ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಬಳ್ಳಾರಿ ನಗರದ ಬಿಎಂಸಿಆರ್ಸಿ ವೈದ್ಯಕೀಯ ಕಾಲೇಜು (Ballari BMCRC hospital) ಮತ್ತು ಆಸ್ಪತ್ರೆಯ ವೈದ್ಯರ ತಂಡವು ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯೊಳಗಿದ್ದ ಭ್ರೂಣವನ್ನು ಸಂಕೀರ್ಣ ಶಸ್ತ್ರಚಿಕಿತ್ಸೆಯ (Surgery) ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದು, ಮಗುವಿಗೆ ಮರುಜೀವ ನೀಡಿದೆ. ವೈದ್ಯಕೀಯ ಲೋಕದಲ್ಲೇ ಅತ್ಯಂತ ಅಪರೂಪವಾಗಿ ಕಂಡುಬರುವ ‘ಫೀಟಸ್ ಇನ್ ಫೀಟು’ (Fetus in Fetu) ಪ್ರಕರಣ ಇದಾಗಿದೆ.
ಮಗು ತಾಯಿಯ ಗರ್ಭದಲ್ಲಿದ್ದಾಗಲೇ ಈ ಅಪರೂಪದ ಸಮಸ್ಯೆಯನ್ನು ವೈದ್ಯರು ಪತ್ತೆಹಚ್ಚಿದ್ದರು. ಬಿಎಂಸಿಆರ್ಸಿಯ ವಿಕಿರಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸದಾಶಿವಗೌಡ ಅವರ ನೇತೃತ್ವದ ತಂಡ ನಡೆಸಿದ ತಪಾಸಣೆಯಲ್ಲಿ ಮಗುವಿನ ಹೊಟ್ಟೆಯೊಳಗೆ ಭ್ರೂಣ ಇರುವುದನ್ನು ಗುರುತಿಸಲಾಗಿತ್ತು.
ಎರಡು ತಿಂಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಜನನದ ಬಳಿಕ ಮಗುವಿಗೆ ಅಗತ್ಯ ವೈದ್ಯಕೀಯ ತಪಾಸಣೆಗಳನ್ನು ನಡೆಸಿದ ವೈದ್ಯರು, ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಶಸ್ತ್ರಚಿಕಿತ್ಸೆಗೆ ಯೋಜನೆ ರೂಪಿಸಿದ್ದರು. ಬಳಿಕ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಹೊಟ್ಟೆಯೊಳಗಿದ್ದ ಭ್ರೂಣವನ್ನು ಹೊರತೆಗೆದಿದೆ.
ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರ ತಂಡ
ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಗಡ್ಡಿ ದಿವಾಕರ್ ಅವರ ನೇತೃತ್ವದಲ್ಲಿ ನಡೆದ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ ಡಾ. ಸಂಜೀವ್ ಜೋಶಿ, ಡಾ. ರಾಮ್ ಮೋಹನ್ ಹಾಗೂ ಡಾ. ಅಶ್ವಿತಾ ಭಾಗವಹಿಸಿದ್ದರು.
ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ. ಬಾಲಸುಬ್ರಹ್ಮಣ್ಯ ಅವರೊಂದಿಗೆ ಡಾ. ಪರಿಮಳಾ, ಡಾ. ನಿಜಾಮುದ್ದೀನ್, ಡಾ. ರಘುನಾಥ್ ಮತ್ತು ಡಾ. ಮಧುಶ್ರೀ ಸಹಕರಿಸಿದರು. ಶುಶ್ರೂಷಕರಾದ ಪುಷ್ಪಲತಾ ಮತ್ತು ಸಲೀಂ ಪಾಷಾ ಅವರೂ ಶಸ್ತ್ರಚಿಕಿತ್ಸಾ ತಂಡಕ್ಕೆ ನೆರವಾದರು.
ಏನಿದು ‘ಫೀಟಸ್ ಇನ್ ಫೀಟು’?
