ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಖಿಲ ಕರ್ನಾಟಕ ಬಬ್ಬೂರುಕಮ್ಮೆ ಬ್ರಾಹ್ಮಣ ಮಹಾಸಮ್ಮೇಳನವನ್ನು (Brahmin Mahasammelena) ಜ. 23 ಮತ್ತು 24ರಂದು ಶಿವಮೊಗ್ಗ (Shivamogga) ನಗರದ ಬಿ.ಎಚ್. ರಸ್ತೆಯ ಶ್ರೀ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಲಾಗಿದೆ. ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಮಹಾಸಮ್ಮೇಳನ ನಡೆಯುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ 4 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಬಬ್ಬೂರುಕಮ್ಮೆ ಸೇವಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಾ. ಎ.ವಿ. ಪ್ರಸನ್ನ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯುವ ಮಹಾಸಮ್ಮೇಳನದಲ್ಲಿ ಸಮುದಾಯದ ಇತಿಹಾಸ, ಪರಂಪರೆ, ಧಾರ್ಮಿಕ ಆಚರಣೆಗಳು ಹಾಗೂ ಪ್ರಸ್ತುತ ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
Shivamogga: ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಿತಿಯಿಂದ ಆದ್ಯತೆ
1934ರಲ್ಲಿ ನೋಂದಣಿಯಾದ ಬಬ್ಬೂರುಕಮ್ಮೆ ಸೇವಾ ಸಮಿತಿಯು ಹಲವು ದಶಕಗಳಿಂದ ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸುವುದಕ್ಕೆ ಸಮಿತಿ ಹೆಚ್ಚಿನ ಆದ್ಯತೆ ನೀಡುತ್ತಿದೆ.
ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಿಸಲಾಗಿದ್ದು, ಪ್ರಸ್ತುತ 40 ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿನಿಯರಿಗೂ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿದೆ. ಆರ್ಥಿಕ ಸಮಸ್ಯೆಯಿಂದಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ ಪಿಂಚಣಿ
ಸಮಿತಿಯು ಶಿಕ್ಷಣದ ಜೊತೆಗೆ ಸಮಾಜದ ಅಶಕ್ತ ವರ್ಗಗಳ ನೆರವಿಗೂ ಮುಂದಾಗಿದೆ. ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ ಪ್ರತಿ ತಿಂಗಳು ₹3 ಸಾವಿರ ಪಿಂಚಣಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ₹80 ಸಾವಿರದಿಂದ ₹1.50 ಲಕ್ಷದವರೆಗೆ ಶೈಕ್ಷಣಿಕ ನೆರವು ಹಾಗೂ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.
ಅಲ್ಲದೆ, ಚಿಕಿತ್ಸೆಯ ನಂತರ ವೈದ್ಯಕೀಯ ವೆಚ್ಚ ಭರಿಸಲು ಆರ್ಥಿಕವಾಗಿ ಹಿಂದುಳಿದ ಅರ್ಹ ಫಲಾನುಭವಿಗಳಿಗೆ ₹50 ಸಾವಿರದವರೆಗೆ ನೆರವು ನೀಡಲಾಗುತ್ತಿದೆ. ಈ ಮೂಲಕ ಸಮುದಾಯದ ಜನರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯ ಸಂಬಂಧಿತ ಅಗತ್ಯಗಳಿಗೆ ಸ್ಪಂದಿಸಲಾಗುತ್ತಿದೆ ಎಂದು ಡಾ. ಎ.ವಿ. ಪ್ರಸನ್ನ ಹೇಳಿದರು.
ಸಮುದಾಯದ ಇತಿಹಾಸ, ಪರಂಪರೆ ಕುರಿತು ಚರ್ಚೆ
ಮಹಾಸಮ್ಮೇಳನವು ಕೇವಲ ಸಮುದಾಯದ ಜನರ ಸಮಾಗಮಕ್ಕೆ ಸೀಮಿತವಾಗದೆ, ಬಬ್ಬೂರುಕಮ್ಮೆ ಸಮುದಾಯದ ಇತಿಹಾಸ, ಪರಂಪರೆ, ಸಂಸ್ಕೃತಿ ಹಾಗೂ ಭವಿಷ್ಯದ ಅಭಿವೃದ್ಧಿಯ ಕುರಿತು ಚಿಂತನೆ ನಡೆಸುವ ವೇದಿಕೆಯಾಗಲಿದೆ. ಸಮುದಾಯದ ಸಂಘಟನೆ ಬಲಪಡಿಸುವುದು, ಯುವಜನರಿಗೆ ಪರಂಪರೆಯ ಪರಿಚಯ ಮಾಡಿಸುವುದು ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಚಾರಗೋಷ್ಠಿಗಳು ನಡೆಯಲಿವೆ.
Also Read>> ಶಿವಮೊಗ್ಗ | ಹಾಲು, ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಕರವೇ ಸಿಂಹಸೇನೆಯಿಂದ ಪ್ರತಿಭಟನೆ
ಇದೇ ಸಂದರ್ಭದಲ್ಲಿ ಬಬ್ಬೂರುಕಮ್ಮೆ ಸೇವಾ ಸಮಿತಿಯ ಶತಮಾನೋತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಎಂ.ಎಚ್. ವಿದ್ಯಾಶಂಕರ್, ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಎಸ್. ನಂಜುಂಡಯ್ಯ, ಪ್ರಧಾನ ಸಂಚಾಲಕ ಮಾ.ಸಾ. ನಂಜುಂಡಸ್ವಾಮಿ, ಎಚ್.ಎಂ. ಪ್ರಕಾಶ್ ಭಟ್, ರಮೇಶ್, ನಾಗೇಶ್, ಶಾಲಿನಿ ಹಾಗೂ ಶ್ರೀವತ್ಸ ಕಶ್ಯಪ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









