ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಸಿದವರ ಹೊಟ್ಟೆ ತುಂಬಿಸಬೇಕಾದ ಸರ್ಕಾರವೇ ಪಡಿತರದ ಹೆಸರಿನಲ್ಲಿ ಕಲ್ಲು, ಮಣ್ಣು, ಕಸ ಹಾಗೂ ಧೂಳು ಮಿಶ್ರಿತ ಕಳಪೆ ಗುಣಮಟ್ಟದ ರಾಗಿ (Poor quality Ragi) ವಿತರಿಸುತ್ತಿದೆ ಎಂದು ಆರೋಪಿಸಿ ಶಿವಮೊಗ್ಗದ (Shivamogga) ಹೊಸನಗರ ತಾಲೂಕಿನ ಪಡಿತರ ಫಲಾನುಭವಿಗಳು ಆಡಳಿತ ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸನಗರ ತಾಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗಳ ಮೂಲಕ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ವಿತರಿಸಲಾಗುತ್ತಿರುವ ರಾಗಿ ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು, ತಿನ್ನಲು ಯೋಗ್ಯವಾಗಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ರಾಗಿ ಮೂಟೆಗಳನ್ನು ತೆರೆದಾಗ ಕಲ್ಲು, ಮಣ್ಣು, ಕಸ ಹಾಗೂ ಧೂಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.
46 ನ್ಯಾಯಬೆಲೆ ಅಂಗಡಿ, 26 ಸಾವಿರಕ್ಕೂ ಹೆಚ್ಚು ಕುಟುಂಬ
ಹೊಸನಗರ ತಾಲೂಕಿನಲ್ಲಿ ಒಟ್ಟು 46 ನ್ಯಾಯಬೆಲೆ ಅಂಗಡಿಗಳಿದ್ದು, ಸುಮಾರು 26 ಸಾವಿರಕ್ಕೂ ಅಧಿಕ ಬಡ ಕುಟುಂಬಗಳು ಸರ್ಕಾರದ ಪಡಿತರ ವ್ಯವಸ್ಥೆಯನ್ನು ಅವಲಂಬಿಸಿವೆ. ಈ ಹಿಂದೆ ಪ್ರತಿ ಫಲಾನುಭವಿಗೆ ತಲಾ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿತ್ತು. ಆದರೆ ಆಹಾರ ಇಲಾಖೆಯ ಇತ್ತೀಚಿನ ಸುತ್ತೋಲೆಯಂತೆ ಪ್ರತಿ ಸದಸ್ಯರಿಗೆ 7 ಕೆ.ಜಿ. ಅಕ್ಕಿ ಹಾಗೂ 3 ಕೆ.ಜಿ. ರಾಗಿ ವಿತರಿಸಲಾಗುತ್ತಿದೆ.
ಪೌಷ್ಟಿಕ ಆಹಾರವಾಗಿ ರಾಗಿ ನೀಡುತ್ತಿರುವುದಕ್ಕೆ ಸಾರ್ವಜನಿಕರಿಂದ ವಿರೋಧವಿಲ್ಲ. ಆದರೆ ವಿತರಿಸಲಾಗುತ್ತಿರುವ ರಾಗಿಯ ಗುಣಮಟ್ಟವೇ ಈಗ ಪ್ರಶ್ನೆಗೆ ಕಾರಣವಾಗಿದೆ. ಮೂಟೆ ತೆರೆದರೆ ರಾಗಿಗಿಂತ ಕಲ್ಲು, ಕಸ, ಧೂಳು ಹಾಗೂ ಮಣ್ಣಿನ ಅಂಶಗಳು ಹೆಚ್ಚಾಗಿ ಕಾಣಿಸುತ್ತಿವೆ ಎಂಬುದು ಫಲಾನುಭವಿಗಳ ಆರೋಪವಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ವಾಗ್ವಾದ
