ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಷ್ಟ್ರ ಕಂಡ ಅಪ್ರತಿಮ ಮಹಿಳಾ ಸೇನಾನಿ ಹಾಗೂ ಕಿತ್ತೂರು ಸಂಸ್ಥಾನದ ವೀರವನಿತೆ ರಾಣಿ ಚೆನ್ನಮ್ಮನವರ (Rani Chenamma)ಜನ್ಮ ಜಯಂತಿ ಮತ್ತು ಬ್ರಿಟಿಷರ ವಿರುದ್ಧದ ಐತಿಹಾಸಿಕ ವಿಜಯದ 202ನೇ ವರ್ಷದ ವಿಜಯೋತ್ಸವವನ್ನು ನವದೆಹಲಿಯ (Newdelhi) ಸಂಸತ್ ಆವರಣದಲ್ಲಿರುವ ಪ್ರೇರಣಾ ಸ್ಥಳದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಹಾಗೂ ತುಮಕೂರು ಸಂಸದ ವಿ. ಸೋಮಣ್ಣ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಅವರ ಶೌರ್ಯ, ಧೈರ್ಯ ಹಾಗೂ ಸ್ವಾತಂತ್ರ್ಯ ಹೋರಾಟದ ಕೊಡುಗೆಯನ್ನು ಸ್ಮರಿಸಲಾಯಿತು.
Newdelhi: ಗಣ್ಯರಿಂದ ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪನಮನ
ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಸಂಸದರಾದ ಪಿ.ಸಿ. ಮೋಹನ್ ಮತ್ತು ಡಾ. ಸುಧಾಕರ್, ಮಾಜಿ ಸಚಿವರಾದ ಮುರಗೇಶ್ ನಿರಾಣಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕ ರಾಜ್ಯದ ಮಾಜಿ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ರಾಣಿ ಚೆನ್ನಮ್ಮನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಕೂಡಲಸಂಗಮದ ಬಸವ ಮೃತ್ಯುಂಜಯ ಸ್ವಾಮೀಜಿ, ಆಳೂರು-ಬೀದರ್ನ ಸಿದ್ದಾರೂಢ ಮಠದ ಶಂಕರಾನಂದ ಸ್ವಾಮೀಜಿ, ಕಕ್ಕಮರಿಯ ಗುರುದೇವ ಆಶ್ರಮದ ಆತ್ಮಾರಾಮ ಸ್ವಾಮೀಜಿ, ಚಳಕಾಪುರದ ಸಿದ್ದಾರೂಢ ಮಠದ ವಿನಾಯಕ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಪೂಜ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕನ್ನಡಿಗರು ಹಾಗೂ ದೆಹಲಿಯಲ್ಲಿ ನೆಲೆಸಿರುವ ಅಪಾರ ಸಂಖ್ಯೆಯ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಣಿ ಚೆನ್ನಮ್ಮನವರ ಸ್ಮರಣೆಗೆ ಗೌರವ ಸಲ್ಲಿಸಿದರು.
‘ಪ್ರತಿರೋಧದ ಅಮರ ಸಂಕೇತ ರಾಣಿ ಚೆನ್ನಮ್ಮ’
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ರಾಷ್ಟ್ರ ಕಂಡ ಅಪ್ರತಿಮ ಮಹಿಳಾ ಸೇನಾನಿ ಹಾಗೂ ಕಿತ್ತೂರು ಮಹಾ ಸಂಸ್ಥಾನದ ವೀರವನಿತೆ ರಾಣಿ ಚೆನ್ನಮ್ಮನವರ ಜನ್ಮದಿನೋತ್ಸವ ಮತ್ತು ಬ್ರಿಟಿಷರ ವಿರುದ್ಧದ ಅವರ 202ನೇ ವರ್ಷದ ವಿಜಯೋತ್ಸವದ ಸಂದರ್ಭದಲ್ಲಿ ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.
“ಕಿತ್ತೂರು ರಾಣಿ ಚೆನ್ನಮ್ಮ ಕೇವಲ ಯುದ್ಧ ಮಾಡಿದ ರಾಣಿಯಲ್ಲ. ಅವರು ಸಾಮ್ರಾಜ್ಯಶಾಹಿ ಶಕ್ತಿಗೆ ಸವಾಲೆಸೆದು, ಪ್ರತಿರೋಧದ ಅಮರ ಸಂಕೇತವಾಗಿ ಇತಿಹಾಸದಲ್ಲಿ ಉಳಿದ ವೀರ ಮಹಿಳೆ. ಇಂತಹ ವೀರ ಮಹಿಳೆಯ ಸಾಧನೆಯನ್ನು ಸಂಭ್ರಮಿಸುವ ಅವಕಾಶ ನಮಗೆ ದೊರೆತಿರುವುದು ಅತ್ಯಂತ ಸಂತೋಷದ ಸಂಗತಿ” ಎಂದು ಹೇಳಿದರು.
