ಕಲ್ಪ ಮೀಡಿಯಾ ಹೌಸ್ | ಭದ್ರಾವತಿ (ಶಿವಮೊಗ್ಗ) |
ಭದ್ರಾವತಿ (Bhadravathi) ನಗರದ ವಿವಿಧ ಹೋಟೆಲ್ಗಳು, ಬೇಕರಿಗಳು ಹಾಗೂ ಸಿಹಿ ತಿನಿಸುಗಳ ತಯಾರಿಕೆ ಮತ್ತು ಮಾರಾಟ ಕೇಂದ್ರಗಳ ಮೇಲೆ ಬುಧವಾರ ಸಂಜೆ ಉಪವಿಭಾಗಾಧಿಕಾರಿ ಡಾ. ಹೆಚ್.ಪಿ.ಎಸ್. ಮೈತ್ರಿ ಹಾಗೂ ತಹಶೀಲ್ದಾರ್ ಪ್ರದೀಪ್ ದೇವಗಿರಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ (Raid) ನಡೆಸಿತು.
ದಾಳಿಯ ಸಂದರ್ಭದಲ್ಲಿ ರಾಸಾಯನಿಕ ಬಣ್ಣ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆಗಾಗಿ ವಿವಿಧ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಅಧಿಕಾರಿಗಳು ಕ್ರಮ ಕೈಗೊಂಡರು.

ಅವಧಿ ಮೀರಿದ ಪದಾರ್ಥ, ರಾಸಾಯನಿಕ ಬಳಕೆ ಪತ್ತೆ
ಪರಿಶೀಲನೆ ವೇಳೆ ಕೆಲವು ಹೋಟೆಲ್ಗಳು ಮತ್ತು ಅಂಗಡಿಗಳಲ್ಲಿ ಅವಧಿ ಮುಗಿದ ಅಡುಗೆ ಪದಾರ್ಥಗಳನ್ನು ಬಳಕೆ ಮಾಡುತ್ತಿರುವುದು ಕಂಡುಬಂದಿತು. ಆಹಾರ ತಯಾರಿಕೆಯಲ್ಲಿ ರಾಸಾಯನಿಕ ವಸ್ತುಗಳ ಬಳಕೆ, ತಿನಿಸುಗಳ ಪ್ಯಾಕೆಟ್ಗಳ ಮೇಲೆ ದರ ಹಾಗೂ ಅವಧಿ ನಮೂದಿಸುವ ಲೇಬಲ್ಗಳ ಕೊರತೆ ಸೇರಿದಂತೆ ಹಲವು ಲೋಪಗಳು ಪತ್ತೆಯಾದವು.
ಅಲ್ಲದೆ, ಕೆಲವೆಡೆ ಸ್ವಚ್ಛತೆಯ ಕೊರತೆಯೂ ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಹೋಟೆಲ್ ಮತ್ತು ಅಂಗಡಿ ಮಾಲೀಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿ, ಆಹಾರ ಸುರಕ್ಷತೆ ಹಾಗೂ ಸ್ವಚ್ಛತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದರು.
Bhadravathi: ಪಾನ್ ಶಾಪ್ಗಳಲ್ಲೂ ಪರಿಶೀಲನೆ
ನಗರದ ಪಾನ್ ಶಾಪ್ಗಳಲ್ಲಿಯೂ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬೀಡಾ ತಯಾರಿಕೆಗೆ ಬಳಸುವ ವಿವಿಧ ಪದಾರ್ಥಗಳ ಸಂಗ್ರಹಣೆ ಹಾಗೂ ಅಂಗಡಿಗಳ ಸ್ವಚ್ಛತೆಯ ಸ್ಥಿತಿಯನ್ನು ಪರಿಶೀಲಿಸಲಾಯಿತು.
ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಸೇವಿಸಿ ಪಾದಚಾರಿಗಳು ಸಂಚರಿಸುವ ದಾರಿಗಳಲ್ಲಿ ಉಗುಳಿರುವುದನ್ನು ಗಮನಿಸಿದ ಉಪವಿಭಾಗಾಧಿಕಾರಿ ಡಾ. ಹೆಚ್.ಪಿ.ಎಸ್. ಮೈತ್ರಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು.

ಸಿಹಿ ತಿನಿಸು, ಬ್ರೆಡ್ ತಯಾರಿಕಾ ಕೇಂದ್ರಗಳ ಪರಿಶೀಲನೆ
ಸಿಹಿ ತಿನಿಸು, ಬ್ರೆಡ್ ಹಾಗೂ ಬನ್ ತಯಾರಿಕಾ ಕೇಂದ್ರಗಳಲ್ಲಿಯೂ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬಳಕೆಗೆ ಅರ್ಹವಲ್ಲದ ಕೆಲವು ವಸ್ತುಗಳು ಪತ್ತೆಯಾದವು. ಕ್ರೀಮ್ ಮತ್ತು ಕೇಕ್ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿಯೂ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಅವುಗಳ ಮಾದರಿಗಳನ್ನು ಸಂಗ್ರಹಿಸಲಾಯಿತು.
ಸಂಗ್ರಹಿಸಿದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪರವಾನಗಿ ಪ್ರದರ್ಶಿಸಲು ಸೂಚನೆ
ಹೋಟೆಲ್ಗಳು ಹಾಗೂ ಅಂಗಡಿಗಳಲ್ಲಿ ಅಗತ್ಯವಿರುವ ಪರವಾನಗಿಗಳನ್ನು ಗ್ರಾಹಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.
Also Read>> ಶಿವಮೊಗ್ಗದ ಈ ರೈಲು ತಾಳಗುಪ್ಪದವರೆಗೂ ವಿಸ್ತರಣೆ | ಯಾವ ರೈಲು? ಎಷ್ಟು ದಿನ? ಇಲ್ಲಿದೆ ಡೀಟೇಲ್ಸ್
ಮಾಂಸಾಹಾರಿ ಹೋಟೆಲ್ಗಳಲ್ಲಿನ ಸ್ವಚ್ಛತೆ ಹಾಗೂ ಆಹಾರ ತಯಾರಿಕೆಗೆ ಬಳಸುವ ಹಂಚುಗಳ ಸ್ಥಿತಿಯನ್ನೂ ಪರಿಶೀಲಿಸಲಾಯಿತು. ಅನುಪಯುಕ್ತವಾಗಿರುವ ಹಂಚುಗಳನ್ನು ತಕ್ಷಣ ಬದಲಾಯಿಸಿ ಹೊಸ ಹಂಚುಗಳನ್ನು ಅಳವಡಿಸಿಕೊಳ್ಳುವಂತೆ ಮಾಲೀಕರಿಗೆ ಮುನ್ನೆಚ್ಚರಿಕೆ ನೀಡಲಾಯಿತು.
ದಾಳಿ ಕಾರ್ಯಾಚರಣೆಯಲ್ಲಿ ಎಫ್ಎಸ್ಎಸ್ಎಐ ಫುಡ್ ಇನ್ಸ್ಪೆಕ್ಟರ್ಗಳಾದ ಶಶಿಕುಮಾರ್, ಮನೋಜ್ ಬಿ.ಎಂ., ಉಮೇಶ್, ಮನೋಜ್ ಮತ್ತು ಸುಮಾ, ಉಪತಹಶೀಲ್ದಾರ್ ಮಂಜ ನಾಯಕ್, ಕಂದಾಯ ನಿರೀಕ್ಷಕ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ ಕೂಡ್ಲಿಗೆರೆ ಹಾಗೂ ಆರ್ಐ ಅನಿಲ್ ರಾಜ್ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












