ಕಲ್ಪ ಮೀಡಿಯಾ ಹೌಸ್ | ಮೈಸೂರು |
ವಿಶ್ವವಿಖ್ಯಾತ ಮೈಸೂರು (Mysuru) ಅರಮನೆಯ ಮುಂಭಾಗದಲ್ಲಿ ಶಾಲಾ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಸಾಮೂಹಿಕವಾಗಿ ವಂದೇ ಮಾತರಂ ಗೀತೆಯನ್ನು (Vande Mataram Day) ಭಾವಪೂರ್ಣವಾಗಿ ಹಾಡುತ್ತಿದ್ದಂತೆ ಇಡೀ ಪರಿಸರ ದೇಶಭಕ್ತಿಯ ಸಂಭ್ರಮದಲ್ಲಿ ಮಿಂದೆದ್ದಿತು. ವಿದ್ಯಾರ್ಥಿಗಳ ಮಧುರ ಗಾಯನಕ್ಕೆ ಪ್ರವಾಸಿಗರು ಹಾಗೂ ಸ್ಥಳೀಯರು ಧ್ವನಿಗೂಡಿಸಿ ಗೌರವ ಸಲ್ಲಿಸಿದರು.
ನಗರದ ಪೂರ್ಣಚೇತನ–21ನೇ ಶತಮಾನದ ಭಾರತೀಯ ಶಾಲೆಯ 16 ವಿದ್ಯಾರ್ಥಿಗಳು ನವೆಂಬರ್ 7ರಂದು ವಂದೇ ಮಾತರಂ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.
Mysuru: ಪ್ರಮುಖ ಸ್ಥಳಗಳಲ್ಲಿ ದೇಶಭಕ್ತಿ ಗೀತೆಯ ಗಾಯನ
ಮೈಸೂರು ಅರಮನೆಯಿಂದ ಆರಂಭವಾದ ವಿದ್ಯಾರ್ಥಿಗಳ ಗಾಯನ ಕಾರ್ಯಕ್ರಮ ಚಾಮುಂಡಿ ಬೆಟ್ಟದ ಮೇಲಿರುವ ಐತಿಹಾಸಿಕ ನಂದಿ ವಿಗ್ರಹದವರೆಗೂ ಮುಂದುವರಿಯಿತು. ನಂದಿ ವಿಗ್ರಹದ ಬಳಿ ವಿದ್ಯಾರ್ಥಿಗಳು ವಂದೇ ಮಾತರಂ ಗೀತೆಯನ್ನು ಹಾಡಿದಾಗ ಅಲ್ಲಿದ್ದ ಪ್ರವಾಸಿಗರು ಹಾಗೂ ಸಾರ್ವಜನಿಕರು ಎದ್ದು ನಿಂತು ಗೌರವ ಸಲ್ಲಿಸಿದರು.
ನಂತರ ಪ್ರಶಾಂತ ವಾತಾವರಣದ ಕುಕ್ಕರಹಳ್ಳಿ ಕೆರೆಯಲ್ಲಿಯೂ ವಿದ್ಯಾರ್ಥಿಗಳು ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡುವ ಮೂಲಕ ಗೀತೆಯ ಮಹತ್ವ ಮತ್ತು ದೇಶಭಕ್ತಿಯ ಸಂದೇಶವನ್ನು ಸಾರಿದರು.
ಬಂಕಿಮ್ ಚಂದ್ರ ಚಟರ್ಜಿ ಅವರಿಗೆ ಗೌರವ
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ ವಂದೇ ಮಾತರಂ ಗೀತೆಯ ಶ್ರೇಷ್ಠತೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರತ ಮಾತೆ, ವಂದೇ ಮಾತರಂ ಗೀತೆ ಹಾಗೂ ಅದರ ಕವಿ ಬಂಕಿಮ್ ಚಂದ್ರ ಚಟರ್ಜಿ ಅವರಿಗೆ ಗೌರವ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳು ವಂದೇ ಮಾತರಂ ದಿವಸ್ ಆಚರಿಸಿದರು.
ಬೆಳಗಿನ ವಾಯುವಿಹಾರಕ್ಕೆ ಬಂದವರು, ಪ್ರವಾಸಿಗರು ಹಾಗೂ ಸಾರ್ವಜನಿಕರು ಮಕ್ಕಳ ಗಾಯನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
Also Read>> NDA ಪರೀಕ್ಷೆಯಲ್ಲಿ ದೇಶಕ್ಕೆ ಫಸ್ಟ್: ಭದ್ರಾವತಿಯ ಶ್ರೇಯಾಗೆ ಸಂಸದ BYR, ಸಚಿವ ಜೋಶಿ ಅಭಿನಂದನೆ
ಮುಂದಿನ ಪೀಳಿಗೆಗೆ ದೇಶಭಕ್ತಿಯ ಸ್ಫೂರ್ತಿ
ಶಾಲೆಯ ಸಿಇಒ ದರ್ಶನ್ ರಾಜ್, ಸಿಎಒ ಮಾಧುರ್ಯ ರಾಮಸ್ವಾಮಿ ಹಾಗೂ ಹಿರಿಯ ಶಿಕ್ಷಕಿ ರಮ್ಯಾ ಅವರು ವಿದ್ಯಾರ್ಥಿಗಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಒ ಮಾಧುರ್ಯ ರಾಮಸ್ವಾಮಿ, ಮುಂದಿನ ಪೀಳಿಗೆಗೆ ವಂದೇ ಮಾತರಂ ಗೀತೆಯ ಆಶಯವನ್ನು ಅರ್ಥಮಾಡಿಕೊಳ್ಳಲು, ಗೌರವಿಸಲು ಹಾಗೂ ಅದರ ಸ್ಫೂರ್ತಿಯನ್ನು ಮುಂದುವರಿಸಿಕೊಂಡು ಹೋಗಲು ಪ್ರೇರಣೆ ನೀಡುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡುವ ಮೂಲಕ ವಿಭಿನ್ನ ರೀತಿಯಲ್ಲಿ ವಂದೇ ಮಾತರಂ ದಿನಾಚರಣೆ ಆಚರಿಸಿದ್ದು ವಿಶೇಷವಾಗಿತ್ತು.
ಪೂರ್ಣ ಚೇತನ ಯೂಟ್ಯೂಬ್ ಚಾನೆಲ್ನಲ್ಲಿ ಸಂಪೂರ್ಣ ವೀಡಿಯೊವನ್ನು ವೀಕ್ಷಿಸಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










