ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಧ್ಯಾತ್ಮದ ಮೂಲಕ ವೈಜ್ಞಾನಿಕ ಶಿಕ್ಷಣ ನೀಡುವ ಆಶಯದೊಂದಿಗೆ ಶಿವಮೊಗ್ಗ (Shivamogga) ಜಿಲ್ಲೆ ಹಾಗೂ ಶೃಂಗೇರಿಯಲ್ಲಿ ಎಸ್ಎಸ್ಎಲ್ಸಿ ವರೆಗೆ ಎಂಟಕ್ಕೂ ಹೆಚ್ಚು ಶಾಲೆಗಳನ್ನು ನಡೆಸುತ್ತಾ ಸಾವಿರಾರು ಮಕ್ಕಳಿಗೆ ಗುರುಕುಲ ಮಾದರಿಯ ಶಿಕ್ಷಣ ನೀಡುತ್ತಿರುವ ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್, (Sri Ramakrishna Vidyashrama Trust) ಈ ವರ್ಷ ಪಿಯು ಶಿಕ್ಷಣ ಕ್ಷೇತ್ರಕ್ಕೆ ಹೊಸ ಹೆಜ್ಜೆ ಇಡುತ್ತಿದೆ ಎಂದು ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ಆರ್. ವೆಂಕಟರಮಣ ಹಾಗೂ ಅಧ್ಯಕ್ಷ ಡಾ. ಡಿ.ಆರ್. ನಾಗೇಶ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥಾಪಕ ಡಿ.ಎಂ. ವೆಂಕಟರಮಣ ಅವರ ಕನಸಿನಂತೆ ಅನುಪಿನಕಟ್ಟೆ ಹಳೆ ಊರಿನಲ್ಲಿ ಸುಸಜ್ಜಿತ ಶ್ರೀ ರಾಮಕೃಷ್ಣ ಪಿಯು ಕಾಲೇಜು ನಿರ್ಮಿಸಲಾಗಿದ್ದು, ನ. 4ರಂದು ಬೆಳಿಗ್ಗೆ 10.30ಕ್ಕೆ ಕಾಲೇಜು ಆವರಣದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು.
ರಾಜ್ಯದಲ್ಲೇ ಮಾದರಿಯಾಗುವ ರೀತಿಯಲ್ಲಿ ಕಾಲೇಜು ಕಟ್ಟಡವನ್ನು ನಿರ್ಮಿಸಲಾಗಿದ್ದು, ಪಿಯುಸಿ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಮುಂದಿನ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ತರಬೇತಿಯನ್ನು ನೀಡಲು ಯೋಜಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅನುಗುಣವಾಗಿ ಆಧುನಿಕ ಸೌಲಭ್ಯಗಳು ಹಾಗೂ ಪರಿಣಿತ ಉಪನ್ಯಾಸಕರನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಪಿಸಿಎಂಬಿ, ಪಿಸಿಎಂಸಿಎಸ್ ವಿಭಾಗ
ಶ್ರೀ ರಾಮಕೃಷ್ಣ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಆದ್ಯತೆ ನೀಡಲಾಗಿದ್ದು, ಪಿಸಿಎಂಬಿ ಹಾಗೂ ಪಿಸಿಎಂಸಿಎಸ್ ಎಂಬ ಎರಡು ಸಂಯೋಜನೆಗಳನ್ನು ಆರಂಭಿಸಲಾಗುತ್ತಿದೆ. ಪಿಯು ಬೋರ್ಡ್ ಪಠ್ಯದ ಜತೆಗೆ ವಿದ್ಯಾರ್ಥಿಗಳಿಗೆ ನೀಟ್ ಮತ್ತು ಜೆಇಇ ಪ್ರವೇಶ ಪರೀಕ್ಷೆಗಳ ತರಬೇತಿಯನ್ನು ಇಂಟಿಗ್ರೇಟೆಡ್ ಮಾದರಿಯಲ್ಲಿ ನೀಡಲಾಗುವುದು.
ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳು ನೀಟ್, ಜೆಇಇ ತರಬೇತಿಗಾಗಿ ಹೊರ ಜಿಲ್ಲೆಗಳಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ, ಅದೇ ಗುಣಮಟ್ಟದ ತರಬೇತಿಯನ್ನು ಅನುಪಿನಕಟ್ಟೆಯ ಕಾಲೇಜು ಕ್ಯಾಂಪಸ್ನಲ್ಲಿಯೇ ನೀಡುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ನೀಟ್ ಮತ್ತು ಜೆಇಇ ತರಬೇತಿಯಲ್ಲಿ ಪರಿಣತಿ ಹೊಂದಿರುವ ಉಪನ್ಯಾಸಕರ ತಂಡವನ್ನು ನೇಮಿಸಲಾಗಿದೆ ಎಂದು ಶೋಭಾ ವೆಂಕಟರಮಣ ಹೇಳಿದರು.
ಪಿಯು ಬೋರ್ಡ್ ಪಠ್ಯಕ್ರಮದ ಜತೆಗೆ ನೀಟ್ ಮತ್ತು ಜೆಇಇ ಪರೀಕ್ಷೆಗಳ ಸಿಲಬಸ್ನ್ನು ಸಮನ್ವಯಗೊಳಿಸಿ ಬೋಧಿಸಲಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ ಪಿಯುಸಿ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯನ್ನೂ ಒಂದೇ ಕಡೆ ಪಡೆಯಲು ಸಾಧ್ಯವಾಗಲಿದೆ ಎಂದರು.
