ ಪತ್ನಿ ಅನಿತಾ ಎಸ್. ಮಧು ಬಂಗಾರಪ್ಪ ಅವರನ್ನು ಬೆಂಗಳೂರಿನ ಟೀಮ್ ಸಮ್ಮಿಲನ ವತಿಯಿಂದ ಸನ್ಮಾನಿಸಲಾಯಿತು.
ಆರ್ಡಿಪಿಆರ್ ಇಲಾಖೆಯ ನಿರ್ದೇಶಕ ಏಕಾಂತಪ್ಪ ಸ್ವಾಗತಿಸಿದರು. ಗಣಪತಿ ಹಳೆಸೊರಬ ಹಾಗೂ ಬಿಂದು ಎಚ್.ಎನ್. ಕಾರ್ಯಕ್ರಮ ನಿರೂಪಿಸಿದರು. ಸೃಷ್ಟಿ.ಇ. ಪ್ರಾರ್ಥಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














