ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಶಿವಮೊಗ್ಗದ (Shimoga) ನಮ್ಮ ಕರ್ನಾಟಕ ಸಂಘವು ಈ ಬಾರಿಯ ಪ್ರತಿಷ್ಠಿತ ನವಿಲುಗರಿ ಪ್ರಶಸ್ತಿಗೆ ವಿದ್ವಾನ್ ಜಿ.ಎಸ್. ನಟೇಶ್ (GS Natesh) ಅವರನ್ನು ಆಯ್ಕೆ ಮಾಡಿರುವುದು ಅತ್ಯಂತ ಸಂತೋಷದ ಸಂಗತಿ. “ವಿದ್ಯಾ ದದಾತಿ ವಿನಯಂ”ಎಂಬ ಸುಭಾಷಿತಕ್ಕೆ ಜೀವಂತ ಉದಾಹರಣೆಯಂತಿರುವ ಇಂತಹ ವಿದ್ವಾಂಸರನ್ನು ಗುರುತಿಸಿ ಗೌರವಿಸುವುದು ಸಮಾಜದ ಸೌಜನ್ಯವೂ ಹೌದು, ಜವಾಬ್ದಾರಿಯೂ ಹೌದು. ಗುರುಗಳ ಸಾಧನೆಯನ್ನು ಗುರುತಿಸಿ ಗೌರವಿಸುವ ಈ ಸಂದರ್ಭ ಅವರ ಶಿಷ್ಯಳಾದ ನನ್ನ ಪಾಲಿಗೂ ಹೆಮ್ಮೆಯ ಕ್ಷಣವೇ ಸರಿ. ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ ನಮ್ಮ ಗುರುಗಳ ಕುರಿತಾಗಿ ಒಂದು ಲೇಖನ ಬರೆಯಬೇಕೆಂದು. ನವಿಲುಗರಿಯ ಈ ಗೌರವ ನನಗೊಂದು ಸುಸಂದರ್ಭವನ್ನು ಒದಗಿಸಿ ಕೊಟ್ಟಿದೆ. ಹಾಗಾಗಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಗೆ ಮೊದಲು ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ತಮ್ಮ ಸರಳತೆಯಿಂದಲೇ ಎಲ್ಲರ ಮನಸ್ಸಿನಲ್ಲಿ ಸ್ಥಾನ ಪಡೆಯುವಂತಹ, ಜ್ಞಾನ ಮತ್ತು ಸತತ ಅಧ್ಯಯನವನ್ನೇ ಸಮನ್ವಯಗೊಳಿಸಿಕೊಂಡಂತಹ ಅಪರೂಪದ ವ್ಯಕ್ತಿ ನಿಜಕ್ಕೂ ಅಪರೂಪ. ಅಂತಹ ಅಪರೂಪದ ವ್ಯಕ್ತಿತ್ವ ನಮ್ಮ ವಿದ್ವಾನ್ ಜಿ.ಎಸ್. ನಟೇಶ್ ಅವರು. ಅವರ ವಿಶೇಷತೆ ಏನೆಂದರೆ ಅವರ ಪರಿಚಯ ನಮ್ಮ ಬದುಕಿನಲ್ಲಿ ಕೇವಲ ಪರಿಚಯವಾಗಿ ಉಳಿಯದೆ ಅವರ ಮಾತು ನಡೆ-ನುಡಿ ಎಲ್ಲವೂ ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವಂತಹುದು. ನಾನು ಪಿಯುಸಿಯಲ್ಲಿ ಸಂಸ್ಕೃತವನ್ನು ಭಾಷೆಯಾಗಿ ಓದುತ್ತಿರುವಾಗ ನನಗೆ ಗುರುಗಳಾಗಿ ಬಂದವರು ವಿದ್ವಾನ್ ಜಿ.ಎಸ್. ನಟೇಶ್. ಅವರು ಕೇವಲ ಪಾಠವನ್ನು ಹೇಳಿಕೊಟ್ಟಿಲ್ಲ, ನಮ್ಮೊಳಗಿನ ಜ್ಞಾನದ ಕಿಡಿಯನ್ನು ಹೊತ್ತಿಸಿ, ಆಲೋಚನೆಗೆ ಹೊಸ ದಿಕ್ಕು ತೋರಿಸಿದವರು. ತಾವು ಕಲಿತದ್ದನ್ನು, ಅರಿತದ್ದನ್ನು ಮುಂದಿನವರಿಗೆ ಧಾರೆ ಎರೆದವರು. ಹಾಗಾಗಿಯೇ ಅವರ ವ್ಯಕ್ತಿತ್ವ ನನಗೆ ಸದಾ ವಿಶೇಷವೆನಿಸುತ್ತದೆ.
