ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೈಋತ್ಯ ರೈಲ್ವೆಯ ಬೆಂಗಳೂರು (SWR Bengaluru) ವಿಭಾಗದಲ್ಲಿ 2026ನೇ ಸಾಲಿನ ವಿಚಕ್ಷಣಾ ಜಾಗೃತಿ ಸಪ್ತಾಹಕ್ಕೆ (Vigilance Awareness Week) ಚಾಲನೆ ನೀಡಲಾಯಿತು. ಅಕ್ಟೋಬರ್ 26ರಿಂದ ನವೆಂಬರ್ 1ರವರೆಗೆ ನಡೆಯಲಿರುವ ಈ ಸಪ್ತಾಹವನ್ನು ‘ಸಮೃದ್ಧಿಗಾಗಿ ಪ್ರಾಮಾಣಿಕತೆ’ ಎಂಬ ಧ್ಯೇಯವಾಕ್ಯದಡಿ ಆಚರಿಸಲಾಗುತ್ತಿದೆ.
ಉತ್ತಮ ಆಡಳಿತವನ್ನು ಉತ್ತೇಜಿಸುವುದು ಹಾಗೂ ರಾಷ್ಟ್ರದ ಸಮೃದ್ಧಿಗೆ ಕೊಡುಗೆ ನೀಡುವಲ್ಲಿ ಪ್ರಾಮಾಣಿಕತೆ ಮತ್ತು ನೈತಿಕ ನಡವಳಿಕೆಯ ಮಹತ್ವವನ್ನು ಸಾರುವುದು ವಿಚಕ್ಷಣಾ ಜಾಗೃತಿ ಸಪ್ತಾಹದ ಪ್ರಮುಖ ಉದ್ದೇಶವಾಗಿದೆ.
SWR Bengaluru: ಅಧಿಕಾರಿಗಳು, ಸಿಬ್ಬಂದಿಗೆ ಪ್ರಾಮಾಣಿಕತೆಯ ಪ್ರತಿಜ್ಞೆ
ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ವಿಭಾಗೀಯ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ‘ಪ್ರಾಮಾಣಿಕತೆಯ ಪ್ರತಿಜ್ಞೆ’ ಬೋಧಿಸಲಾಯಿತು.
ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರತಿಜ್ಞೆ ಬೋಧಿಸಿದರು. ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನೈತಿಕ ಮೌಲ್ಯಗಳನ್ನು ಪಾಲಿಸುವ ಮೂಲಕ ಉತ್ತಮ ಆಡಳಿತ ವ್ಯವಸ್ಥೆಗೆ ಕೊಡುಗೆ ನೀಡುವ ಅಗತ್ಯವನ್ನು ಈ ಸಂದರ್ಭದಲ್ಲಿ ಒತ್ತಿಹೇಳಲಾಯಿತು.
Also Read>> ಹುಬ್ಬಳ್ಳಿ ರೈಲ್ವೆ | ‘ಸತ್ಯನಿಷ್ಠೆಯಿಂದ ಸಮೃದ್ಧಿ’ ಥೀಮ್ನಲ್ಲಿ ವಿಚಕ್ಷಣ ಜಾಗೃತ ಸಪ್ತಾಹ
ವಿಚಕ್ಷಣಾ ಜಾಗೃತಿ ಸಪ್ತಾಹದ ಮೂಲಕ ರೈಲ್ವೆ ಇಲಾಖೆಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಅಧಿಕಾರಿಗಳು, ಸಿಬ್ಬಂದಿ ಭಾಗಿ
ಕಾರ್ಯಕ್ರಮದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ಪುರಿಯಾ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ವೆಂಕಟೇಶ್ ನಾಯಕ್ ಸೇರಿದಂತೆ ಬೆಂಗಳೂರು ವಿಭಾಗದ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









