ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಧುನಿಕ ಭಾರತದಲ್ಲಿ ಸ್ಟಿಂಗ್ ಆಪರೇಷನ್ನ (Sting Operation) ಮೂಲ ಹಾಗೂ ಅದರ ಪಿತಾಮಹ ಆರ್ಎಸ್ಎಸ್ ಮತ್ತು ಬಿಜೆಪಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ (BK Hariprasad) ಆರೋಪಿಸಿದ್ದಾರೆ. ಬಿಜೆಪಿ ನಾಯಕರು ನಿಜವಾದ ದೇಶಭಕ್ತರಾಗಿದ್ದರೆ ನಾಥುರಾಮ್ ಗೋಡ್ಸೆ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದೂ ಅವರು ಆಗ್ರಹಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಗೋಡ್ಸೆ ಕುರಿತು ಬಿಜೆಪಿ ನಿಲುವು ಸ್ಪಷ್ಟಪಡಿಸಲಿ’
ಮಹಾತ್ಮ ಗಾಂಧಿ ಹತ್ಯೆಯನ್ನು ಉಲ್ಲೇಖಿಸಿದ ಹರಿಪ್ರಸಾದ್, ನಾಥುರಾಮ್ ಗೋಡ್ಸೆಯನ್ನು ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಎಂದು ಬಿಜೆಪಿ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಾಯಕರು ನಿಜವಾದ ದೇಶಭಕ್ತರಾಗಿದ್ದರೆ, ಸ್ವಾತಂತ್ರ್ಯ ಹೋರಾಟ, ತ್ರಿವರ್ಣ ಧ್ವಜ ಹಾಗೂ ಭಾರತದ ಮೇಲೆ ನಂಬಿಕೆ ಹೊಂದಿದ್ದರೆ ಈ ವಿಚಾರವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.
Sting Operation: ‘ಸ್ಟಿಂಗ್ ಆಪರೇಷನ್ನ ಪಿತಾಮಹ ಆರ್ಎಸ್ಎಸ್’
ಸ್ಟಿಂಗ್ ಆಪರೇಷನ್ ಕುರಿತು ಮಾತನಾಡಿದ ಹರಿಪ್ರಸಾದ್, ಇದು ಈಗಷ್ಟೇ ಆರಂಭವಾದ ಬೆಳವಣಿಗೆಯಲ್ಲ. ಹಿಂದಿನಿಂದಲೂ ರಾಜಕೀಯ ಸೇಡು ತೀರಿಸಿಕೊಳ್ಳಲು ಇಂತಹ ವಿಧಾನಗಳನ್ನು ಬಳಸಲಾಗಿದೆ ಎಂದು ಹೇಳಿದರು.
ಆದರೆ ಆಧುನಿಕ ಭಾರತದಲ್ಲಿ ಸ್ಟಿಂಗ್ ಆಪರೇಷನ್ನ ಪಿತಾಮಹ ಆರ್ಎಸ್ಎಸ್ ಮತ್ತು ಬಿಜೆಪಿಯ ಗುಜರಾತ್ ನಾಯಕರು ಎಂದು ಆರೋಪಿಸಿದ ಅವರು, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಗುಜರಾತ್ ಉಸ್ತುವಾರಿಯಾಗಿದ್ದ ಸಂಜಯ್ ಜೋಷಿ ಅವರಿಗೆ ಸಂಬಂಧಿಸಿದ ಪ್ರಕರಣವನ್ನು ಉಲ್ಲೇಖಿಸಿದರು. ಸ್ಟಿಂಗ್ ಆಪರೇಷನ್ ಸಂಪ್ರದಾಯದ ಕೀರ್ತಿ ಅವರಿಗೇ ಸಲ್ಲಬೇಕು ಎಂದು ವ್ಯಂಗ್ಯವಾಡಿದರು.