ವೈದ್ಯಕೀಯ ವಿಜ್ಞಾನದ ಪ್ರಕಾರ ‘ಫೀಟಸ್ ಇನ್ ಫೀಟು’ ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿಯಾಗಿದೆ. ತಾಯಿಯ ಗರ್ಭದಲ್ಲಿ ಅವಳಿ ಭ್ರೂಣಗಳ ಬೆಳವಣಿಗೆಯ ಸಂದರ್ಭದಲ್ಲಿ ಒಂದು ಭ್ರೂಣ ಸಮರ್ಪಕವಾಗಿ ಬೆಳವಣಿಗೆ ಹೊಂದದೆ ಮತ್ತೊಂದು ಭ್ರೂಣದ ದೇಹದೊಳಗೆ ಸೇರಿಕೊಳ್ಳುವ ಸ್ಥಿತಿಯನ್ನು ‘ಫೀಟಸ್ ಇನ್ ಫೀಟು’ ಎಂದು ಕರೆಯಲಾಗುತ್ತದೆ.
ಸುಮಾರು ಐದು ಲಕ್ಷ ಜನನಗಳಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ಇಂತಹ ಸ್ಥಿತಿ ಕಂಡುಬರುತ್ತದೆ ಎಂದು ಹೇಳಲಾಗಿದೆ. ಸೂಕ್ತ ಸಮಯದಲ್ಲಿ ಸಮಸ್ಯೆಯನ್ನು ಗುರುತಿಸಿ ಅಗತ್ಯ ಶಸ್ತ್ರಚಿಕಿತ್ಸೆ ನಡೆಸಿದರೆ ಮಗುವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ.
Ballari BMCRC hospital: 2008ರಲ್ಲೂ ಯಶಸ್ವಿ ಶಸ್ತ್ರಚಿಕಿತ್ಸೆ
ಡಾ. ಗಡ್ಡಿ ದಿವಾಕರ್ ಅವರ ನೇತೃತ್ವದಲ್ಲಿ ಕಳೆದ 22 ವರ್ಷಗಳಿಂದ ಸುಧಾರಿತ ಮಕ್ಕಳ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. 2008ರಲ್ಲಿಯೂ ಇಂತಹುದೇ ಅಪರೂಪದ ಪ್ರಕರಣವನ್ನು ವಿಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಿಭಾಯಿಸಲಾಗಿತ್ತು.
Also Read>> ಬೆಂಗಳೂರಿನಲ್ಲಿ ‘ಮನೋತ್ಸವ 2026’: ಡಿಸೆಂಬರ್ 5ರಿಂದ ಮಾನಸಿಕ ಆರೋಗ್ಯ ಉತ್ಸವ, ಪ್ರವೇಶ ಉಚಿತ!
ಈ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲು ಅಗತ್ಯ ಸಹಕಾರ ನೀಡಿದ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ. ಮರಿರಾಜ್, ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಎಂ., ವೈದ್ಯಕೀಯ ಅಧೀಕ್ಷಕ ಡಾ. ಅರುಣ್, ಮುಖ್ಯ ಆಡಳಿತಾಧಿಕಾರಿ ಡಾ. ನಯನಾ ಹಾಗೂ ಹಣಕಾಸು ಸಲಹೆಗಾರ ಮಹೇಶ್ ಅವರಿಗೆ ವೈದ್ಯರ ತಂಡ ಕೃತಜ್ಞತೆ ಸಲ್ಲಿಸಿದೆ.
ಎರಡು ತಿಂಗಳ ಪುಟ್ಟ ಮಗುವಿನ ಹೊಟ್ಟೆಯೊಳಗಿದ್ದ ಭ್ರೂಣವನ್ನು ಯಶಸ್ವಿಯಾಗಿ ಹೊರತೆಗೆದ ಬಿಎಂಸಿಆರ್ಸಿ ವೈದ್ಯರ ಈ ಸಾಧನೆ ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಕರಣವಾಗಿ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









