ನವದೆಹಲಿ: ಯಾವುದೇ ರೀತಿಯ ನಿಯಂತ್ರಣಕ್ಕೆ ಸಿಗದಂತೆ ಭಾರತೀಯ ಸೇನೆಗೆ ಹಾಗೂ ಜಮ್ಮು ಕಾಶ್ಮೀರದ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿರುವ ಪ್ರತ್ಯೇಕತಾವಾದಿಗಳು ಹಾಗೂ ದೇಶದ ಶತ್ರುಗಳಗೆ ಇನ್ನು ಅಲ್ಲಿ ಉಳಿಗಾಲವಿಲ್ಲ…
ಹೌದು… ಆ ವ್ಯಕ್ತಿ ದಕ್ಷಿಣ ಭಾರತವನ್ನೇ ನಡುಗಿಸಿ, 35 ವರ್ಷಗಳ ಕಾಲ ಮೂರು ರಾಜ್ಯಗಳಿಗೆ ತಲೆ ನೋವಾಗಿ ಪರಿಣಮಿಸಿ, ಇನ್ನಿಲ್ಲದಂತೆ ಕಾಡಿದ್ದ ನರಹಂತಕ, ದಂತಚೋರ ವೀರಪ್ಪನ್ ನನ್ನು ತಮ್ಮ ಬುದ್ದಿವಂತಿಕೆಯಿಂದ ಹೊಡೆದುರುಳಿಸಿದ ದಕ್ಷ ಹಾಗೂ ಚಾಣಾಕ್ಷ ಅಧಿಕಾರಿ ಕೆ. ವಿಜಯಕುಮಾರ್.

ಇಂತಹ ಅಧಿಕಾರಿ ಈಗ ನಿವೃತ್ತಿಯಾಗಿದ್ದಾರೆ. ಆದರೆ, ಇಂತಹ ಅಧಿಕಾರಿಯನ್ನು ಮೋದಿ ಸರ್ಕಾರ ಈಗ ಜಮ್ಮು ಕಾಶ್ಮೀರ ರಾಜ್ಯಪಾಲರ ಸಲಹೆಗಾರರನ್ನಾಗಿ ನೇಮಿಸಿದ್ದು, ಇವರೊಂದಿಗೆ ಚಾಣಾಕ್ಷ ಅಧಿಕಾರಿ ಬಿ.ಬಿ. ವ್ಯಾಸ್ ಅವರನ್ನೂ ಸಹ ನೇಮಿಸಿದೆ.

ವಿಜಯ್ ಕುಮಾರ್ ಅವರ ಬುದ್ದಿವಂತಿಕಗೆ ಹಾಗೂ ಸೇವೆಯನ್ನು ಪರಿಗಣಿಸಿದ್ದ ಮೋದಿ ಸರ್ಕಾರ ಅವರನ್ನು ಕೇಂದ್ರ ಗೃಹ ಸಚಿವಾಲಯದಲ್ಲಿ ಹಿರಿಯ ಭದ್ರತಾ ಸಲಹೆಗಾರರಗಾಗಿ ಸೇವೆ ಸಲ್ಲಿಸಿಕೊಂಡಿತ್ತು.
ಕಣಿವೆ ರಾಜ್ಯದಲ್ಲಿ ಬಿಜೆಪಿ-ಪಿಡಿಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ಎರಡೂ ಪಕ್ಷಗಳ ನಡುವೆ ಆಂತರಿಕ ಭಿನ್ನಾಭಿಪ್ರಾಯಿವಿತ್ತು. ಅತ್ಯಂತ ಪ್ರಮುಖವಾಗಿ, ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರ ವಿಚಾರದಲ್ಲಿ ಮೃದು ಧೋರಣೆ ಹೊಂದಿರುವ ಮುಫ್ತಿ ಬಗ್ಗೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ, ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರ ಬಗ್ಗೆ ಬಿಜೆಪಿ ತಳೆದ ಬಿಗಿ ನಿಲುವು ಮುಫ್ತಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿತ್ತು.

ಈ ಹಿನ್ನೆಲೆಯಲ್ಲಿ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮೊಹಬೂಬಾ ರಾಜೀನಾಮೆ ನೀಡುವ ಮೂಲಕ ಸರ್ಕಾರ ಅಸ್ಥಿತ್ವ ಕಳೆದುಕೊಂಡಿತ್ತು. ಇದಾದ 24 ಗಂಟೆಯೊಳಗೇ ರಾಜ್ಯಪಾಲರ ಆಡಳಿತ ಜಾರಿಯಾಗಿದೆ.
ರಂಜಾನ್ ಮುಗಿದೊಡನೆಯೇ ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ಬೇಟೆಯಾಡುವ ಸೇನಾ ಕಾರ್ಯಾಚರಣೆಯನ್ನು ಪುನರಾರಂಭಿಸುವ ಕೇಂದ್ರ ಸರ್ಕಾರದ ನಿರ್ಧಾರ ಪಿಡಿಪಿ ಮುಖ್ಯಸ್ಥೆ ಮತ್ತು ಸಿಎಂ ಮೆಹಬೂಬ ಮುಫ್ತಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಇಂತಹ ನಿರ್ಧಾರಕ್ಕೆ ಬಂದಿತ್ತು. ಈಗ ಪ್ರಸ್ತುತ ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಲ್ಲಿದೆ. ಅಂದರೆ, ಕೇಂದ್ರ ಸರ್ಕಾರದ ನಿಯಂತ್ರಣವಿದೆ.

ಈ ಬೆಳವಣಿಗೆಗಳ ನಡುವೆಯೇ, ನಿನ್ನೆ ಗೃಹಸಚಿವರ ನಿವಾಸದಲ್ಲಿ ತುರ್ತು ಸಭೆ ನಡೆಸಲಾಗಿತ್ತು. ಇದರಲ್ಲಿ ಮಾಸ್ಟರ್ ಮೈಂಡ್ ಎಂದೇ ಖ್ಯಾತರಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಪಾಲ್ಗೊಂಡಿದ್ದರು. ಈ ಸಭೆಯ ನಂತರ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದ್ದು, ವಿಜಯ್ ಕುಮಾರ್ ಅವರನ್ನು ನೇಮಕ ಮಾಡಿರುವುದು ಕುತೂಹಲಕಾರಿ ಬೆಳವಣಿಗೆಯಾಗಿದೆ.


