ನಿಜಕ್ಕೂ ಎಷ್ಟು ಸರಳವಾದಂತಹ ವ್ಯಕ್ತಿತ್ವ ಎಂದರೆ, ಅವರನ್ನು ಯಾರಾದರೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದರೆ, ಎಲ್ಲೋ ಒಂದು ಕಡೆ ತನಗೇನೂ ಗೊತ್ತಿಲ್ಲದವರ ಹಾಗೆ ಹಿಂದಿನ ಸಾಲಿನಲ್ಲಿ ಬಂದು ಕುಳಿತಿದ್ದಾಗ ಅವರನ್ನ ನೋಡಿದವರು, ಇವರೇನು ಮಹಾ ಹೇಳಬಲ್ಲರು ಎಂದು ಅಂದುಕೊಂಡದ್ದಿದೆ. ಆದರೆ ಅವರು ಉಪನ್ಯಾಸಕ್ಕಾಗಿ ವೇದಿಕೆಯ ಮೇಲೆ ಏರಿದಾಗಲೇ ನಮಗೆ ಆ ದೈತ್ಯ ಪ್ರತಿಭೆಯ ಅರಿವಾಗುವುದು. ಅಬ್ಬಾ ಅದೆಷ್ಟು ಜನರಿಗೆ ರೋಮಾಂಚನವಾಗಿದೆ. ತಾವು ನೋಡಿದ ಸಾಮಾನ್ಯ ವ್ಯಕ್ತಿ ಇವರೇನಾ ಎನಿಸುವಷ್ಟು. ಅವರ ಆ ಮಧುರ ಧ್ವನಿ, ಅಪಾರವಾದಂತಹ ವಿದ್ವತ್ತು, ತಮ್ಮ ಉಪನ್ಯಾಸದ ನಡು ನಡುವೆಯೇ ಹಾಸ್ಯದೊಂದಿಗೆ ತುಂಬ ಗಂಭೀರವಾದಂತಹ ವಿಷಯವನ್ನು ಹೇಳುವಂತಹ ಪರಿ ಎಲ್ಲವೂ ವಿಶೇಷವೇ ಸರಿ. ತರಗತಿಯಲ್ಲಿದ್ದಾಗಲೂ ಸಹ ಅವರು ಹೀಗೆಯೇ ಇದ್ದರು. ಅಪಾರವಾದಂತಹ ಶಿಷ್ಯ ವರ್ಗವನ್ನು ಹೊಂದಿದ ಅವರು ಅನೇಕರಿಗೆ ಮಾರ್ಗದರ್ಶನವನ್ನು ತೋರಿದವರು.
ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗವೆಂದರೆ ಕೇವಲ ಮುಕ್ತಕಗಳ ಸಂಗ್ರಹವಲ್ಲ; ಅದೊಂದು ಜೀವನದರ್ಶನ. ಬದುಕಿನ ಅನುಭವಗಳ ಸಾರ, ತಾತ್ವಿಕ ಚಿಂತನೆಗಳ ಆಳ, ಮಾನವೀಯ ಮೌಲ್ಯಗಳ ಅನಾವರಣ ಎಲ್ಲವೂ ಕಗ್ಗದ ಸಾಲುಗಳಲ್ಲಿ ಅಡಕವಾಗಿವೆ. ಇಂತಹ ಕಗ್ಗವನ್ನು ಓದುವುದು ಸುಲಭ. ಆದರೆ ಅದರ ಒಳಾರ್ಥವನ್ನು ಅರಿತು, ಮನನ ಮಾಡಿ, ನಮ್ಮ ಬದುಕಿಗೆ ಅನ್ವಯಿಸಿಕೊಳ್ಳುವುದು ಸುಲಭವಲ್ಲ. ಕಗ್ಗದ ಒಂದೊಂದು ಸಾಲಿನ ಹಿಂದಿರುವ ಅರ್ಥದ ಆಳವನ್ನು ಅರಿಯಲು ಅಧ್ಯಯನ ಬೇಕು, ತಾಳ್ಮೆ ಬೇಕು, ಚಿಂತನೆ ಬೇಕು. ಈ ಎಲ್ಲ ಗುಣಗಳನ್ನು ತಮ್ಮದಾಗಿಸಿಕೊಂಡಿರುವ ನಟೇಶ್ ಅವರು ಕಗ್ಗದ ಸಾರವನ್ನು ಜನಸಾಮಾನ್ಯರಿಗೆ ತಲುಪಿಸುತ್ತಿರುವ ರೀತಿ ಅನುಕರಣೀಯ.
