ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಅಸೂಯೆ ಇರಬಾರದು. ಸ್ಪರ್ಧೆಯು ಕ್ರೀಡಾ ಮನೋಭಾವ, ಪರಸ್ಪರ ಗೌರವ ಹಾಗೂ ಇತರರ ಗೆಲುವನ್ನು ಸಂಭ್ರಮಿಸುವ ಮನಸ್ಥಿತಿಯನ್ನು ಬೆಳೆಸಬೇಕು. ಹವ್ಯಕ ಮಹಾಸಭೆಯ ‘ಪ್ರತಿಬಿಂಬ’ ಕಾರ್ಯಕ್ರಮದಲ್ಲಿ ಇಂತಹ ಆರೋಗ್ಯಕರ ಸ್ಪರ್ಧಾ ಮನೋಭಾವ ಮತ್ತು ಪ್ರತಿಭೆಗಳನ್ನು ಗೌರವಿಸುವ ಸಹಜತೆ ಇರುವುದು ಸಮಾಜದ ಹೆಮ್ಮೆಯ ಸಂಗತಿ ಎಂದು ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು. ಬೆಂಗಳೂರಿನ (Bengaluru) ಮಲ್ಲೇಶ್ವರದ ಹವ್ಯಕ ಭವನದಲ್ಲಿ ಆಯೋಜಿಸಿದ್ದ ‘ಪ್ರತಿಬಿಂಬ ಗ್ರ್ಯಾಂಡ್ ಫಿನಾಲೆ’ಯ (Pratibimba Grand Finale) ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
31 ವರ್ಷಗಳ ಹಿಂದೆ ಆರಂಭವಾದ ಪ್ರತಿಬಿಂಬ ಸ್ಪರ್ಧಾ ಸೌರಭವು ಅಂದಿನಿಂದ ಇಂದಿನವರೆಗೆ ಸಮಾಜದ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುತ್ತಾ ಬಂದಿದೆ. ಈ ವರ್ಷ ರಾಜ್ಯ ಹಾಗೂ ಹೊರರಾಜ್ಯಗಳ ಒಟ್ಟು 13 ಪ್ರಾಂತ್ಯಗಳಲ್ಲಿ ಪ್ರತಿಬಿಂಬ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಮಾಜದಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.
Bengaluru: ಡಿ. 20ರಂದು ಬೃಹತ್ ಮಾತೃಸಂಗಮ
ಮಹಿಳೆಯರಿಗೆ ಗೌರವ ಸಲ್ಲಿಸಿ, ಅವರ ಸಾಧನೆ ಹಾಗೂ ಸಂಘಟನಾ ಶಕ್ತಿಯನ್ನು ಸಂಭ್ರಮಿಸುವ ಉದ್ದೇಶದಿಂದ ಡಿಸೆಂಬರ್ 20ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ‘ಮಾತೃಸಂಗಮ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಾ. ಗಿರಿಧರ ಕಜೆ ತಿಳಿಸಿದರು.
ಈಗಾಗಲೇ 115 ಪ್ರಾಂತ್ಯಗಳಲ್ಲಿ ಹವ್ಯಕ ಮಹಿಳಾ ವೇದಿಕೆಗಳನ್ನು ಸಂಘಟಿಸಲಾಗಿದೆ. ಡಿಸೆಂಬರ್ 20ರೊಳಗೆ ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಲ್ಲಿ ಒಟ್ಟು 150 ಹವ್ಯಕ ಮಹಿಳಾ ವೇದಿಕೆಗಳನ್ನು ಉದ್ಘಾಟಿಸುವ ಗುರಿ ಹೊಂದಲಾಗಿದೆ. ಈ ಮೂಲಕ 2,000ಕ್ಕೂ ಅಧಿಕ ಮಹಿಳಾ ಪದಾಧಿಕಾರಿಗಳು ಸಮಾಜದ ಸಂಘಟನಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ಹವ್ಯಕ ಮಹಾಸಭೆಯಲ್ಲಿ ಹಿಂದಿನಿಂದಲೂ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. 1950 ಮತ್ತು 1960ರ ದಶಕದ ಆರಂಭದಲ್ಲಿಯೇ ಮಹಿಳೆಯರು ಮಹಾಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಡಿಜಿಟಲ್ ಡಿಟಾಕ್ಸ್ಗೂ ಸಹಕಾರಿ ಪ್ರತಿಬಿಂಬ
ಜಿ.ಎಸ್.ಟಿ. ಉಪ ಆಯುಕ್ತೆ ಸಹನಾ ಬಾಳ್ಕಲ್ ಮಾತನಾಡಿ, ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮನೋಬಲ ವೃದ್ಧಿಯಾಗುತ್ತದೆ. ಸ್ಪರ್ಧೆಗಳು ಸಂಘಟನಾ ಸಾಮರ್ಥ್ಯ ಮತ್ತು ಸ್ಪರ್ಧಾ ಮನೋಭಾವ ಬೆಳೆಸುವುದರ ಜತೆಗೆ ಸುಂದರ ನೆನಪುಗಳು ಹಾಗೂ ಜೀವನಾನುಭವಗಳನ್ನು ನೀಡುತ್ತವೆ. ಇಂದಿನ ಡಿಜಿಟಲ್ ಯುಗದಲ್ಲಿ ‘ಪ್ರತಿಬಿಂಬ’ದಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿದ್ದು, ಡಿಜಿಟಲ್ ಡಿಟಾಕ್ಸ್ಗೂ ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಇಸ್ರೋದ ನಿವೃತ್ತ ವಿಜ್ಞಾನಿ ಪಿ.ಜೆ. ಭಟ್ ಮಾತನಾಡಿ, ಹವ್ಯಕ ಮಹಾಸಭೆಯು ಹಲವು ಸಂಘಟನಾತ್ಮಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ಎರಡು ವಿಶ್ವ ಹವ್ಯಕ ಸಮ್ಮೇಳನಗಳು ಹವ್ಯಕ ಸಮಾಜಕ್ಕೆ ನಾಡಿನಲ್ಲಿ ವಿಶೇಷ ಮಾನ್ಯತೆ ತಂದುಕೊಟ್ಟಿವೆ ಎಂದರು.
