ಕಲ್ಪ ಮೀಡಿಯಾ ಹೌಸ್ | ಆನಂದಪುರ (ಶಿವಮೊಗ್ಗ) |
ಆನಂದಪುರ (Anandapura) ಸಮೀಪದ ಗೌತಮಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ (Wild Elephant) (ಒಂಟಿ ಸಲಗ) ಸಂಚಾರ ಕಂಡುಬಂದಿದ್ದು, ಗ್ರಾಮಸ್ಥರು ಮತ್ತು ರೈತರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಬೆಳ್ಳಂದೂರು ರಾಜ್ಯ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗೌತಮಪುರ, ಚನ್ನಾಪುರ ಹಾಗೂ ನಾಡವಳ್ಳಿ ಭಾಗಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ.
ಈ ಹಿನ್ನೆಲೆಯಲ್ಲಿ ಅಂಬ್ಲಿಗೋಳ ಅರಣ್ಯ ವಲಯದ ಅಧಿಕಾರಿಗಳು ಸುತ್ತಮುತ್ತಲಿನ ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಸದ್ಯ ಆನೆಗಳು ಪೀರನಕಣಿವೆ ದಾಟಿ ಬೆಳ್ಳಂದೂರು ಕಾಡಿನತ್ತ ತೆರಳಿದ್ದು, ಅರಣ್ಯ ಸಿಬ್ಬಂದಿ ನಿರಂತರ ಪಹರೆ ನಡೆಸುತ್ತಿದ್ದಾರೆ. ಪ್ರತೀ ವರ್ಷದಂತೆ ಈ ಬಾರಿಯೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಇಲಾಖೆ ಮನವಿ ಮಾಡಿದೆ. ಭದ್ರಾ ಅಭಯಾರಣ್ಯದಿಂದ ಇನ್ನಷ್ಟು ಆನೆಗಳ ಹಿಂಡು ಬರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
Anandapura: ಹಲವು ಗ್ರಾಮಗಳತ್ತ ಆನೆ ಸಂಚರಿಸುವ ಸಾಧ್ಯತೆ
ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ, ಕಾಡಾನೆಗಳು ಮುಂದಿನ ದಿನಗಳಲ್ಲಿ ನಾಡವಳ್ಳಿ, ಚನ್ನಾಪುರ, ಕುಡಿಗೇರಿ ಮತ್ತು ಬೆಳ್ಳಂದೂರು ಮಾರ್ಗವಾಗಿ ಲಾವಿಗೇರಿ ಹಾಗೂ ಹುಲಿಯಪ್ಪನ ಕಣಿವೆಯತ್ತ ಸಾಗುವ ಸಾಧ್ಯತೆಯಿದೆ. ಹೀಗಾಗಿ ಈ ಮಾರ್ಗಗಳ ಸುತ್ತಮುತ್ತ ವಾಸಿಸುವ ಗ್ರಾಮಸ್ಥರು ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ತಿಳಿಸಲಾಗಿದೆ.
Also Read>> ಶಿವಮೊಗ್ಗದ ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಭರ್ಜರಿ ಯಶಸ್ಸು: ರಾಷ್ಟ್ರಮಟ್ಟಕ್ಕೆ ಆಯ್ಕೆ
ಅರಣ್ಯ ಸಿಬ್ಬಂದಿಯಿಂದ ನಿರಂತರ ಪಹರೆ
ಕಾಡಾನೆಗಳ ಚಲನವಲನದ ಮೇಲೆ ನಿಗಾ ಇರಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ನಿರಂತರ ಪಹರೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಆನೆಗಳ ಚಲನವಲನ ಅಥವಾ ಹೆಜ್ಜೆ ಗುರುತುಗಳನ್ನು ಗಮನಿಸಿದರೆ ತಕ್ಷಣವೇ ಸಂಬಂಧಪಟ್ಟ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಹಾಗೂ ಆನೆಗಳು ಕಂಡುಬಂದಲ್ಲಿ ಅವುಗಳ ಸಮೀಪಕ್ಕೆ ತೆರಳದೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಅರಣ್ಯ ಇಲಾಖೆ ಸೂಚಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










