ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ (SWR Hubballi) ಅಕ್ಟೋಬರ್ 26ರಿಂದ ನವೆಂಬರ್ 1ರವರೆಗೆ ವಿಚಕ್ಷಣ ಜಾಗೃತ ಸಪ್ತಾಹ (Vigilance Awareness Week) ಆಚರಿಸಲಾಗುತ್ತಿದೆ. ಸಪ್ತಾಹದ ಅಂಗವಾಗಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಅವರು ಕಚೇರಿ ಆವರಣದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ‘ಇಂಟಿಗ್ರಿಟಿ ಪ್ಲೆಡ್ಜ್’ ಬೋಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೇಲಾ ಮೀನಾ, ವಿಜಿಲೆನ್ಸ್ ಜಾಗೃತಿ ಸಪ್ತಾಹದ ಪ್ರಮುಖ ಉದ್ದೇಶ ನೌಕರರಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯ ಮನೋಭಾವವನ್ನು ಮತ್ತಷ್ಟು ಬಲಪಡಿಸುವುದಾಗಿದೆ ಎಂದು ಹೇಳಿದರು.
ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದರ ಜೊತೆಗೆ ಒಗ್ಗಟ್ಟಿನಿಂದ ಶ್ರಮಿಸಬೇಕು. ಈ ಮೂಲಕ ಸದೃಢ, ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

‘ಸತ್ಯನಿಷ್ಠೆಯಿಂದ ಸಮೃದ್ಧಿ’ ಥೀಮ್
ಪ್ರಸ್ತುತ ವರ್ಷದಲ್ಲಿ ಕೇಂದ್ರ ವಿಜಿಲೆನ್ಸ್ ಆಯೋಗ (CVC) ರಾಷ್ಟ್ರವ್ಯಾಪಿ ‘ಸತ್ಯನಿಷ್ಠೆಯಿಂದ ಸಮೃದ್ಧಿ’ (Probity for Prosperity) ಎಂಬ ಧ್ಯೇಯವಾಕ್ಯದಡಿ ವಿಜಿಲೆನ್ಸ್ ಜಾಗೃತಿ ಸಪ್ತಾಹವನ್ನು ಆಚರಿಸುತ್ತಿದೆ.
ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಮಹತ್ವವನ್ನು ಜನರಿಗೆ ಹಾಗೂ ನೌಕರರಿಗೆ ತಿಳಿಸುವುದು ಸಪ್ತಾಹದ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿಯೂ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Also Read>> ನ.15ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ | ಏನೆಲ್ಲಾ ಕಾರ್ಯಕ್ರಮ? ಸಿಎಂ ಡಿಕೆಶಿ ಏನಂದ್ರು?
SWR Hubballi: ಬೀದಿ ನಾಟಕ, ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು
ವಿಜಿಲೆನ್ಸ್ ಜಾಗೃತಿ ಸಪ್ತಾಹದ ಅಂಗವಾಗಿ ಹುಬ್ಬಳ್ಳಿ ರೈಲ್ವೆ ವಿಭಾಗವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ (ನುಕ್ಕಡ್ ನಾಟಕ) ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಶಾಲಾ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಕೂಡ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳ ಮೂಲಕ ಪ್ರಾಮಾಣಿಕತೆ, ನೈತಿಕತೆ ಮತ್ತು ಭ್ರಷ್ಟಾಚಾರ ವಿರೋಧಿ ಜಾಗೃತಿಯನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.
ಪ್ರಾಮಾಣಿಕತೆ ಪ್ರತಿಜ್ಞೆ ಬೋಧನೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ರೈಲ್ವೆ ವಿಭಾಗದ ಎಲ್ಲ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