‘ಸ್ಲೀಪರ್ ಸೆಲ್ ಇರುವುದು ಬಿಜೆಪಿ-ಆರ್ಎಸ್ಎಸ್ನಲ್ಲಿ’
ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನಲ್ಲಿ ‘ಸ್ಲೀಪರ್ ಸೆಲ್’ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಕಾಂಗ್ರೆಸ್ನಲ್ಲಿ ಯಾವುದೇ ಸ್ಲೀಪರ್ ಸೆಲ್ ಇಲ್ಲ. ಅಂತಹ ವ್ಯವಸ್ಥೆ ಏನಿದ್ದರೂ ಬಿಜೆಪಿ ಮತ್ತು ಆರ್ಎಸ್ಎಸ್ನಲ್ಲಿ ಇದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಇಂತಹ ಕೃತ್ಯ ಅಥವಾ ನಡವಳಿಕೆಯಲ್ಲಿ ಯಾರೇ ಭಾಗಿಯಾಗಿದ್ದರೂ, ಅವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಸಾಕ್ಷ್ಯ ಮತ್ತು ಪುರಾವೆಗಳು ದೊರೆತರೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೃಪಾ ಆಳ್ವ ವಿರುದ್ಧ ಕ್ರಮದ ಪ್ರಶ್ನೆಗೆ ಪ್ರತಿಕ್ರಿಯೆ
ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕೃಪಾ ಆಳ್ವ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ಪ್ರಕರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಬೇಕು. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದವರಿಗೆ ಶೋಕಾಸ್ ನೋಟಿಸ್ ನೀಡುವಂತೆ ಶಿಸ್ತು ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ಹಾಗೂ ಪಕ್ಷದ ಕಾರ್ಯದರ್ಶಿಗೆ ಸೂಚಿಸಿರುವುದಾಗಿ ತಿಳಿಸಿದರು.
ಸ್ಟಿಂಗ್ ಆಪರೇಷನ್ ಕುರಿತು ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ಸಂಪುಟದಲ್ಲಿ ಏನು ಚರ್ಚೆಯಾಗಿದೆ ಎಂಬುದು ತಮಗೆ ತಿಳಿದಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಆಧಾರದಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಆರೋಪಗಳೆಲ್ಲ ಸುಳ್ಳು ಮತ್ತು ತಮ್ಮನ್ನು ಬ್ಲ್ಯಾಕ್ಮೇಲ್ ಮಾಡಲು ಈ ರೀತಿ ಮಾಡಲಾಗಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರ ನೆನಪು ಉಳಿಯಬೇಕು
ಮಹಾತ್ಮ ಗಾಂಧಿ ಶಿವಮೊಗ್ಗ ಜಿಲ್ಲೆಯಲ್ಲಿ ಭೇಟಿ ನೀಡಿದ್ದ ಸ್ಥಳಗಳು ಹಾಗೂ ಅವರ ನೆನಪುಗಳನ್ನು ಉಳಿಸುವ ಕೆಲಸವಾಗಬೇಕು. ಗಾಂಧೀಜಿ ಅವರ ಉದ್ದೇಶ ಮತ್ತು ವಿಚಾರಧಾರೆಗಳು ಇಲ್ಲಿನ ಜನರಿಗೆ ಸ್ಪಷ್ಟವಾಗಿ ತಿಳಿಯುವಂತಾಗಬೇಕು ಎಂದು ಹರಿಪ್ರಸಾದ್ ಹೇಳಿದರು.
Also Read>> ಐಶಾರಾಮಿ ಜೀವನವೇ ರೋಗಗಳಿಗೆ ಕಾರಣವೇ? ಆರೋಗ್ಯದ ಗುಟ್ಟು ಬಿಚ್ಚಿಟ್ಟ ಮಿಮಿಕ್ರಿ ಗೋಪಿ
ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳು ಕ್ರಾಂತಿಕಾರಿ ಹೋರಾಟಗಳ ಹಿನ್ನೆಲೆ ಹೊಂದಿವೆ. ರೈತ ಹೋರಾಟ, ಕಾಗೋಡು ಹೋರಾಟ ಸೇರಿದಂತೆ ಉತ್ತರ ಕರ್ನಾಟಕ ಮತ್ತು ಬಯಲುಸೀಮೆಯ ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಮಂದಿ ತ್ಯಾಗ ಮಾಡಿದ್ದಾರೆ. ಅವರ ನೆನಪುಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.
ಈ ವಿಚಾರವನ್ನು ವಿಧಾನ ಪರಿಷತ್ನಲ್ಲಿಯೂ ಪ್ರಸ್ತಾಪಿಸಿದ್ದೇನೆ. ಪರಿಷತ್ ಸದಸ್ಯರ ನಿಧಿ ಸೇರಿದಂತೆ ಅಗತ್ಯ ನೆರವು ಒದಗಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, ವಿಧಾನ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಈ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದರು.
ನಾಲ್ಕು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಒಂದು ವಾರದೊಳಗೆ ನಿಗಮ-ಮಂಡಳಿಗಳ ಅಧ್ಯಕ್ಷರು ಮತ್ತು ನಿರ್ದೇಶಕರ ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