ಉದ್ಯಮಿ ಆನಂದ ಭಟ್ ಮಾತನಾಡಿ, ಸೂಕ್ತ ಅವಕಾಶಗಳಿಲ್ಲದೆ ಅನೇಕ ಪ್ರತಿಭೆಗಳು ಮುದುಡಿಹೋಗುವುದನ್ನು ಕಾಣಬಹುದು. ಆದರೆ ಪ್ರತಿಬಿಂಬದಂತಹ ಕಾರ್ಯಕ್ರಮಗಳು ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿವೆ. ಪ್ರತಿಭೆಯನ್ನು ಹೊರತರಲು ಹಾಗೂ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಉತ್ತಮ ಅವಕಾಶವಾಗಿವೆ. ನಮ್ಮ ಜನಸಂಖ್ಯೆ ಕಡಿಮೆಯಿದ್ದರೂ ಎಲ್ಲ ಕ್ಷೇತ್ರಗಳಲ್ಲೂ ನಮ್ಮದೇ ಆದ ಛಾಪು ಮೂಡಿಸಿರುವುದು ಸಮಾಜದ ಹೆಮ್ಮೆಯ ಸಂಗತಿ ಎಂದರು.
Also Read>> ‘ಬೊಗಳುವುದು ನಾಯಿ, ಒದರುವುದು ಕತ್ತೆ’ | ಮಧು ಬಂಗಾರಪ್ಪ ವಿರುದ್ಧ ಹರಿಹಾಯ್ದ ಹರತಾಳು ಹಾಲಪ್ಪ
13 ಪ್ರಾಂತ್ಯಗಳ ವಿಜೇತರಿಗೆ ಗ್ರ್ಯಾಂಡ್ ಫಿನಾಲೆ
ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು, ಗೋವಾ ಹಾಗೂ ಮುಂಬೈ ಸೇರಿದಂತೆ ವಿವಿಧ ಪ್ರಾಂತ್ಯಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಗ್ರ್ಯಾಂಡ್ ಫಿನಾಲೆ ಆಯೋಜಿಸಲಾಗಿತ್ತು. ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ವಿಜೇತರಾದವರು ಅಂತಿಮ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಬೆಂಗಳೂರಿನ 25 ಮಹಿಳಾ ವೇದಿಕೆಗಳ ಉದ್ಘಾಟನೆ
ಕಾರ್ಯಕ್ರಮಕ್ಕೂ ಮುನ್ನ ಬೆಂಗಳೂರಿನ ವಿವಿಧ 25 ಪ್ರಾಂತ್ಯಗಳ ಹವ್ಯಕ ಮಹಿಳಾ ವೇದಿಕೆಗಳನ್ನು ಉದ್ಘಾಟಿಸಲಾಯಿತು. ಡಾ. ಶಾರದಾ ಜಯಗೋವಿಂದ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಅವರು ವೇದಿಕೆಗಳನ್ನು ಉದ್ಘಾಟಿಸಿ ಮಹಿಳಾ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಜೆ. ಭಟ್ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಭಟ್ ಮಲವಳ್ಳಿ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ, ಪ್ರತಿಬಿಂಬ ಸಂಚಾಲಕ ದೀಪಕ ಹೆಗಡೆ ಗೋಳಿಕೈ, ಮಹಿಳಾ ವೇದಿಕೆ ಸಂಚಾಲಕಿ ಮಧುರಾ ಗಾಂವ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









