ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೆ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ರಾತ್ರಿ ವೇಳೆ ನೀಡುತ್ತಿರುವ 6 ಗಂಟೆ ವಿದ್ಯುತ್ (Power) ಅನ್ನು ಹಗಲು ವೇಳೆಯಲ್ಲೇ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಶಿವಮೊಗ್ಗ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಅಭಾವದಿಂದಾಗಿ ಸಾಗರ, ಸೊರಬ, ಹೊಸನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ಭಾಗಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವಷ್ಟು ವಿದ್ಯುತ್ ಸರಬರಾಜಾಗುತ್ತಿಲ್ಲ. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಬೆಳೆಗಳು ಒಣಗುವ ಆತಂಕ
ಮಳೆ ಕೊರತೆ ಹಾಗೂ ವಿದ್ಯುತ್ ಅಭಾವದಿಂದ ಭತ್ತ, ಮೆಕ್ಕೆಜೋಳ ಮತ್ತು ವಿವಿಧ ತೋಟಗಾರಿಕೆ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಕುರಿತು ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಹರತಾಳು ಹಾಲಪ್ಪ ಆರೋಪಿಸಿದರು.
ಜಿಲ್ಲೆಯ ರೈತರ ಸಮಸ್ಯೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳಲ್ಲಿ ವಿದ್ಯುತ್ ಕೊರತೆಯಿಂದ ಬಹುವಾರ್ಷಿಕ ಬೆಳೆಯಾಗಿರುವ ಅಡಿಕೆ ಬೆಳೆಗೂ ತೀವ್ರ ಹಾನಿಯಾಗುತ್ತಿದೆ ಎಂದು ಹೇಳಿದರು.
ರಾತ್ರಿ ವಿದ್ಯುತ್ ನೀಡುವುದರಿಂದ ರೈತರಿಗೆ ಅಪಾಯ
ರಾತ್ರಿ ವೇಳೆ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ರೈತರು ಹೊಲ ಮತ್ತು ತೋಟಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಮಲೆನಾಡು ಭಾಗಗಳಲ್ಲಿ ಆನೆಗಳು ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಿರುವುದರಿಂದ ರಾತ್ರಿ ಕೃಷಿ ಪ್ರದೇಶಗಳಿಗೆ ತೆರಳಲು ರೈತರು ಭಯಪಡುತ್ತಿದ್ದಾರೆ.
ಹೀಗಾಗಿ ರೈತರ ಸುರಕ್ಷತೆಯ ದೃಷ್ಟಿಯಿಂದಲೂ ರಾತ್ರಿ ಬದಲಾಗಿ ಹಗಲು ವೇಳೆಯಲ್ಲಿ 6 ಗಂಟೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಹರತಾಳು ಹಾಲಪ್ಪ ಆಗ್ರಹಿಸಿದರು.
Shivamogga: ವಿದ್ಯುತ್ ಇಲಾಖೆಯಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿ
ಜಿಲ್ಲೆಯ ವಿದ್ಯುತ್ ಇಲಾಖೆಯಲ್ಲಿ ಸುಮಾರು ಶೇ.50ರಷ್ಟು ಹುದ್ದೆಗಳು ಖಾಲಿ ಇವೆ ಎಂದು ಅವರು ಆರೋಪಿಸಿದರು. ಜಿಲ್ಲೆಯಲ್ಲಿ ಒಬ್ಬರೇ ಎಕ್ಸಿಕ್ಯೂಟಿವ್ ಎಂಜಿನಿಯರ್ ಇದ್ದು, ಅವರ ಅಧೀನದಲ್ಲಿ ಕೇವಲ ಆರು ಸಹಾಯಕ ಎಂಜಿನಿಯರ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲಸದ ಒತ್ತಡದಿಂದಾಗಿ ವಿದ್ಯುತ್ ಸರಬರಾಜಿನ ಸಮಸ್ಯೆಗಳತ್ತ ಸಮರ್ಪಕವಾಗಿ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಅದೇ ರೀತಿ ಲೈನ್ಮ್ಯಾನ್ಗಳ ಹುದ್ದೆಗಳೂ ಸಾಕಷ್ಟು ಖಾಲಿ ಇದ್ದು, ಸರ್ಕಾರ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.
Also Read>> ಕಾಂಗ್ರೆಸ್ನಲ್ಲಿ ‘ಸ್ಲೀಪರ್ ಸೆಲ್’ ಇದೆಯೇ? ಬಿ.ಕೆ. ಹರಿಪ್ರಸಾದ್ ಕೊಟ್ಟ ಉತ್ತರವೇನು?
7 ಗಂಟೆಯಿಂದ 6 ಗಂಟೆಗೆ ಇಳಿಕೆ
ರೈತರಿಗೆ ಈ ಹಿಂದೆ 7 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಇದೀಗ ಅದನ್ನು 6 ಗಂಟೆಗೆ ಇಳಿಸಲಾಗಿದ್ದು, ಆ 6 ಗಂಟೆಯ ವಿದ್ಯುತ್ ಸಹ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ಹರತಾಳು ಹಾಲಪ್ಪ ದೂರಿದರು.
ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲು ಇತ್ತೀಚೆಗೆ ರಿಪ್ಪನ್ಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ವಿದ್ಯುತ್ ಕೊರತೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಇಲಾಖೆಯಲ್ಲೂ ಹುದ್ದೆಗಳ ಕೊರತೆ
ಸಾಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆಯಲ್ಲೂ ಪಿಎಸ್ಐ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಹೀಗಾಗಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಕಾನೂನು ಸುವ್ಯವಸ್ಥೆ ಬಲಪಡಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ್ ಕಡಸೂರು, ಜಾನಕಪ್ಪ ಒಡೆಯರ್, ಮುರುಳಿ, ಚಂದ್ರಶೇಖರ್, ಮಂಜುನಾಥ್ ಹಾಗೂ ಸುರೇಶ್ ಉದ್ರಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










