ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪೊಲೀಸ್ ಸ್ಮರಣಾರ್ಥ ದಿನದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಬುಧವಾರ ನವದೆಹಲಿಯ (New Delhi) ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿ, ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು.
ದೇಶದ ಭದ್ರತೆ ಹಾಗೂ ನಾಗರಿಕರ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸಿದ ಅಮಿತ್ ಶಾ, ಇದೇ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಮಾದಕವಸ್ತು ವಿರೋಧಿ ಅಭಿಯಾನದ ಭಾಗವಾಗಿ ಆಯೋಜಿಸಲಾಗಿರುವ ಮೋಟಾರ್ಸೈಕಲ್ ರ್ಯಾಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ರ್ಯಾಲಿಯ ಕುರಿತು ಸಿಆರ್ಪಿಎಫ್ ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರು ಗೃಹ ಸಚಿವರಿಗೆ ಮಾಹಿತಿ ನೀಡಿದರು.
ಸುಮಾರು 90 ಪೊಲೀಸ್ ರೈಡರ್ಗಳು ಭಾಗಿ
ಈ ಮೋಟಾರ್ಸೈಕಲ್ ರ್ಯಾಲಿಯಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ ಸೇರಿದಂತೆ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸುಮಾರು 90 ಪೊಲೀಸ್ ರೈಡರ್ಗಳು ಪಾಲ್ಗೊಂಡಿದ್ದಾರೆ.
ಇದರೊಂದಿಗೆ ಸಿಆರ್ಪಿಎಫ್, ಸಿಐಎಸ್ಎಫ್, ಬಿಎಸ್ಎಫ್, ಎಸ್ಎಸ್ಬಿ, ಐಟಿಬಿಪಿ ಮತ್ತು ಎನ್ಎಸ್ಜಿ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಹಾಗೂ ಆರ್ಪಿಎಫ್, ಎನ್ಡಿಆರ್ಎಫ್ ಮತ್ತು ಎನ್ಐಎ ಮೊದಲಾದ ಕೇಂದ್ರ ಪೊಲೀಸ್ ಸಂಸ್ಥೆಗಳ ಸಿಬ್ಬಂದಿಯೂ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ.
ಅ.31ರಂದು ಏಕತಾ ಪರೇಡ್ನಲ್ಲಿ ಭಾಗಿ
‘ಮಾದಕವಸ್ತುಗಳ ವಿರುದ್ಧ ಹೋರಾಟ’ ಎಂಬ ರಾಷ್ಟ್ರವ್ಯಾಪಿ ಅಭಿಯಾನದ ಭಾಗವಾಗಿ ಈ ಮೋಟಾರ್ಸೈಕಲ್ ರ್ಯಾಲಿಯನ್ನು ಆಯೋಜಿಸಲಾಗಿದೆ. ದೇಶದ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಪಡೆಗಳ ಪೊಲೀಸ್ ರೈಡರ್ಗಳು ಗುಜರಾತ್ನ ಏಕತಾ ನಗರದಲ್ಲಿ ಒಂದಾಗಿ, ಅಕ್ಟೋಬರ್ 31ರಂದು ನಡೆಯಲಿರುವ ಏಕತಾ ಪರೇಡ್ನಲ್ಲಿ ಭಾಗವಹಿಸಲಿದ್ದಾರೆ.
ಪೊಲೀಸ್ ಸ್ಮರಣಾರ್ಥ ಕಾರ್ಯಕ್ರಮದ ವೇಳೆ ಹುತಾತ್ಮರ ಪುಸ್ತಕವನ್ನು ಸಂರಕ್ಷಿಸಿ, ಸ್ಮರಣಾರ್ಥ ಕಾರ್ಯಕ್ರಮಗಳಲ್ಲಿ ಗೌರವಪೂರ್ವಕವಾಗಿ ಪ್ರದರ್ಶಿಸುವ ಜವಾಬ್ದಾರಿ ಹೊಂದಿರುವ ವಿಧ್ಯುಕ್ತ ಪೊಲೀಸ್ ತಂಡ ‘ಶಹೀದ್ ಪುಷ್ಟಿಕಾ ರಕ್ಷಕ್ ಟೋಲಿ’ ಕೂಡ ಹುತಾತ್ಮರಿಗೆ ಗೌರವ ಸಲ್ಲಿಸಿತು.

Amit Shah: ಪೊಲೀಸ್ ಸಿಬ್ಬಂದಿಯ ತ್ಯಾಗಕ್ಕೆ ಅಮಿತ್ ಶಾ ನಮನ
ಕಾರ್ಯಕ್ರಮಕ್ಕೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡ ಅಮಿತ್ ಶಾ, ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ಪೊಲೀಸ್ ಹುತಾತ್ಮರಿಗೆ ನಮನ ಸಲ್ಲಿಸಿದರು.
