ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉಡಾನ್ ಯೋಜನೆಯಡಿ ದೊರೆಯುತ್ತಿದ್ದ ಸಹಾಯಧನ ಸ್ಥಗಿತಗೊಂಡ ಬೆನ್ನಲ್ಲೇ ಶಿವಮೊಗ್ಗ (Shivamogga) ವಿಮಾನ ನಿಲ್ದಾಣದಿಂದ ಹಲವು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ (Flight service suspended). ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಭವಿಷ್ಯದ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ, ಶಿವಮೊಗ್ಗದಲ್ಲಿ ವಿಮಾನಗಳ ಹ್ಯಾಂಗರ್ ಹಾಗೂ ಸರ್ವಿಸ್ ಸೆಂಟರ್ ಸ್ಥಾಪಿಸುವ ಕುರಿತು ಬೋಯಿಂಗ್ ಕಂಪನಿಯೊಂದಿಗೆ ಚರ್ಚೆ ನಡೆಸಿರುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ಭವಿಷ್ಯದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಸಿಎಸ್ಆರ್ ಸಭೆಯಲ್ಲಿ ಬೋಯಿಂಗ್ ಕಂಪನಿಯ ಪ್ರತಿನಿಧಿಗಳೊಂದಿಗೆ ಈ ವಿಚಾರವಾಗಿ ಚರ್ಚೆ ನಡೆಸಿದ್ದೇನೆ. ಇದು ಪ್ರಾಥಮಿಕ ಹಂತದ ಸಾಮಾನ್ಯ ಚರ್ಚೆಯಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿ ವಿಮಾನಗಳ ಹ್ಯಾಂಗರ್ ಹಾಗೂ ಸರ್ವಿಸ್ ಸೆಂಟರ್ಗಳನ್ನು ನಿರ್ವಹಿಸಲು ಹೆಚ್ಚಿನ ವೆಚ್ಚವಾಗುತ್ತಿದೆ. ಹೀಗಾಗಿ ಶಿವಮೊಗ್ಗದಲ್ಲಿಯೇ ಇಂತಹ ಸೌಲಭ್ಯಗಳನ್ನು ಸ್ಥಾಪಿಸುವಂತೆ ಬೋಯಿಂಗ್ ಕಂಪನಿಯವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಶಿವಮೊಗ್ಗ ಭೌಗೋಳಿಕವಾಗಿ ರಾಜ್ಯದ ಮಧ್ಯಭಾಗದಲ್ಲಿದ್ದು, ವಿಮಾನ ನಿಲ್ದಾಣದ ಸಮೀಪ ಸಾಕಷ್ಟು ಜಾಗದ ಲಭ್ಯತೆಯಿದೆ. ನಗರದಲ್ಲಿ ಕಾರುಗಳ ಮಾರಾಟ ಕೇಂದ್ರಗಳಿದ್ದು, ಅವುಗಳ ಸರ್ವಿಸ್ ಸೆಂಟರ್ಗಳು ಬೇರೆಡೆ ಇರುವ ಮಾದರಿಯಲ್ಲಿ ಬೋಯಿಂಗ್ ಸಂಸ್ಥೆಯು ತನ್ನ ವಿಮಾನಗಳ ಸರ್ವಿಸ್ ಸೆಂಟರ್ ಅನ್ನು ಶಿವಮೊಗ್ಗದಲ್ಲಿ ಸ್ಥಾಪಿಸಿದರೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ಮತ್ತು ಸೌಲಭ್ಯಗಳನ್ನು ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದ್ದೇನೆ ಎಂದರು.
Shivamogga: ವಿಮಾನ ನಿಲ್ದಾಣದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನಗಳ ಇಳಿಯುವಿಕೆ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಈಗಾಗಲೇ 23 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಉಡಾನ್ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ವಿಮಾನಯಾನ ಸೇವೆಗಳ ಸ್ಥಗಿತದ ಕುರಿತು ಬಿಜೆಪಿ ನಾಯಕರು ಬಡವರ ಹಿತದ ಬಗ್ಗೆ ಮಾತನಾಡುವುದಷ್ಟೇ ಅಲ್ಲದೆ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಬೇಕು ಎಂದು ಹೇಳಿದರು.
Also Read>> ಶಿವಮೊಗ್ಗ | ಕಲಿತ ವಿದ್ಯೆಯನ್ನು ಸನ್ಮಾರ್ಗ ಮತ್ತು ಸತ್ಕರ್ಮಕ್ಕೆ ಬಳಸಿ: ಡಾ. ಧನಂಜಯ ಸರ್ಜಿ
ವಿಮಾನ ನಿಲ್ದಾಣದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೂ ಚರ್ಚೆ ನಡೆಸಿದ್ದೇನೆ. ಅವರೂ ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ಸೇವೆ ಮುಂದುವರಿಸುವಂತೆ ಮನವಿ ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಉಡಾನ್ ಯೋಜನೆಯಡಿ ದೊರೆಯುತ್ತಿದ್ದ ಸಹಾಯಧನ ಸ್ಥಗಿತಗೊಂಡಿರುವುದು ಹಾಗೂ ವಿಮಾನಗಳ ಹಾರಾಟ ಕಡಿಮೆಯಾಗಿರುವುದರಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಭವಿಷ್ಯದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಈ ನಡುವೆ ವಿಮಾನಗಳ ಸರ್ವಿಸ್ ಸೆಂಟರ್ ಸ್ಥಾಪನೆಯ ಪ್ರಸ್ತಾವನೆ ಹೊಸ ನಿರೀಕ್ಷೆ ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