ವಿದ್ಯಾರ್ಥಿಗಳಿಗೆ ವಸತಿ, ಸ್ಟಡಿ ಅವರ್ಸ್
ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಸುಸಜ್ಜಿತ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಾಲೇಜಿನಲ್ಲಿಯೇ ಸಂಜೆ ಅಧ್ಯಯನಕ್ಕೆ ವಿಶೇಷ ಸಮಯವನ್ನು ನಿಗದಿಪಡಿಸಲಾಗಿದ್ದು, ಈ ಸ್ಟಡಿ ಅವರ್ಸ್ನಲ್ಲಿ ಹಿರಿಯ ಮಾರ್ಗದರ್ಶಿ ಉಪನ್ಯಾಸಕರು ಕಡ್ಡಾಯವಾಗಿ ಹಾಜರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಪಠ್ಯ ಹಾಗೂ ಪ್ರವೇಶ ಪರೀಕ್ಷೆಗಳ ಸಿದ್ಧತೆಯನ್ನು ಪರಿಣಾಮಕಾರಿಯಾಗಿ ನಡೆಸಲು ಅಗತ್ಯವಾದ ಶೈಕ್ಷಣಿಕ ವಾತಾವರಣವನ್ನು ಕ್ಯಾಂಪಸ್ನಲ್ಲಿಯೇ ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಆಧುನಿಕ ಪ್ರಯೋಗಾಲಯ, ವಿಶಾಲ ತರಗತಿ ಕೊಠಡಿಗಳು
ನೂತನ ಶೈಲಿಯಲ್ಲಿ ವಿಶಾಲವಾಗಿ ನಿರ್ಮಿಸಿರುವ ಕಾಲೇಜು ಕಟ್ಟಡದಲ್ಲಿ ಆಧುನಿಕ ವಿಜ್ಞಾನ ಪ್ರಯೋಗಾಲಯಗಳಿಗೆ ಆದ್ಯತೆ ನೀಡಲಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಕಂಪ್ಯೂಟರ್ ಪ್ರಯೋಗಾಲಯಗಳನ್ನು ನಿರ್ಮಿಸಲಾಗಿದ್ದು, ಅಗತ್ಯ ಸಂಶೋಧನಾ ಹಾಗೂ ಪ್ರಾಯೋಗಿಕ ಉಪಕರಣಗಳನ್ನು ಅಳವಡಿಸಲಾಗಿದೆ.
ಇದರ ಜತೆಗೆ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ವಿಶಾಲವಾದ ತರಗತಿ ಕೊಠಡಿಗಳನ್ನು ನೂತನ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ಆಧುನಿಕ ವೈಜ್ಞಾನಿಕ ಶಿಕ್ಷಣವನ್ನು ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಶೋಭಾ ವೆಂಕಟರಮಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅರುಣ್, ಶರತ್, ಸಮೃದ್ ಹಾಗೂ ಹಿರಿಯ ಶಿಕ್ಷಕ ರಮೇಶ್ ಉಪಸ್ಥಿತರಿದ್ದರು.
Also Read>> ಶಿವಮೊಗ್ಗ | ಹೊಸನಗರದಲ್ಲಿ ಕಳಪೆ ಪಡಿತರ ರಾಗಿ ವಿತರಣೆ; ಬಡವರ ಆಕ್ರೋಶ
ಲೋಕಾರ್ಪಣೆ ಕಾರ್ಯಕ್ರಮ
ಶ್ರೀ ರಾಮಕೃಷ್ಣ ಪಿಯು ಕಾಲೇಜಿನ ಲೋಕಾರ್ಪಣೆ ಸಮಾರಂಭವು ನ. 4ರಂದು ಬುಧವಾರ ಬೆಳಿಗ್ಗೆ 10.30ಕ್ಕೆ ಅನುಪಿನಕಟ್ಟೆ ಹಳೆ ಊರಿನ ಕಾಲೇಜು ಆವರಣದಲ್ಲಿ ನಡೆಯಲಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಕಲ್ಲುಗಂಗೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪೂಜ್ಯ ಶ್ರೀ ವಿನಯಾನಂದ ಸರಸ್ವತಿ ಮಹಾರಾಜ್ ಅವರ ದಿವ್ಯ ಸಾನ್ನಿಧ್ಯದಲ್ಲಿ ಕಾಲೇಜು ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಡಿ.ಆರ್. ನಾಗೇಶ್ ವಹಿಸಲಿದ್ದಾರೆ. ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ಆರ್. ವೆಂಕಟರಮಣ, ಸದಸ್ಯ ಡಿ.ಎಂ. ದೇವರಾಜ್, ಅರುಣ್ ಕೆ.ಎಚ್., ಶರತ್ ಕೆ.ಡಿ., ರಾಮಕೃಷ್ಣ ಸಮೂಹ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಪೋಷಕರು ಭಾಗವಹಿಸಲಿದ್ದಾರೆ.
ಲೋಕಾರ್ಪಣೆ ಕಾರ್ಯಕ್ರಮಕ್ಕೆ ಎಲ್ಲಾ ವಿದ್ಯಾರ್ಥಿಗಳು, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ಪೋಷಕರು, ಮಹಾಪೋಷಕರು, ಶಾಲೆಯ ಹಿತೈಷಿಗಳು ಹಾಗೂ ಸಾರ್ವಜನಿಕರು ಆಗಮಿಸುವಂತೆ ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ಆರ್. ವೆಂಕಟರಮಣ ಆಹ್ವಾನಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









