ಸೊರಬ: ಹಬ್ಬದ ಸಂದರ್ಭಗಳಲ್ಲಿ ಗೊಂದಲಗಳನ್ನು ಸೃಷ್ಟಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷೀಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೊರಬ ಪಿಎಸ್‌ಐ ಮಂಜುನಾಥ ಕುಪ್ಪೆಲೂರ್ ಎಚ್ಚರಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ರಮ್ಝಾನ್ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಹಬ್ಬದ ಸಂದರ್ಭಗಳಲ್ಲಿ ಹೊರಗಿನ ಜನರನ್ನು ಕರೆತಂದು ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿಸಬಾರದು ಅಶಾಂತಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಸಾಮಾಜಿಕ ಜಾಲತಾಣಗಳಿಂದ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಅಪ್ರಾಪ್ತ ವಯಸ್ಸಿನ ಯುವಕರು ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂತಹ ಯುವಕರ ಮೇಲೆ ಪೊಲೀಸರು ಕಣ್ಗಾವಲಾಗಿದ್ದಾರೆ. ತಂದೆ-ತಾಯಂದಿರು ತಮ್ಮ ಮಕ್ಕಳ ಚಲನ-ವಲನಗಳ ಮೇಲೆ ನಿಗಾವಹಿಸಬೇಕು. ಸಮಾಜದ ಪ್ರಮುಖರು ಪೊಲೀಸರೊಂದಿಗೆ ಸಹಕಾರ ನೀಡಬೇಕು. ತಮ್ಮ ತಮ್ಮ ವ್ಯಾಪ್ತಿಗಳಲ್ಲಿ ಸಣ ಪುಟ್ಟ ಅಹಿತಕರ ಘಟನೆಗಳು ನಡೆದದ್ದು ಕಂಡುಬಂದರೆ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು. ಆಗ ಸಣ್ಣ ಪ್ರಮಾಣದಲ್ಲಿಯೇ ಅಂತಹ ಘಟನೆಗಳಿಗೆ ಕಡಿವಾಣ ಹಾಕಬಹುದಾಗಿದೆ. ತಾಲೂಕಿನಲ್ಲಿ ಇದುವರೆಗೂ ಹಿಂದು ಮುಸ್ಲೀಮ್‌ರ ಮಧ್ಯದಲ್ಲಿ ಯಾವುದೇ ಕಲಹಗಳು ನಡೆದಿರುವುದಿಲ್ಲ. ಎಲ್ಲಾ ಕೋಮಿನವರೂ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಅನ್ಯೋನ್ಯವಾಗಿದ್ದಾರೆ ಎಂದರು.
ಸೊರಬ ಠಾಣಾ ವ್ಯಾಪ್ತಿಗೆ ನೂರಾಎಂಬತ್ತು ಗ್ರಾಮಗಳು ಬರುತ್ತವೆ. ಸೀಮಿತ ಸಿಬ್ಬಂದಿಗಳೊಂದಿಗೆ ಕರ್ತವ್ಯ ನಿರ್ವಹಿಸಬೇಕಿದೆ. ಇದಕ್ಕೆ ಎಲ್ಲಾ ಸಮಾಜದವರು ಸಹಕಾರ ನೀಡಬೇಕು. ಸೊರಬ ಶಾಂತಿ ಪ್ರಿಯ ಪಟ್ಟಣವಾದರೂ ಸಹ ಇಲಾಖಾಧಿಕಾರಿಯಾಗಿ ಹಬ್ಬವನ್ನು ಶಾತಿಯುತವಾಗಿ ಆಚರಿಸಲು ಸೂಕ್ತ ಬಂದೋಬಸ್‌ತ್ ಮಾಡಲಾಗಿದೆ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜೆ.ಶಿವಾನಂದಪ್ಪ, ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ಜಾಮಿಯ ಮಸೀದಿ ಅಧ್ಯಕ್ಷ ಎಂ.ಬಶೀರ್ ಅಹಮದ್, ಪೀರ್‌ಸಾಬ್, ರಿಝ್ವಾನ್, ವಿರೇಶ್ ಮೇಸ್ತ್ರಿ, ಪ.ಪಂ ಸದಸ್ಯರಾದ ಮಂಚಿ ಹನುಮಂತಪ್ಪ, ಮಹೇಶ ಗೌಳಿ, ಹನೀಫ್ ಮುಟಗುಪ್ಪೆ, ತಾಪಂ ಸದಸ್ಯ ನಾಗರಾಜ್ ಚಿಕ್ಕಸವಿ, ಎಸ್.ಬಿ.ಹಸನ್, ಲಕ್ಷಣಪ್ಪ ಕೊಡಕಣಿ, ಅಮ್ಜದ್ ಪಾಶಾ, ಆರೀಫ್ ಇಕ್ಬಾಲ್, ಮುಹಮದ್ ಜಾಪರ್ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)
Discussion about this post