ದೇಶದ ಗೌರವವನ್ನು ಕಾಪಾಡಲು ಮತ್ತು ನಾಗರಿಕರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಅರ್ಪಿಸುವ ಮೂಲಕ ಪೊಲೀಸ್ ಸಿಬ್ಬಂದಿ ದೇಶಭಕ್ತಿಯ ಅತ್ಯುನ್ನತ ಮಾದರಿಯನ್ನು ನಿರ್ಮಿಸಿದ್ದಾರೆ. ಅವರ ತ್ಯಾಗಕ್ಕೆ ಇಡೀ ರಾಷ್ಟ್ರದ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
Also Read>> ಟೈಗರ್ ಶ್ರಾಫ್ ಶೂಟಿಂಗ್ ಕೇಸ್ಗೆ ಬಿಗ್ ಟ್ವಿಸ್ಟ್; ಶಸ್ತ್ರಾಸ್ತ್ರ ಪೂರೈಸಿದ ನಾಲ್ವರು ಬಂಧನ
ಅ.22ರಿಂದ 30ರವರೆಗೆ ವಿವಿಧ ಕಾರ್ಯಕ್ರಮ
ಪ್ರತಿ ವರ್ಷದಂತೆ ಈ ಬಾರಿಯೂ ದೇಶಾದ್ಯಂತ ಪೊಲೀಸ್ ಸ್ಮರಣಾರ್ಥ ದಿನವನ್ನು ಆಚರಿಸಲಾಗುತ್ತಿದೆ. ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪ್ರಮುಖ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ದೆಹಲಿ ಪೊಲೀಸರ ಜಂಟಿ ಪರೇಡ್ ಆಯೋಜಿಸಲಾಗಿದೆ.
ಇದರ ಭಾಗವಾಗಿ ಅಕ್ಟೋಬರ್ 22ರಿಂದ 30ರವರೆಗೆ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ವಿವಿಧ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹುತಾತ್ಮರ ಕುಟುಂಬ ಸದಸ್ಯರ ಭೇಟಿ, ಪೊಲೀಸ್ ಬ್ಯಾಂಡ್ ಪ್ರದರ್ಶನ, ಮೋಟಾರ್ಸೈಕಲ್ ರ್ಯಾಲಿ, ‘ರನ್ ಫಾರ್ ಮಾರ್ಟಿಯರ್ಸ್’, ರಕ್ತದಾನ ಶಿಬಿರ, ಮಕ್ಕಳಿಗಾಗಿ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ ಮತ್ತು ಪೊಲೀಸ್ ಸಿಬ್ಬಂದಿಯ ತ್ಯಾಗ, ಶೌರ್ಯ ಹಾಗೂ ಸೇವೆಯನ್ನು ಬಿಂಬಿಸುವ ವಿಡಿಯೊ ಪ್ರದರ್ಶನಗಳು ನಡೆಯಲಿವೆ.

1959ರ ಲಡಾಖ್ ಘಟನೆ ಸ್ಮರಣಾರ್ಥ
ಪೊಲೀಸ್ ಸ್ಮರಣಾರ್ಥ ದಿನಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. 1959ರ ಅಕ್ಟೋಬರ್ 21ರಂದು ಲಡಾಖ್ನ ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಾ ಪಡೆಗಳು ನಡೆಸಿದ ಹೊಂಚುದಾಳಿಯಲ್ಲಿ ಭಾರತದ 10 ವೀರ ಪೊಲೀಸ್ ಸಿಬ್ಬಂದಿ ಪ್ರಾಣತ್ಯಾಗ ಮಾಡಿದ್ದರು.
ಅವರ ಸ್ಮರಣಾರ್ಥವಾಗಿ ಪ್ರತಿವರ್ಷ ಅಕ್ಟೋಬರ್ 21ರಂದು ದೇಶಾದ್ಯಂತ ಪೊಲೀಸ್ ಸ್ಮರಣಾರ್ಥ ದಿನ (Police Commemoration Day) ಆಚರಿಸಲಾಗುತ್ತಿದೆ. ರಾಷ್ಟ್ರೀಯ ಭದ್ರತೆ ಮತ್ತು ದೇಶದ ಏಕತೆ ಕಾಪಾಡುವಲ್ಲಿ ಪೊಲೀಸ್ ಸಿಬ್ಬಂದಿಯ ಕೊಡುಗೆ ಹಾಗೂ ತ್ಯಾಗವನ್ನು ಗೌರವಿಸುವ ಉದ್ದೇಶದಿಂದ 2018ರ ಪೊಲೀಸ್ ಸ್ಮರಣಾರ್ಥ ದಿನದಂದು ನವದೆಹಲಿಯ ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ಪ್ರಧಾನಿ ದೇಶಕ್ಕೆ ಸಮರ್ಪಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









