ಕಲ್ಪ ಮೀಡಿಯಾ ಹೌಸ್ | ಸೊರಬ (ಶಿವಮೊಗ್ಗ) | ವರದಿ: ಮಧು ರಾಮ್ |
ಸೊರಬ (Soraba) ಪಟ್ಟಣದ ಚಾಮರಾಜಪೇಟೆ ರಸ್ತೆಯಲ್ಲಿರುವ ಶ್ರೀ ಕಾನಕೇರಿಮಠದ ದ್ವಾದಶಮಾನೋತ್ಸವದ ಅಂಗವಾಗಿ ನ. 4ರಂದು ಧಾರ್ಮಿಕ ಹಾಗೂ ಗುರುವಂದನಾ (Guruvandana) ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷಗಳಿಂದ ಕಾನಕೇರಿಮಠವು ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಹಿಂದೆ ಪಾಳು ಬಿದ್ದಿದ್ದ ಮಠದ ಸ್ಥಳವನ್ನು ಸರ್ವ ಸಮಾಜದ ಜನರ ಸಹಕಾರದಿಂದ ಅಭಿವೃದ್ಧಿಪಡಿಸಲಾಗಿದೆ. ಮಠದ ಬೆಳವಣಿಗೆಯಲ್ಲಿ ಎಲ್ಲ ಸಮುದಾಯಗಳ ಸಹಭಾಗಿತ್ವವಿದ್ದು, ಸಮಾಜದ ಎಲ್ಲ ವರ್ಗದವರಿಗೂ ಮಠ ಮುಕ್ತವಾಗಿದೆ. ಧಾರ್ಮಿಕ ಚಿಂತನೆಯ ಜತೆಗೆ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡುವುದು ಮಠದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಬೆಳಗ್ಗೆ 5.30ರಿಂದ ಧಾರ್ಮಿಕ ಕಾರ್ಯಕ್ರಮ
ನ. 4ರಂದು ಬೆಳಿಗ್ಗೆ 5.30ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಜಡೆಯ ಮೌನಯೋಗಿ ಶಾಂತಲಿಂಗೇಶ್ವರ ಸ್ವಾಮೀಜಿ ಅವರಿಗೆ ಮಹಾಪೂಜೆ, ಗದ್ದುಗೆಗೆ ರುದ್ರಾಭಿಷೇಕ, ಶ್ರೀ ಚೌಡೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಷಟ್ಸ್ಥಲ ಧ್ವಜಾರೋಹಣ ನೆರವೇರಲಿದೆ.
Also Read>> ಆನಂದಪುರ ಸುತ್ತಮುತ್ತ ಕಾಡಾನೆಗಳ ಸಂಚಾರ: ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ
ಅದೇ ದಿನ ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಲಬುರಗಿ ಜಿಲ್ಲೆಯ ನಿಂಬಾಳ ಸಮಾಧಾನ ಕೇಂದ್ರದ ಮೌನಯೋಗಿ ಶಾಂತಲಿಂಗೇಶ್ವರ ಸ್ವಾಮೀಜಿ ಹಾಗೂ ಶಿವಮೊಗ್ಗದ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಗೊಗ್ಗೆಹಳ್ಳಿ ಪಂಚಮಠ ಸಂಸ್ಥಾನದ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಡೆ ಮಹಾಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ಕಾನಕೇರಿಮಠದ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಮೂಡಿ ವಿರಕ್ತಮಠದ ಸದಾಶಿವ ಸ್ವಾಮೀಜಿ ಹಾಗೂ ತೊಗರ್ಸಿ ಮಳೆ ಹಿರೇಮಠದ ಗುರುಬಸವ ಪಂಡಿತಾರಾಧ್ಯ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತರಿರುವರು.

Soraba: ಗಣ್ಯರ ಉಪಸ್ಥಿತಿ
ಸಂಸದ ಬಿ.ವೈ. ರಾಘವೇಂದ್ರ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ ಹಾಗೂ ಡಿ.ಎಸ್. ಅರುಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ರಚಿಸಿರುವ ‘ಅಮರತ್ವದೆಡೆಗೆ’ ಕೃತಿಯನ್ನು ಬಿಡುಗಡೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ದ್ವಾದಶಮಾನೋತ್ಸವ ಹಾಗೂ ಗುರುವಂದನಾ ಸಮಿತಿ ಅಧ್ಯಕ್ಷ ಎಂ. ರಾಜಶೇಖರ್ ಗೌಡ, ಪುರಸಭೆ ಮಾಜಿ ಅಧ್ಯಕ್ಷ ಮಧುರಾಜ್ ಜಿ. ಶೇಟ್, ಬಂದಗಿ ಬಸವರಾಜ್ ಶೇಟ್, ಮಂಜುನಾಥ್ ಹೊಸಕೊಪ್ಪ, ಉದ್ಯಮಿ ನಾಗರಾಜ್ ಗುತ್ತಿ, ಮಹಂತೇಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








