ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿ (Bhadravathi) ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಶ್ರೇಯಾ ಎನ್. ಗೌಡ ಅವರು ಯುಪಿಎಸ್ಸಿ ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆಯಲ್ಲಿ (NDA Exam) ಮಹಿಳಾ ವಿಭಾಗದಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಬಾಲ್ಯದಿಂದಲೂ ಸೈನಿಕಳಾಗಬೇಕೆಂಬ ಕನಸು ಹೊಂದಿದ್ದ ಶ್ರೇಯಾ, ತಮ್ಮ ಮೊದಲ ಪ್ರಯತ್ನದಲ್ಲೇ ಈ ಮಹತ್ವದ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು, ಶಿಕ್ಷಕರು ಹಾಗೂ ಗ್ರಾಮಸ್ಥರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
Bhadravathi : ಬಿಜಿಎಸ್ನಲ್ಲಿ ಶಾಲಾ ಶಿಕ್ಷಣ, ಬೆಂಗಳೂರಿನಲ್ಲಿ ಪಿಯುಸಿ
ಶ್ರೇಯಾ ಅವರು ಒಂದರಿಂದ ಹತ್ತನೇ ತರಗತಿವರೆಗೆ ಭದ್ರಾವತಿಯ ಬಿಜಿಎಸ್ ಕಾರೇಹಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಬಳಿಕ ಬೆಂಗಳೂರಿನ ರಾಜಾಜಿನಗರದಲ್ಲಿರುವ ಬೇಸ್ ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಮಂಗಳೂರಿನ ಸುರತ್ಕಲ್ನ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ಎಂಟನೇ ತರಗತಿಯಲ್ಲೇ ಸೇನೆ ಸೇರುವ ಕನಸು
ಶ್ರೇಯಾ ಅವರಿಗೆ ಬಾಲ್ಯದಿಂದಲೂ ದೇಶದ ರಕ್ಷಣಾ ಪಡೆಗೆ ಸೇರುವ ಆಸಕ್ತಿ ಇತ್ತು. ಎಂಟನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಮಹಿಳೆಯರಿಗೂ ಪ್ರವೇಶಾವಕಾಶ ಕಲ್ಪಿಸಿರುವ ವಿಚಾರ ತಿಳಿದಿತ್ತು. ಇದು ಅವರ ಸೈನ್ಯ ಸೇರುವ ಕನಸಿಗೆ ಮತ್ತಷ್ಟು ಪ್ರೇರಣೆ ನೀಡಿತ್ತು.
ಅಂದಿನಿಂದಲೇ ಎನ್ಡಿಎ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುವ ಗುರಿ ಹೊಂದಿದ್ದ ಅವರು, ಸತತ ಪ್ರಯತ್ನ ಮತ್ತು ಪರಿಶ್ರಮದ ಮೂಲಕ ಮೊದಲ ಅವಕಾಶದಲ್ಲೇ ಮಹಿಳಾ ವಿಭಾಗದಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
Also Read>> ಮೋದಿ ಭೇಟಿಯಾದ ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್: ಕನ್ನಡ ಹಾಡು ಹಾಡಿದ ಸರುಯು!
ಮಗಳ ಕನಸಿಗೆ ಬೆನ್ನೆಲುಬಾಗಿ ನಿಂತ ಪೋಷಕರು
ಶ್ರೇಯಾ ಅವರ ತಂದೆ ನಾಗೇಂದ್ರ ಜೆ. ಅವರು ವಿಐಎಸ್ಎಲ್ ಕಾರ್ಖಾನೆಯಲ್ಲಿ ನೌಕರರಾಗಿದ್ದು, ತಾಯಿ ಡಾ. ಆಶಾ ಬಿ.ಎಂ. ಅವರು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಗಳು ಸೇನೆಗೆ ಸೇರಬೇಕೆಂಬ ಆಸೆ ವ್ಯಕ್ತಪಡಿಸಿದಾಗ ಪೋಷಕರು ಯಾವುದೇ ಅಡ್ಡಿಪಡಿಸದೆ ಸಂಪೂರ್ಣ ಪ್ರೋತ್ಸಾಹ ನೀಡಿದ್ದರು. ಪೋಷಕರ ಬೆಂಬಲ, ಶ್ರೇಯಾ ಅವರ ಪರಿಶ್ರಮ ಹಾಗೂ ಸಾಧಿಸುವ ಛಲ ಇಂದು ಅವರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.
ಭದ್ರಾವತಿಯ ಗ್ರಾಮೀಣ ಭಾಗದಿಂದ ಬಂದ ಶ್ರೇಯಾ ಗೌಡ ಅವರ ಈ ಸಾಧನೆ ಜಿಲ್ಲೆಯ ಯುವಜನತೆಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದೆ. ದೇಶಸೇವೆಯ ಕನಸು ಹೊತ್ತಿರುವ ಶ್ರೇಯಾ ಅವರ ಮುಂದಿನ ಪಯಣಕ್ಕೆ ಎಲ್ಲೆಡೆಯಿಂದ ಶುಭಾಶಯಗಳು ವ್ಯಕ್ತವಾಗುತ್ತಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








