ತಿರುವನಂತಪುರಂ: ಉತ್ತರ ಕೇರಳದ ಮದರಸಾವೊಂದರಲ್ಲಿ ಕಲಿಯುತ್ತಿದ್ದ 5ನೆಯ ತರಗತಿ ಬಾಲೆಯನ್ನು ಆಕೆ ಶ್ರೀಗಂಧದ ಬಿಂದಿ ಇಟ್ಟಳು ಎಂಬ ಕ್ಷುಲ್ಲಕ ಕಾರಣಕ್ಕಾಗಿ ಆಕೆಯನ್ನು ಮದರಸಾದಿಂದ ಹೊರ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.
ಈ ಕುರಿತಂತೆ ಬಾಲಕಿಯ ತಂದೆ ಆಕ್ರೋಶಭರಿತರಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ಬಹಳಷ್ಟು ವೈರಲ್ ಆಗಿದೆ.
ಬಾಲಕಿಯ ತಂದೆ ಉಮರ್ ಮಲಯಿಲ್ ಮಾಹಿತಿ ಹಂಚಿಕೊಂಡಿರುವಂತೆ, ನಟನೆಯ ಅಸೈನ್‌ಮೆಂಟ್‌ನ ಭಾಗವಾಗಿ ಆಕೆ ತನ್ನ ಹಣೆಗೆ ಶ್ರೀಗಂಧದ ಬಿಂದಿಯನ್ನು ಹಚ್ಚಿಕೊಂಡಿದ್ದಾಳೆ. ಆದರೆ, ಈ ಕಾರಣಕ್ಕಾಗಿ ಆಕೆಯನ್ನು ಮದರಸಾದಿಂದ ಹೊರ ಹಾಕಲಾಗಿದೆ ಎಂದು ಕಿಡಿ ಕಾರಿದ್ದಾರೆ.
ತಮ್ಮ ಮಗಳು ಶಿಕ್ಷಣ ಹಾಗೂ ಶಿಕ್ಷಣೇತರ ಚಟುವಟಿಕೆಗಳಲ್ಲೂ ಸಹ ಮುಂದಿದ್ದಾಳೆ. ತೀರಾ ಚೂಟಿಯಾಗಿರುವ ತಮ್ಮ ಮಗಳನ್ನು ಕ್ಷುಲ್ಲಕ ಕಾರಣದ ನೆಪವೊಡ್ಡಿ ಮದರಸಾದಿಂದ ಹೊರ ಹಾಕಲಾಗಿದೆ ಎಂದು ಆರೋಪಿಸಿರುವ ಉಮರ್, ಮದರಸಾದಿಂದ ಹೊರ ಹಾಕಲು ಅವರು ನೀಡಿದ ಕಾರಣ ಕೇಳಿ ತಮಗೆ ಆಘಾತವಾಗಿದೆ ಎಂದಿದ್ದಾರೆ.
ತಮ್ಮ ಮಗಳು ಶಿಕ್ಷಣ, ಶಿಕ್ಷಣೇತರ ಚಟುವಟಿಕೆ, ಗಾಯನ ಹಾಗೂ ನೃತ್ಯದಲ್ಲೂ ಸಹ ಉತ್ತಮ ಪ್ರತಿಭೆ ಹೊಂದಿದ್ದು, ಇದಕ್ಕಾಗಿ ಆಕೆ ಬಹಳಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾಳೆ ಎಂದಿದ್ದಾರೆ.
ಉಮರ್ ಹಾಕಿರುವ ಈ ಪೋಸ್‌ಟ್ ಈಗ ಬಹಳಷ್ಟು ವೈರಲ್ ಆಗಿದ್ದು, ಮದರಸಾ ಕೈಗೊಂಡಿರುವ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉಮರ್ ಹಾಗೂ ಬಾಲಕಿಗೆ ವ್ಯಾಪಕ ಬೆಂಬಲವೂ ದೊರೆತಿದೆ.
Discussion about this post