ಕಳಪೆ ರಾಗಿ ಕಂಡು ಆಕ್ರೋಶಗೊಂಡ ಕೆಲ ಫಲಾನುಭವಿಗಳು ಸ್ಥಳೀಯ ನ್ಯಾಯಬೆಲೆ ಅಂಗಡಿ ಮಾಲೀಕರೊಂದಿಗೆ ವಾಗ್ವಾದ ನಡೆಸುತ್ತಿದ್ದಾರೆ. ಆದರೆ ಸರ್ಕಾರದ ಗೋದಾಮುಗಳಿಂದ ಯಾವ ರೀತಿಯಲ್ಲಿ ರಾಗಿ ಮೂಟೆಗಳು ಸರಬರಾಜಾಗುತ್ತವೆಯೋ ಅದನ್ನೇ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಹೀಗಾಗಿ ಸಮಸ್ಯೆಗೆ ಸ್ಥಳೀಯ ನ್ಯಾಯಬೆಲೆ ಅಂಗಡಿ ವಿತರಕರನ್ನು ಹೊಣೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಕಳಪೆ ಆಹಾರಧಾನ್ಯ ಸರಬರಾಜಿನ ಮೂಲ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಹಾಗೂ ಆಹಾರ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Shivamogga : ಅಧಿಕಾರಿಗಳಿಂದ ಗುಣಮಟ್ಟ ಪರಿಶೀಲನೆ
ರಾಗಿಯ ಗುಣಮಟ್ಟದ ಕುರಿತು ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹೊಸನಗರ ತಹಶೀಲ್ದಾರ್ ಭರತ್ರಾಜ್, ಆಹಾರ ನಿರೀಕ್ಷಕರಾದ ಬಾಲಚಂದ್ರ ಹಾಗೂ ನಾಗರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ವಿತರಿಸಲಾಗುತ್ತಿರುವ ರಾಗಿಯ ಗುಣಮಟ್ಟದಲ್ಲಿ ದೋಷವಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಈ ಸಂಬಂಧ ತಹಶೀಲ್ದಾರ್ ಅವರು ಸರ್ಕಾರದ ಉನ್ನತ ಮಟ್ಟದ ಆಹಾರ ಸರಬರಾಜು ಅಧಿಕಾರಿಗಳಿಗೆ ಲಿಖಿತ ಪತ್ರ ರವಾನಿಸಿದ್ದು, ಮುಂದಿನ ತಿಂಗಳಿಂದ ಕಡ್ಡಾಯವಾಗಿ ಸ್ವಚ್ಛ ಹಾಗೂ ಉತ್ತಮ ಗುಣಮಟ್ಟದ ರಾಗಿಯನ್ನು ಸರಬರಾಜು ಮಾಡುವಂತೆ ಸೂಚಿಸಿದ್ದಾರೆ.
Also Read>> ಅಚ್ಚರಿಯ ವೈದ್ಯಕೀಯ ಪ್ರಕರಣ! ಕಂದಮ್ಮನ ಹೊಟ್ಟೆಯೊಳಗೇ ಮತ್ತೊಂದು ಭ್ರೂಣ
ಕಳಪೆ ರಾಗಿ ವಿತರಣೆ ನಿಲ್ಲಿಸಲು ಆಗ್ರಹ
ಬಡವರ ಆಹಾರದ ವಿಚಾರದಲ್ಲಿ ಸರ್ಕಾರ ಹಾಗೂ ಆಹಾರ ಇಲಾಖೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಕಳಪೆ ಗುಣಮಟ್ಟದ ರಾಗಿ ವಿತರಣೆಯನ್ನು ತಕ್ಷಣ ಸ್ಥಗಿತಗೊಳಿಸಿ, ಈಗಾಗಲೇ ವಿತರಿಸಿರುವ ಕಳಪೆ ರಾಗಿಗೆ ಬದಲಾಗಿ ಉತ್ತಮ ದರ್ಜೆಯ ಆಹಾರಧಾನ್ಯ ಒದಗಿಸಬೇಕು ಎಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.
ಪಡಿತರ ಧಾನ್ಯಗಳ ಗುಣಮಟ್ಟವನ್ನು ಗೋದಾಮು ಹಂತದಲ್ಲಿಯೇ ಸಮರ್ಪಕವಾಗಿ ಪರಿಶೀಲಿಸಿ ನಂತರ ನ್ಯಾಯಬೆಲೆ ಅಂಗಡಿಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರತಿಭಟನೆ ನಡೆಸುವುದರ ಜೊತೆಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಎಂದು ಫಲಾನುಭವಿಗಳು ಎಚ್ಚರಿಕೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








