ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಕೇವಲ ಭಾರತಕ್ಕೆ ಸೀಮಿತವಾದ ಆದಿಕಾವ್ಯವಲ್ಲ, ಅದು ಇಡೀ ಜಗತ್ತಿಗೇ ಆದರ್ಶಪ್ರಾಯವಾದ ಮಹಾಕಾವ್ಯವಾಗಿದೆ. ಕೌಟುಂಬಿಕ ಮೌಲ್ಯಗಳು ಹಾಗೂ ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಪ್ರತಿಬಿಂಬಿಸಿರುವ ಈ ಕೃತಿ ಸಾರ್ವಕಾಲಿಕ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ (Kuvempu University) ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಘಟಕದ ವತಿಯಿಂದ ಜ್ಞಾನಸಹ್ಯಾದ್ರಿಯ ಪ್ರೊ. ಹಿರೇಮಠ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ (Maharshi Valmiki Jayanti) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನ ಹಲವು ದೇಶಗಳಲ್ಲಿ ರಾಮಾಯಣದ ಪ್ರಭಾವ
ರಾಮಾಯಣ ನಮ್ಮ ನೆಲದ ಮೊದಲ ಮಹಾಕಾವ್ಯವೆಂದು ಪರಿಗಣಿಸಲಾಗಿದೆ. ಆದರೆ ಇದರ ಪ್ರಭಾವ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂಡೋನೇಷ್ಯಾ, ಥಾಯ್ಲೆಂಡ್, ಕಾಂಬೋಡಿಯಾ, ಮಲೇಷ್ಯಾ, ನೇಪಾಳ ಹಾಗೂ ಶ್ರೀಲಂಕಾ ಸೇರಿದಂತೆ ಹಲವು ದೇಶಗಳಲ್ಲಿ ರಾಮಾಯಣ ಜನಪ್ರಿಯವಾಗಿದೆ. ಅಲ್ಲದೆ, ಭಾರತೀಯ ಸಂಜಾತರು ನೆಲೆಸಿರುವ ಜಗತ್ತಿನ ವಿವಿಧ ದೇಶಗಳಲ್ಲಿಯೂ ಈ ಮಹಾಕಾವ್ಯ ತನ್ನದೇ ಆದ ಪ್ರಭಾವ ಹೊಂದಿದೆ ಎಂದರು.
ವಿದ್ವಾಂಸ ಎ.ಕೆ. ರಾಮಾನುಜನ್ ಅವರು ತಮ್ಮ ಪ್ರಬಂಧವೊಂದರಲ್ಲಿ ರಾಮಾಯಣದ ವಿವಿಧ ಆವೃತ್ತಿಗಳು ಹಾಗೂ ಅವುಗಳಲ್ಲಿನ ಸಾರ್ವತ್ರಿಕ ಮೌಲ್ಯಗಳನ್ನು ಪಾತ್ರಗಳ ಮೂಲಕ ವಿಶ್ಲೇಷಿಸಿದ್ದಾರೆ. ಈ ವಿಶ್ಲೇಷಣೆ ರಾಮಾಯಣವು ಎಲ್ಲ ಕಾಲಕ್ಕೂ ಪ್ರಸ್ತುತವಾಗಿರುವ ಮಹತ್ವದ ಕೃತಿ ಎಂಬುದನ್ನು ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.
Also Read>> ಈಜು ಸ್ಪರ್ಧೆಯಲ್ಲಿ ಕ್ರಿಯೇಟಿವ್ ಗ್ಲೋಬಲ್ ಶಾಲೆಯ ವಿದ್ಯಾರ್ಥಿನಿಯರ ಮಿಂಚಿನ ಸಾಧನೆ
ಮಾನವೀಯ ಮೌಲ್ಯಗಳ ಪ್ರತಿಪಾದಕ ಮಹಾಕವಿ ವಾಲ್ಮೀಕಿ
ಮಹರ್ಷಿ ವಾಲ್ಮೀಕಿ ತಮ್ಮ ಕಾವ್ಯದ ಮೂಲಕ ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ ಸೇರಿದಂತೆ ಹಲವು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ರಾಮಾಯಣದ ಪಾತ್ರಗಳು ಮತ್ತು ಸನ್ನಿವೇಶಗಳ ಮೂಲಕ ಸಮಾಜಕ್ಕೆ ಅಗತ್ಯವಾದ ಆದರ್ಶಗಳನ್ನು ಸಾರಿದ್ದಾರೆ. ಇಂತಹ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಸಮಕಾಲೀನ ಸಮಾಜಕ್ಕೂ ಆದರ್ಶಪ್ರಾಯರಾದ ಮಹಾಕವಿಯಾಗಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಭಾರತಿಯ ಪ್ರಾಧ್ಯಾಪಕ ಪ್ರೊ. ಜಿ. ಪ್ರಶಾಂತ್ ನಾಯಕ್ ಮಾತನಾಡಿದರು.
ಪರೀಕ್ಷಾಂಗ ಕುಲಸಚಿವ ಪ್ರೊ. ತಿಮ್ಮರಾಯಪ್ಪ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಘಟಕದ ಸಂಚಾಲಕ ಪ್ರೊ. ದೇವಿದಾಸ್ ಜಿ.ಬಿ., ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










