ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ಜಿಲ್ಲೆಯ ಗೌರಿಬಿದನೂರಿನಲ್ಲಿ (Gauribidanur) ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೂತನ ಕಾರ್ಯಾಲಯವಾಗಿ ನಿರ್ಮಿಸಲಾಗಿರುವ ಬಹುಮಹಡಿ ಕಟ್ಟಡ ‘ರಜತಾರ್ಪಣ’ ಲೋಕಾರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಉದ್ಯಮಿ ರಜತ ಕೆ.ವಿ. ಶಿವಕುಮಾರ್ ಅವರು ತಮ್ಮ ಕುಟುಂಬದ ಪೂರ್ವಜರಿಗೆ ಸೇರಿದ ವಿಶಾಲ ನಿವೇಶನದಲ್ಲಿ ಸ್ವಂತ ಖರ್ಚಿನಲ್ಲಿ ನಿರ್ಮಿಸಿರುವ ಈ ಕಟ್ಟಡವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕಳವಾರ ಓಂಕಾರ ಜ್ಯೋತಿ ಮಠದ ಶ್ರೀ ಉಮಾ ಮಹೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
ಸಮಾಜ ಸೇವೆಯಲ್ಲಿ ಆರ್ಎಸ್ಎಸ್ ಕೊಡುಗೆ ಅಪಾರ: ಶ್ರೀ ಉಮಾ ಮಹೇಶ್ವರ ಸ್ವಾಮೀಜಿ
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಉಮಾ ಮಹೇಶ್ವರ ಸ್ವಾಮೀಜಿ, “ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ 101 ವರ್ಷಗಳಿಂದ ಅಸಂಖ್ಯಾತ ಸ್ವಯಂಸೇವಕರ ಮೂಲಕ ಅವಿಸ್ಮರಣೀಯ ಸಮಾಜಸೇವೆಯನ್ನು ಮಾಡುತ್ತಾ ಬಂದಿದೆ. ಸನಾತನ ಹಿಂದೂ ಧರ್ಮದ ಪುನರುತ್ಥಾನಕ್ಕೆ ಸಂಘವು ಮಹತ್ವದ ವೇದಿಕೆಯಾಗಿದೆ” ಎಂದು ಹೇಳಿದರು.
ಸಮಾಜದ ಋಣ ತೀರಿಸಲು ಸೇವೆ: ರಜತ ಕೆ.ವಿ. ಶಿವಕುಮಾರ್
ಕಾರ್ಯಾಲಯದ ಕಟ್ಟಡದ ದಾನಿಗಳಾದ ಉದ್ಯಮಿ ರಜತ ಕೆ.ವಿ. ಶಿವಕುಮಾರ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದ ಋಣ ಇರುತ್ತದೆ. ಆ ಋಣವನ್ನು ತೀರಿಸುವ ಉದ್ದೇಶದಿಂದ ತಮ್ಮ ಕೈಲಾದಷ್ಟು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಭಾವುಕರಾಗಿ ನುಡಿದರು.
Gauribidanur : ಟೀಕೆಗಳಿಗೆ ಎದೆಗುಂದದೆ ಮುನ್ನಡೆಯುತ್ತಿರುವ ಸಂಘ
ಆರ್ಎಸ್ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ ಗುರುಪ್ರಸಾದ್ ಮಾತನಾಡಿ, ಹಿಂದೂ ಧರ್ಮದ ಸರ್ವಾಂಗೀಣ ಅಭಿವೃದ್ಧಿಯ ಆಶಯದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ ಒಂದು ಶತಮಾನದಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ದೇಶಾದ್ಯಂತ ವಿಸ್ತರಿಸಿದೆ ಎಂದು ಹೇಳಿದರು.
ಸಂಘದ ವಿರುದ್ಧ ಏನೇ ಟೀಕೆ-ಟಿಪ್ಪಣಿಗಳು ಬಂದರೂ ಎದೆಗುಂದದೆ ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್ಎಸ್ಎಸ್ನ ಸ್ವಯಂಸೇವಕರು, ಕಟ್ಟಡದ ದಾನಿ ರಜತ ಕೆ.ವಿ. ಶಿವಕುಮಾರ್ ಅವರ ಕುಟುಂಬದ ಸದಸ್ಯರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ನೂತನ ಕಾರ್ಯಾಲಯದ ಲೋಕಾರ್ಪಣೆಯು ಗೌರಿಬಿದನೂರಿನ ಸಂಘದ ಕಾರ್ಯಕರ್ತರಲ್ಲಿ ಸಂಭ್ರಮ ಮೂಡಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












