ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ (Shivamogga) ನಗರದಲ್ಲಿ ತಾಜಾ ಹಾಗೂ ಗುಣಮಟ್ಟದ ಹಣ್ಣುಗಳನ್ನು ಗ್ರಾಹಕರಿಗೆ ಒಂದೇ ಸ್ಥಳದಲ್ಲಿ ಒದಗಿಸುವ ಉದ್ದೇಶದಿಂದ ಹಾಪ್ಕಾಮ್ಸ್ (Hopcoms) ವತಿಯಿಂದ ನೂತನ ಹಣ್ಣು ಮತ್ತು ಜ್ಯೂಸ್ ಮಾರಾಟ ಮಳಿಗೆಯನ್ನು ಆರಂಭಿಸಲಾಗಿದೆ.
ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಹಾಪ್ಕಾಮ್ಸ್ ಕಚೇರಿಯ ಕೆಳಭಾಗದಲ್ಲಿ ಆರಂಭಗೊಂಡಿರುವ ಈ ಮಳಿಗೆಗೆ ಹಲವು ಗಣ್ಯರು, ಶಾಸಕರು ಹಾಗೂ ಹಾಪ್ಕಾಮ್ಸ್ ಪದಾಧಿಕಾರಿಗಳು ಭೇಟಿ ನೀಡಿ ಶುಭಾಶಯ ಕೋರಿದರು.
ರೈತರ ಉತ್ಪನ್ನಗಳ ಮಾರಾಟಕ್ಕೆ ಆದ್ಯತೆ
ನೂತನ ಮಳಿಗೆ ಕುರಿತು ಮಾತನಾಡಿದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ. ಧನಂಜಯ, ಶಿವಮೊಗ್ಗದಲ್ಲಿ ಈ ರೀತಿಯ ಮಳಿಗೆಗಳು ಆರಂಭವಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಉತ್ಪಾದನೆಯಾಗುವ ಹಣ್ಣುಗಳನ್ನು ಹಾಪ್ಕಾಮ್ಸ್ ಮೂಲಕ ಮಾರಾಟ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಹಾಪ್ಕಾಮ್ಸ್ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ರೈತರಿಂದ ನೇರ ಖರೀದಿ, ಗ್ರಾಹಕರಿಗೆ ತಾಜಾ ಹಣ್ಣು
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಋತುಮಾನಕ್ಕೆ ಅನುಗುಣವಾಗಿ ಲಭ್ಯವಾಗುವ ವಿವಿಧ ಬಗೆಯ ದೇಶಿ ಮತ್ತು ವಿದೇಶಿ ಹಣ್ಣುಗಳನ್ನು ಒಂದೇ ಸೂರಿನಡಿ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಈ ಮಳಿಗೆಯನ್ನು ಸ್ಥಾಪಿಸಲಾಗಿದೆ. ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸುವುದರಿಂದ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಸಿಗುವುದರ ಜೊತೆಗೆ ಗ್ರಾಹಕರಿಗೂ ತಾಜಾ ಹಣ್ಣುಗಳು ಲಭ್ಯವಾಗಲಿವೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಹಾಪ್ಕಾಮ್ಸ್ನ ಈ ಪ್ರಯತ್ನ ಉತ್ತಮ ಬೆಳವಣಿಗೆಯಾಗಿದೆ. ಇಂತಹ ಜನಪರ ಪ್ರಯತ್ನಗಳು ಇನ್ನಷ್ಟು ಹೆಚ್ಚಾಗಬೇಕು. ತಾಜಾ ಹಾಗೂ ಗುಣಮಟ್ಟದ ಹಣ್ಣುಗಳ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶುಭ ಹಾರೈಸಿದರು.