ಒಂದು ಉತ್ತಮ ವಿಚಾರವನ್ನು ತಿಳಿದುಕೊಳ್ಳುವುದಕ್ಕಿಂತ ಅದನ್ನು ಮತ್ತೊಬ್ಬರಿಗೆ ಮನದಟ್ಟಾಗುವಂತೆ ತಿಳಿಸುವುದು ದೊಡ್ಡ ಕಲೆ. ಈ ಕಲೆಯಲ್ಲಿ ನಟೇಶ್ ಅವರು ಸಿದ್ಧಹಸ್ತರು. ಕಗ್ಗದ ಮೂಲಕ ಜೀವನದ ಪಾಠಗಳನ್ನು ಹೇಳುತ್ತಾ, ನಮ್ಮ ಆಲೋಚನೆಗಳಿಗೆ ಹೊಸ ಆಯಾಮವನ್ನು ನೀಡುತ್ತಾ ಸಾಗಿದ್ದಾರೆ. ಅವರ ಮಾತುಗಳನ್ನು ಕೇಳಿದಾಗ ಕಗ್ಗದ ಸಾಲುಗಳು ಕೇವಲ ಸಾಹಿತ್ಯದ ಸಾಲುಗಳಾಗಿ ಉಳಿಯದೆ ನಮ್ಮ ಬದುಕಿನ ಭಾಗವಾಗುತ್ತವೆ. ಅಂತಹ ಕಗ್ಗದ ಸವಿಯನ್ನು ಹಂಚುವ ಜ್ಞಾನೀವರೇಣ್ಯರು ನಮ್ಮ ನಟೇಶ್ ಅವರು. ಕಗ್ಗದ ಸಾಲುಗಳನ್ನು ಕೇವಲ ವಿವರಿಸುವುದಲ್ಲ, ಅದರೊಳಗಿನ ಬದುಕಿನ ಸತ್ಯಗಳನ್ನು ನಮ್ಮೆದುರು ತೆರೆದಿಡುವ ಅವರ ಪ್ರಯತ್ನ ಅನನ್ಯ. ಒಬ್ಬ ಗುರುವಾಗಿ ಅವರಿಂದ ಕಲಿಯುವ ಅವಕಾಶ ದೊರೆತಿರುವುದು ನನ್ನ ಪಾಲಿನ ಸಂತೋಷ ಮತ್ತು ಹೆಮ್ಮೆ.
ಅವರಲ್ಲಿ ನನಗೆ ಇಷ್ಟವಾಗುವ ಸಂಗತಿಯೆಂದರೆ ಅಪಾರವಾದ ಅಧ್ಯಯನದ ನಡುವೆಯೂ ಇರುವ ಸರಳತೆ. ವಿದ್ವತ್ತಿನ ಪ್ರದರ್ಶನಕ್ಕಿಂತ ಜ್ಞಾನದ ಹಂಚಿಕೆಗೆ ಮಹತ್ವ ನೀಡುವ ಅವರ ಗುಣ. ನಿರಂತರವಾಗಿ ಓದುತ್ತಾ, ಚಿಂತಿಸುತ್ತಾ, ಕಲಿಯುತ್ತಾ ಮತ್ತಷ್ಟು ಜನರಿಗೆ ಜ್ಞಾನವನ್ನು ತಲುಪಿಸಬೇಕೆಂಬ ಅವರ ಹಂಬಲ. ನಿಜವಾದ ವಿದ್ವಾಂಸರ ಲಕ್ಷಣವಲ್ಲದೇ ಮತ್ತಿನ್ನೇನು.
