ನವದೆಹಲಿ: ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ವಿಚಾರಿಸಲು ನಿನ್ನೆ ರಾತ್ರಿ ಏಕಾಏಕಿ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಿಲ್ಲದೇ ತೆರಳಿದ್ದಾರೆ ಎನ್ನಲಾಗಿದೆ.
ಭದ್ರತಾ ನಿಯಮಗಳನ್ನು ಮೀರಿ ಮೋದಿ ನೇರವಾಗಿ ಏಮ್ಸ್ ಆಸ್ಪತ್ರೆಗೆ ತೆರಳಿದ್ದು, ಯಾವುದೇ ರೀತಿಯ ಪೂರ್ವ ಮಾಹಿತಿ ನೀಡಿರಲಿಲ್ಲ ಎಂದು ತಿಳಿದುಬಂದಿದೆ. ಇನ್ನು, ಆಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೂ ಸಹ ಮೋದಿಯವರು ಆಸ್ಪತ್ರೆಗೆ ಆಗಮಿಸಿ ನಂತರವಷ್ಟೇ ತಿಳಿದಿದೆ ಎಂದು ವರದಿಯಾಗಿದೆ.
ತಮ್ಮ ಅಧಿಕೃತ ನಿವಾಸ 7 ಲೋಕ ಕಲ್ಯಾಣ ಮಾರ್ಗ್ ನಿಂದ ಏಮ್ಸ್ ವರೆಗೂ ಟ್ರಾಫಿಕ್ ನಿಯಮಗಳನ್ನು ಪಾಲಿಸಿ, ಎಲ್ಲಿ ಸಿಗ್ನಲ್‌ಗಳಲ್ಲಿ ವಾಹನ ನಿಲ್ಲಿಸಿ ಮೋದಿ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಸುಮಾರು 45 ನಿಮಿಷಗಳ ಕಾಲ ಇದ್ದ ಪ್ರಧಾನಿ, ವಾಜಪೇಯಿ ಅವರ ಆರೋಗ್ಯ ಕುರಿತಾಗಿ ಮಾಹಿತಿ ಪಡೆದರು.
ಕಳೆದ ಎರಡು ದಿನಗಳಿಂದ ವಾಜಪೇಯಿ ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ. 93 ವರ್ಷ ವಾಜಪೇಯಿ, ಕಿಡ್ನಿ ಟ್ರಾಕ್ ಇನ್ಫೆಕ್ಷನ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
