ದೇಶಿ-ವಿದೇಶಿ ಹಣ್ಣುಗಳ ವೈವಿಧ್ಯಮಯ ಸಂಗ್ರಹ
ಹಾಪ್ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ (ದನಿ) ಮಾತನಾಡಿ, ಮಾರುಕಟ್ಟೆಯಲ್ಲಿ ಆಯಾ ಋತುಮಾನಕ್ಕೆ ಅನುಗುಣವಾಗಿ ಲಭ್ಯವಾಗುವ ಎಲ್ಲ ಬಗೆಯ ಹಣ್ಣುಗಳನ್ನು ಮಳಿಗೆಯಲ್ಲಿ ಇರಿಸಲು ಉದ್ದೇಶಿಸಲಾಗಿದೆ. ಗ್ರಾಹಕರಿಗೆ ವಿವಿಧ ಬಗೆಯ ಹಣ್ಣುಗಳನ್ನು ಒಂದೇ ಸ್ಥಳದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಲಿಚ್ಚಿ, ರಾಂಬುಟಾನ್, ಲಾಂಗನ್, ಆಸ್ಟ್ರೇಲಿಯನ್ ದ್ರಾಕ್ಷಿ, ಸ್ಟಾರ್ ಫ್ರೂಟ್, ಡ್ರ್ಯಾಗನ್ ಫ್ರೂಟ್, ಚೆರ್ರಿ, ಮ್ಯಾಂಡರಿನ್, ಕಿವಿ, ಸೀಡ್ಲೆಸ್ ದ್ರಾಕ್ಷಿ, ನೇರಳೆ, ಬ್ಲೂಬೆರ್ರಿ ಹಾಗೂ ಸ್ಟ್ರಾಬೆರಿ ಸೇರಿದಂತೆ ಹಲವು ಬಗೆಯ ದೇಶಿ ಮತ್ತು ವಿದೇಶಿ ಹಣ್ಣುಗಳು ಮಳಿಗೆಯಲ್ಲಿ ಲಭ್ಯವಿರಲಿವೆ. ಇದರ ಜೊತೆಗೆ ತಾಜಾ ಹಣ್ಣಿನ ಜ್ಯೂಸ್ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳನ್ನು ಒಂದೇ ಸೂರಿನಡಿ ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
Also Read>> ಷೇರುಪೇಟೆಯಲ್ಲಿ ದೀಪಾವಳಿ ಧಮಾಕಾ: 1,718 ಅಂಕ ಏರಿದ ಸೆನ್ಸೆಕ್ಸ್, 25 ಸಾವಿರ ದಾಟಿದ ನಿಫ್ಟಿ!
Shivamogga: ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಹಣ್ಣುಗಳು
ಮಳಿಗೆಯ ನಿರ್ವಹಣೆಯ ಹೊಣೆ ಹೊತ್ತಿರುವ ಪ್ರಗತಿಪರ ಕೃಷಿಕ ಕೆ. ನಾಗರಾಜ್ ಮಾತನಾಡಿ, ನೂತನ ಮಳಿಗೆ ಇಂದಿನಿಂದ ಕಾರ್ಯಾರಂಭ ಮಾಡಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ದೇಶಿ ಹಣ್ಣುಗಳ ಜೊತೆಗೆ ವಿದೇಶಿ ಹಣ್ಣುಗಳನ್ನೂ ಕೈಗೆಟುಕುವ ಬೆಲೆಯಲ್ಲಿ ಇಲ್ಲಿ ಒದಗಿಸಲಾಗುವುದು. ಮುಖ್ಯವಾಗಿ ರಾಸಾಯನಿಕ ಬಳಕೆ ಮಾಡದೆ ಸಾವಯವ ಗೊಬ್ಬರದಿಂದ ಬೆಳೆದ ಹಣ್ಣುಗಳಿಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಪ್ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಅಕ್ಷಯ್, ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಶಶಾಂಕ್, ನಿರ್ದೇಶಕರಾದ ಶರತ್ ಮರಿಯಪ್ಪ, ನಾಗೇಶ್ ನಾಯ್ಕ್, ನಾಗರಾಜ್, ಕಾಂತರಾಜ್, ಮೋಹನ್ ಗೌಡ, ಉಂಬ್ಳೆಬೈಲು ಮೋಹನ್, ಚಂದ್ರೇಗೌಡ, ಅರುಣ ನಾಯ್ಡು, ನಾಗರಾಜಪ್ಪ, ಹರ್ಷ ಬೆಳ್ಳೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