Shimoga : ಉಪನ್ಯಾಸಕನಾದವನ ಆದ್ಯ ಕರ್ತವ್ಯ
ಇಲ್ಲಿ ಹೇಳಲೇ ಬೇಕಾದ ಒಂದು ಪ್ರಮುಖವಾದ ಸಂಗತಿ ಎಂದರೆ ಎಲ್ಲೇ ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ ಸಹ ಸರಿಯಾದ ಸಮಯಕ್ಕೆ ಉಪನ್ಯಾಸವನ್ನು ಮುಗಿಸುವುದು. ನಮಗೆ ಕೊಟ್ಟಿರುವಂತಹ ಸಮಯದಲ್ಲಿ ನಮ್ಮ ಮಾತುಗಳನ್ನು ಮುಗಿಸುವುದು, ಅಲ್ಲದೆ ಕೇಳುಗ ಮತ್ತೆ ಮತ್ತೆ ಕೇಳಬೇಕೆನ್ನುವಷ್ಟರಲ್ಲಿಯೇ ಮಾತುಗಳನ್ನು ಮುಕ್ತಾಯಗೊಳಿಸುವುದು ಉಪನ್ಯಾಸಕನಾದವನ ಆದ್ಯ ಕರ್ತವ್ಯ. ಸುಮ್ಮನೆ ಯಾರೋ ಕೇಳುತ್ತಾರೆಂದು ಗಂಟೆಗಟ್ಟಲೆ ಹೇಳುವುದಲ್ಲ ಹಾಗೂ ನಮಗೆ ತಿಳಿದಿದೆ ಎಂದೂ ಸಹ ಮಾತನಾಡುವುದಿಲ್ಲ. ಕೇಳುಗನ ಮನವರಿತು, ಆಯೋಜಕರ ಆಶಯವರಿತು ಮಾತನಾಡುವುದು, ಸಮಯ ಪರಿಪಾಲನೆ ಎಲ್ಲವನ್ನು ನಾನು ಮೈಗೂಡಿಸಿಕೊಂಡಿದ್ದು ನಮ್ಮ ಗುರುಗಳಿಂದಲೇ. ಅವರ ಜೀವನ ಪ್ರೀತಿ, ಅವರು ಸೈಕಲ್ ಏರಿ ಇಲ್ಲೆಲ್ಲ ಓಡಾಡುವಾಗ ಅವರ ಆ ಸರಳತೆ, ಒಂದು ಕಾಫಿಯನ್ನು ಕೊಟ್ಟರೆ ಅದನ್ನು ಸವಿಯುವ ರೀತಿ, ಮನೆಯಲ್ಲಿಯೇ ತಾವು ಬೆಳೆದ ಹಣ್ಣುಗಳನ್ನು ಹಂಚಿ ತಿನ್ನುವ ಮನೋಭಾವ, ಎಲ್ಲೇ ಹೋದರು ಸಹ ಪ್ರೀತಿಯಿಂದ ಅವರು ಮಾತನಾಡಿಸುವಂತಹ ರೀತಿ ಈ ಎಲ್ಲವೂ ನನ್ನನ್ನು ಸೆಳೆದಂತಹ ಅಂಶಗಳು. ಕಳೆದ ಬಾರಿ ಶ್ರೀ ಗಜಾನನ ಶರ್ಮ ಅವರಿಗೆ ನವಿಲುಗರಿ ಪ್ರಶಸ್ತಿ ಬಂದಾಗ ಅಭಿನಂದನ ನುಡಿಗಳನ್ನು ಆಡಿ ಸೈ ಎನಿಸಿಕೊಂಡವರು ನಮ್ಮ ನಟೇಶ್ ಅವರು. ಈ ಬಾರಿ ಅವರ ಮುಡಿಗೇ ಈ ಗರಿ ಏರಿರುವುದು, ಅವರ ಅನೇಕ ಅಭಿಮಾನಿಗಳಿಗೆ ಸಂತಸ ಉಂಟು ಮಾಡಿದೆ.
ಪ್ರಶಸ್ತಿ ಎನ್ನುವುದು ಒಬ್ಬ ವ್ಯಕ್ತಿಯ ಸಾಧನೆಗೆ ನೀಡುವ ಗೌರವ ಮಾತ್ರವಲ್ಲ; ಅವರು ನಡೆಸಿಕೊಂಡು ಬಂದ ಜ್ಞಾನಯಾತ್ರೆಗೆ ಸಮಾಜ ಸಲ್ಲಿಸುವ ಕೃತಜ್ಞತೆಯೂ ಹೌದು. ನಟೇಶ್ ಅವರ ಜ್ಞಾನಸೇವೆ ಇನ್ನಷ್ಟು ವಿಸ್ತಾರಗೊಂಡು ಕಗ್ಗದ ಚಿಂತನೆಗಳು ಇನ್ನಷ್ಟು ಮನಸ್ಸುಗಳನ್ನು ತಲುಪುವಂತಾಗಲಿ. ಗುರುಗಳೇ, ನಿಮ್ಮಿಂದ ಕಲಿತದ್ದು ಕೇವಲ ವಿಷಯವಲ್ಲ; ಜ್ಞಾನವನ್ನು