ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾರ್ವಜನಿಕರಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಶಿವಮೊಗ್ಗದ (Shivamogga) ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹೊಸ ಮಾದರಿಯ ಆಧಾರ್ ಸೇವಾ ಕೇಂದ್ರವನ್ನು (Aadhaar Service Centre) ಆರಂಭಿಸಲಾಗಿದೆ. ಸಾರ್ವಜನಿಕರು ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ ಕರೆ ನೀಡಿದರು.
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ವತಿಯಿಂದ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ಸ್ಥಾಪಿಸಿರುವ ಹೊಸ ಆಧಾರ್ ಸೇವಾ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿಳಂಬವಿಲ್ಲದೆ ಸೇವೆ ಒದಗಿಸಲು ಸೂಚನೆ
ಸಾರ್ವಜನಿಕರು ಆಧಾರ್ ಕಾರ್ಡ್ಗೆ ಸಂಬಂಧಿಸಿದ ಅಗತ್ಯ ಸೇವೆಗಳನ್ನು ಈ ಕೇಂದ್ರದಲ್ಲಿ ಪಡೆದುಕೊಳ್ಳಬಹುದು. ಆಧಾರ್ ಸೇವೆಗಳನ್ನು ಜನಸ್ನೇಹಿಯಾಗಿ ಒದಗಿಸುವ ಮೂಲಕ ಸಾರ್ವಜನಿಕರ ಸಮಯ ಉಳಿತಾಯವಾಗಬೇಕು. ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇವೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಡಾ. ಮೈತ್ರಿ ಸೂಚಿಸಿದರು.
Also Read>> ಹಾಸನ: ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಿದ ರೈಲ್ವೆ ರಕ್ಷಣಾ ಪಡೆ
Shivamogga: ನಗರದ ಹೆಚ್ಚುತ್ತಿರುವ ಬೇಡಿಕೆಗೆ ಹೊಸ ಕೇಂದ್ರ ನೆರವು
ಶಿವಮೊಗ್ಗ ನಗರದಲ್ಲಿ ಜನಸಂಖ್ಯೆಯ ಸಾಂದ್ರತೆ ಹೆಚ್ಚುತ್ತಿರುವುದರ ಜೊತೆಗೆ ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕಾ ಕ್ಲಸ್ಟರ್ಗಳ ಬೆಳವಣಿಗೆಯಿಂದಾಗಿ ಆಧಾರ್ ನೋಂದಣಿ ಹಾಗೂ ನವೀಕರಣ ಸೇವೆಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಹೊಸ ಆಧಾರ್ ಸೇವಾ ಕೇಂದ್ರ ಆರಂಭಿಸಿರುವುದು ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಸುಲಭವಾಗಿ ಪಡೆಯಲು ನೆರವಾಗಲಿದೆ. ಅಲ್ಲದೆ, ನಗರದ ಇತರ ಆಧಾರ್ ಕೇಂದ್ರಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುಐಡಿಎಐ ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪನಿರ್ದೇಶಕಿ ಪ್ರಿಯಾ ಶ್ರೀಕುಮಾರ್, ಪ್ರಾಜೆಕ್ಟ್ ಮ್ಯಾನೇಜರ್ ರಿಕೇಶ್ ಕುಮಾರ್, ಸಹಾಯಕ ವ್ಯವಸ್ಥಾಪಕ ಪ್ರಸಾದ್ ಬಾಬು, ಬಿಎಲ್ಎಸ್ ಇಂಟರ್ನ್ಯಾಷನಲ್ ಕ್ಲಸ್ಟರ್ ಮ್ಯಾನೇಜರ್ ಶ್ಯಾಮ್ ಸುಂದರ್ ಹಾಗೂ ಆಧಾರ್ ಜಿಲ್ಲಾ ಸಂಯೋಜಕ ಸತೀಶ್ಚಂದ್ರ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