ಭಾರತೀಯ ಸಂಸತ್ತಿನ ಪವಿತ್ರ ಆವರಣದಲ್ಲಿ ವೀರವನಿತೆ ರಾಣಿ ಚೆನ್ನಮ್ಮನವರ ಶೌರ್ಯ, ಧೈರ್ಯ ಮತ್ತು ಹೋರಾಟದ ಕಿಚ್ಚನ್ನು ಸ್ಮರಿಸುತ್ತಿರುವುದು ಹೆಮ್ಮೆಯ ಸಂಗತಿ. ಅವರ ಹೋರಾಟದ ಬದುಕು ಇಂದು ದೇಶ ಕಾಯುತ್ತಿರುವ ವೀರ ಯೋಧರಿಗೂ ಸ್ಫೂರ್ತಿಯಾಗಿದೆ ಎಂದು ಸೋಮಣ್ಣ ಹೇಳಿದರು.
ನಾಡು-ನುಡಿಯ ಬಗ್ಗೆ ಅಭಿಮಾನ ಹೊಂದಿರುವ ಪ್ರತಿಯೊಬ್ಬ ಕನ್ನಡಿಗನಿಗೂ ಇದು ಹೆಮ್ಮೆಯ ಕ್ಷಣ. ಪ್ರತಿವರ್ಷವೂ ಕನ್ನಡಿಗರು ಇಲ್ಲಿ ಒಂದಾಗಿ ಸೇರಿ, ನಾಡಿನ ಮಹನೀಯರನ್ನು ಸ್ಮರಿಸುವ ಮೂಲಕ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ಮೋದಿ, ಓಂ ಬಿರ್ಲಾಗೆ ಅಭಿನಂದನೆ
ರಾಣಿ ಚೆನ್ನಮ್ಮನವರ ಜಯಂತಿ ಹಾಗೂ ವಿಜಯೋತ್ಸವವನ್ನು ಸಂಸತ್ ಆವರಣದಲ್ಲಿ ಪ್ರತಿವರ್ಷ ಆಚರಿಸಲು ಅವಕಾಶ ಕಲ್ಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಡಿನ ಸಮಸ್ತ ಜನತೆಯ ಪರವಾಗಿ ವಿ. ಸೋಮಣ್ಣ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಅನುಮತಿ ನೀಡಿ ಸಹಕರಿಸುತ್ತಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಲೋಕಸಭೆ ಮತ್ತು ರೈಲ್ವೆ ಸಚಿವಾಲಯದ ಅಧಿಕಾರಿಗಳು ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೂ ಕೃತಜ್ಞತೆ ಸಲ್ಲಿಸಿದರು.
ರಾಣಿ ಚೆನ್ನಮ್ಮನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ಉಪಸ್ಥಿತಿಯ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ನಾಡಿನ ಜನರ ಪರವಾಗಿ ಅಭಿನಂದನೆ ಸಲ್ಲಿಸಿದರು.
Also Read>> ಬ್ಯಾಂಕ್ಗೆ ಅಲೆಯುವ ಅಗತ್ಯವಿಲ್ಲ! ರೈಲ್ವೆ ಪಿಂಚಣಿದಾರರಿಗೆ ನವೆಂಬರ್ 1ರಿಂದ ಡಿಜಿಟಲ್ ಸೇವೆ
ಸೋಮಣ್ಣ ಕಾರ್ಯಕ್ಕೆ ಬಸವ ಮೃತ್ಯುಂಜಯ ಸ್ವಾಮೀಜಿ ಮೆಚ್ಚುಗೆ
ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಪ್ರತಿವರ್ಷ ರಾಣಿ ಚೆನ್ನಮ್ಮನವರ ಜನ್ಮ ಜಯಂತಿ ಹಾಗೂ ವಿಜಯೋತ್ಸವವನ್ನು ಆಯೋಜಿಸಿಕೊಂಡು ಬರುತ್ತಿರುವ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಕಾರ್ಯವೈಖರಿಗೆ ಕೂಡಲಸಂಗಮದ ಬಸವ ಮೃತ್ಯುಂಜಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಣಿ ಚೆನ್ನಮ್ಮನವರಂತಹ ಐತಿಹಾಸಿಕ ವೀರ ಮಹಿಳೆಯ ಹೋರಾಟ, ಶೌರ್ಯ ಮತ್ತು ದೇಶಾಭಿಮಾನವನ್ನು ರಾಷ್ಟ್ರಮಟ್ಟದಲ್ಲಿ ಸ್ಮರಿಸುವ ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಗಣ್ಯರು, ಸ್ವಾಮೀಜಿಗಳು ಹಾಗೂ ನೂರಾರು ಕನ್ನಡಿಗರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವು ರಾಣಿ ಚೆನ್ನಮ್ಮನವರ ಶೌರ್ಯ, ಸ್ವಾಭಿಮಾನ ಮತ್ತು ಬ್ರಿಟಿಷರ ವಿರುದ್ಧದ ಐತಿಹಾಸಿಕ ಹೋರಾಟವನ್ನು ಮತ್ತೊಮ್ಮೆ ಸ್ಮರಿಸುವ ವೇದಿಕೆಯಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