ಪ್ರೀತಿಸುವ, ಅಧ್ಯಯನವನ್ನು ನಿರಂತರವಾಗಿರಿಸಿಕೊಳ್ಳುವ ಮತ್ತು ತಿಳಿದದ್ದನ್ನು ಇತರರೊಂದಿಗೆ ಹಂಚಿಕೊಳ್ಳುವ ಮನೋಭಾವವೂ ಹೌದು. ಕಗ್ಗದ ಸವಿಯನ್ನು ತಾವು ಸವಿದು ನಿಲ್ಲದೆ, ಆ ಸವಿಯನ್ನು ನಾಡಿನ ಜನರಿಗೂ ಉಣಬಡಿಸುತ್ತಿರುವ ನಟೇಶ್ ಅವರಿಗೆ ನವಿಲುಗರಿ ಪ್ರಶಸ್ತಿಗೆ ಮತ್ತೊಮ್ಮೆ ಅಭಿನಂದನೆಗಳು. ಗುರುಗಳ ಸಾಧನೆಗೆ ಶಿಷ್ಯೆಯ ಅಭಿನಂದನೆಗಳು ಎಂಬುದಕ್ಕಿಂತ, ಗುರುಗಳ ಸಾಧನೆಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಶಿಷ್ಯೆಯ ಸಂತೋಷ ಕೂಡ ಇದು. ನಿಮಗೆ ನವಿಲುಗರಿ ಪ್ರಶಸ್ತಿ ಸಂದಿರುವ ಈ ಸುಸಂದರ್ಭದಲ್ಲಿ ಹೃದಯಪೂರ್ವಕ ಅಭಿನಂದನೆಗಳು ಗುರುಗಳೇ.
ಆದಿಶಂಕರರ ವಿವೇಕ ಚೂಡಾಮಣಿಯಲ್ಲಿ ಬರುವಂತಹ ಈ ಶ್ಲೋಕ-
ದುರ್ಲಭಂ ತ್ರಯಮೇವೈತತ್ ದೇವಾನುಗ್ರಹಹೇತುಕಮ್ ।
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ ॥
ಅಂದರೆ ಮನುಷ್ಯಜನ್ಮ ದೊರೆಯುವುದು ಒಂದು ಅದೃಷ್ಟ. ಆ ಜನ್ಮದಲ್ಲಿ ಕೇವಲ ಲೌಕಿಕ ಸುಖಗಳ ಹಿಂದೆ ಓಡದೆ, ಆತ್ಮಜ್ಞಾನವನ್ನು ಪಡೆಯುವ ಆಸಕ್ತಿ ಮೂಡುವುದು ಮತ್ತೊಂದು ಭಾಗ್ಯ. ಅಂಥ ಜ್ಞಾನಮಾರ್ಗದಲ್ಲಿ ಮುನ್ನಡೆಸುವ ಸದ್ಗುರುಗಳ ಸಂಪರ್ಕ ದೊರೆಯುವುದು ಅದಕಿಂತಲೂ ದೊಡ್ಡ ಭಾಗ್ಯ. ಆದ್ದರಿಂದ ಈ ಮೂರೂ ದೈವಾನುಗ್ರಹದಿಂದ ದೊರೆಯುವ ಅಪರೂಪದ ಸಂಪತ್ತುಗಳಾಗಿವೆ. ಹಾಗಾಗಿ ವಿದ್ವಾನ್ ಜಿ ಎಸ್ ನಟೇಶ್ ಅವರು ನನಗೆ ಗುರುಗಳಾಗಿ ದೊರೆತಿರುವುದು ಅದು ದೈವಾನುಗ್ರಹವೇ ಸರಿ. ನಿಮ್ಮ ಜ್ಞಾನಪ್ರಸರಣದ ಪಯಣ ಹೀಗೆಯೇ ನಿರಂತರವಾಗಿರಲಿ. ನಿಮ್ಮ ಮಾರ್ಗದರ್ಶನದ ಬೆಳಕು ಇನ್ನಷ್ಟು ಜನರ ಬದುಕನ್ನು ಬೆಳಗಿಸಲಿ.
ನವೆಂಬರ್ 20 ರ ಶುಕ್ರವಾರ, ಸಂಜೆ 5.30ಕ್ಕೆ ಕರ್ನಾಟಕ ಸಂಘದಲ್ಲಿ ನಡೆಯುವ ಈ ಸಮಾರಂಭಕ್ಕೆ ತಾವೆಲ್ಲರೂ ಬರಬೇಕು ಹಾಗೂ ಕಾರ್ಯಕ್ರಮ ಚಂದಗಾಣಿಸಬೇಕೆಂಬ ಅಪೇಕ್ಷೆ ನನ್ನದು…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







